ಕರಾವಳಿ ಟಾಪ್ ನ್ಯೂಸ್
ಗ್ಯಾಸ್ ಸಿಲಿಂಡರ್ ಸ್ಫೋಟ: 3 ಮಕ್ಕಳು ಪಾರು!
– ಉಲ್ಲಾಳ: ಮಂಜನಾಡಿಯ ಖಂಡಿಕದಲ್ಲಿ ನಡೆದ ಘಟನೆ
– ಕುಂದಾಪುರ: ಕೋಡಿ ಬೀಚಿನಲ್ಲಿ ಈಜು: ಓರ್ವ ಸಾವು, ಇನ್ನೊರ್ವ ಗಂಭೀರ
– ಮೂಡು ಬಿದಿರೆ: ಮನೆಯ ಕಾರ್ಯದ ಅಹ್ವಾನ ಪತ್ರಿಕೆ ಕೊಡಲು ಹೋದವ ಅಪಘಾತಕ್ಕೆ ಬಲಿ!
NAMMUR EXPRESS NEWS
ಮಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ತಾಯಿ ಮತ್ತು ಮೂವರು ಮಕ್ಕಳು ಗಾಯಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಮಂಜನಾಡಿಯ ಖಂಡಿಕದಲ್ಲಿ ನಡೆದಿದೆ. ಗಾಯಾಳುಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಖಂಡಿಕ ಪ್ರದೇಶದ ಮುತ್ತಲಿಬ್ ಎಂಬುವರ ಮನೆಯಲ್ಲಿ ಮಧ್ಯರಾತ್ರಿ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಮನೆಯ ಮೇಲ್ಟಾವಣಿ ಹಾರಿಹೋಗಿದೆ.
ತಾಯಿ ಮತ್ತು ಮೂವರು ಮಕ್ಕಳು ಮಲಗಿದ್ದ ಮಂಚ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೋಡಿ ಬೀಚಿನಲ್ಲಿ ಈಜು: ಓರ್ವ ಸಾವು, ಇನ್ನೊರ್ವ ಗಂಭೀರ
ಕುಂದಾಪುರ: ಕುಂದಾಪುರ ಸಮೀಪದ ಕೋಡಿ ಬೀಚಿನಲ್ಲಿ ಕುಟುಂಬ ಸಮೇತರಾಗಿ ಬಂದಿದ್ದ ಸದಸ್ಯರ ಪೈಕಿ ಸಮುದ್ರದಲ್ಲಿ ಈಜಾಡಲು ಹೋಗಿ ಮೂವರು ಯುವಕರು ಸಮುದ್ರ ಪಾಲಾದ ಘಟನೆ ಶನಿವಾರ ಸಂಜೆ ನಡೆದಿದೆ.
ತಕ್ಷಣದ ಮಾಹಿತಿಯಂತೆ ಅಂಪಾರು ಐದು ಸೆಂಟ್ಸ್ ನಿವಾಸಿ ದಾಮೋದರ್ ಪ್ರಭು ಎಂಬುವರ ಮಗ ಧನರಾಜ್ (23) ಸಾವನ್ನಪ್ಪಿದ್ದರೆ, ಇನ್ನೊಬ್ಬ ಮಗ ಧನುಷ್ (20) ಗಂಭೀರ ಸ್ಥಿತಿಯಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅವರ ಸಹೋದರನ ಪುತ್ರ ದರ್ಶನ್ (18) ಸಮುದ್ರ ಪಾಲಾಗಿದ್ದು ಇದುವರೆಗೆ ಪತ್ತೆ ಆಗಿರುವುದಿಲ್ಲ. ಮೂರು ಜನರು ಸಹೋದರರಾಗಿದ್ದು ಗಂಭೀರ ಸ್ಥಿತಿಯಲ್ಲಿರುವ ಧನುಷ್ ಸುರತ್ಕಲ್ ಎನ್ಐಟಿಕೆ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದುಬಂದಿದೆ.ಶನಿವಾರ ಆಗಿದ್ದರಿಂದ ಮೂವರು ಸಹೋದರರು ಸಂಜೆ 6 ಗಂಟೆ ಸುಮಾರಿಗೆ ಕೊಡಿ ಬೀಚಿನಲ್ಲಿ ಈಜಾಡಲು ಬಂದಿದ್ದರು ಎನ್ನಲಾಗಿದೆ. ಗಂಭೀರ ಗೊಂಡಿರುವ ಧನುಷ್ ಹಾಗೂ ಶವವಾಗಿ ಪತ್ತೆಯಾಗಿರುವ ಧನರಾಜ್ ಇಬ್ಬರು ಮುಖಕ್ಕೆ ಮಾಸ್ಕ್ ಮತ್ತು ಕಣ್ಣಿಗೆ ಕಣ್ಗವಚ ಧರಿಸಿದ್ದರು. ಮೇಲ್ನೋಟಕ್ಕೆ ಈಜಾಡಲು ಸಿದ್ದರಾಗಿ ಬಂದಿದ್ದರು ಎನ್ನಲಾಗಿದೆ.
ಘಟನೆ ಸಂದರ್ಭ ಬೆಂಗಳೂರಿನ ಪ್ರವಾಸಿಗರುವರು ಗಮನಿಸಿ ತಕ್ಷಣ ಸಮುದ್ರಕ್ಕೆ ಹಾರಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ ಬಳಿಕ ಸ್ಥಳೀಯರು ಇಬ್ಬರನ್ನು ಕುಂದಾಪುರದ ಆಸ್ಪತ್ರೆಗೆ ಕಳುಹಿಸಲು ಸಹಕರಿಸಿದ್ದಾರೆ.
ಮನೆಯ ಕಾರ್ಯದ ಅಹ್ವಾನ ಪತ್ರಿಕೆ ಕೊಡಲು ಹೋದವ ಅಪಘಾತಕ್ಕೆ ಬಲಿ!
ಮೂಡಬಿದ್ರ: ಬೈಕ್ ನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮೂಡಬಿದ್ರೆ-ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಪಡುಮಾರ್ನಾಡು ಗ್ರಾಮದ ಬನ್ನಡ್ಕ ಎಂಬಲ್ಲಿ ನಡೆದಿದೆ.
ಚಿನ್ನದ ಕೆಲಸಗಾರ, ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (46) ಮೃತಪಟ್ಟವರು.ಮೂಡುಬಿದಿರೆ ಜ್ಯೋತಿನಗರದಲ್ಲಿ ಚಿನ್ನದ ವೃತ್ತಿಗೆ ಸಂಬಂಧಿಸಿದ ವಿಷ್ಟೇಶ್ ಮೆಷಿನ್ ಕಟ್ಟಿಂಗ್ ಉದ್ಯಮವನ್ನು ನಡೆಸುತ್ತಿದ್ದು ಜನವರಿ 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸ್ಸು ಬರುತ್ತಿದ್ದ ವೇಳೆ ಬನ್ನಡ್ಕ ಬಳಿ ಬೈಕ್ನಿಂದ ಬಿದ್ದಿದ್ದರು.ಸ್ಥಳೀಯರು ಕೂಡಲೇ ಅಲಂಗಾರ್ನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದರು. ಮೃತರ ಸಹೋದರ ನೀಡಿದ ದೂರಿನಂತೆ ಪೊಲಿಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿದ್ದಾರೆ.