ಕರಾವಳಿ ಟಾಪ್ ನ್ಯೂಸ್
– ಕುಂದಾಪುರ: ಗ್ಯಾಸ್ ಸಾಗಾಟ ವಾಹನ ಬೈಕ್ ಡಿಕ್ಕಿ, ಸವಾರ ಸ್ಥಳದಲ್ಲಿಯೇ ಮೃತ್ಯು!-
– ಮಂಗಳೂರು: ರಿಕ್ಷಾದಲ್ಲಿ ಬಾಲಕಿ ಮೇಲೆ ಲೈಗಿಕ ದೌರ್ಜನ್ಯ ಅಪರಾಧಿಗಳಿಗೆ ಶಿಕ್ಷೆ
– ಸುಳ್ಯ: ಕುಸಿದು ಬಿದ್ದು ವ್ಯಕ್ತಿ ಮೃತ್ಯು
NAMMUR EXPRESS NEWS
ಉಡುಪಿ: ಗ್ಯಾಸ್ ಸಾಗಿಸುತ್ತಿದ್ದ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮುಳ್ಳಿಕಟ್ಟೆ ಸಮೀಪ ಆರಾಟೆ ಸೇತುವೆ ಬಳಿ ನಡೆದಿದೆ. ಮೃತ ಸವಾರನನ್ನು ಮಂಗಳೂರು ಮೂಲದ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಕೆಬಿ ಯುವರಾಜ್ ಬಲ್ಲಾಳ ಎಂಬುವರ ಪುತ್ರ ರಂಜಿತ್ ಬಲ್ಲಾಳ್(59) ಎಂದು ಗುರುತಿಸಲಾಗಿದೆ. ಬೈಕ್ ಸವಾರ ರಂಜಿತ್ ಬಲ್ಲಾಳ್ ತನ್ನ ಬಿ ಎಂ ಡಬ್ಲ್ಯೂ ಬೈಕ್ ನಲ್ಲಿ ಗೋವಾ ಕಡೆಯಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು. ವೇಗವಾಗಿ ಬಂದ ಬೈಕ್ ಸವಾರ ಗ್ಯಾಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಹೆಲ್ಮೆಟ್ ಧರಿಸಿದ್ದರೂ ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳೀಯರ ಸಹಕಾರದಿಂದ ಬೈಕ್ ಸವಾರನನ್ನು ಗಂಗೊಳ್ಳಿ ಆಪದ್ಭಾಂಧವ ಇಬ್ರಾಹಿಂ ಗಂಗೊಳ್ಳಿ ಮತ್ತು ಅಬ್ರರ್ ತನ್ನ ಆಂಬ್ಯುಲೆನ್ಸ್ ನಲ್ಲಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
* ಮಂಗಳೂರು:ಆಟೋರಿಕ್ಷಾದಲ್ಲಿ ಬಾಲಕಿ ಮೇಲೆ ಲೈಗಿಕ ದೌರ್ಜನ್ಯ ಇಬ್ಬರು ಅಪರಾಧಿಗಳಿಗೆ ಶಿಕ್ಷೆ!
ಧರ್ಮಸ್ಥಳ: ದಲಿತ ಬಾಲಕಿಯ ಮೇಲೆ ಆಟೋರಿಕ್ಷಾದಲ್ಲಿ ಲೈಂಗಿಕ ದೌರ್ಜನ್ಯವೆಸಗಿದ ಇಬ್ಬರು ಅಪರಾಧಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸೋ) ಎಫ್ಟಿಎಸ್ಸಿ-1 ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್ ಅವರು ಶಿಕ್ಷೆ ವಿಧಿಸಿದ್ದಾರೆ. ಬೆಳ್ತಂಗಡಿ ತಾಲೂಕು ಇಳಂತಿಲದ ನಿವಾಸಿ, ಬೀಡಿ ತೆಗೆಯುವ ವೃತ್ತಿಯ ಅಬ್ದುಲ್ ಕರೀಂ (39) ಮತ್ತು ಮೊಗ್ರು ಗ್ರಾಮ ಪಚ್ಚಡ್ಕ ಮನೆಯ ನಿವಾಸಿ ಆಟೋರಿಕ್ಷಾ ಚಾಲಕ ಸಾದಿಕ್ (34) ಶಿಕ್ಷೆಗೊಳಗಾದ ಅಪರಾಧಿಗಳು. ಒಂದನೇ ಅಪರಾಧಿ ಅಬ್ದುಲ್ ಕರೀಂಗೆ ಪೋಕ್ಸೋ ಕಾಯ್ದೆಯ ಕಲಂ 8ರ ಅಡಿಯಲ್ಲಿ 5 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯ ಕಲಂ 3(1)(ಡಬ್ಲ್ಯು)(ಐ) ಅಡಿಯಲ್ಲಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ, ಅಲ್ಲದೆ ಪರಿಶಿಷ್ಟ ಜಾತಿ, ಪಂಗಡದವರ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(2)(ವಿಎ) ಮತ್ತು ಭಾರತೀಯ ದಂಡ ಸಂಹಿತೆ ಕಲಂ 354 ಎ(1)(ಐ) ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಇನ್ನೋರ್ವ ಅಪರಾಧಿ ಸಾದಿಕ್ಗೆ ಪೋಕ್ಸೋ ಕಾಯ್ದೆಯ ಕಲಂ 8ರಡಿಯಲ್ಲಿ 3 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿದ್ದಾರೆ.
* ಸುಳ್ಯ: ಕುಸಿದು ಬಿದ್ದು ವ್ಯಕ್ತಿ ಮೃತ್ಯು
ಮಂಗಳೂರು: ಸುಳ್ಯ ತಾಲೂಕಿನ ಜಾಲ್ಸೂರು ಅರಣ್ಯ ತಪಾಸಣ ಚೆಕ್ಪೋಸ್ಟ್ ನಲ್ಲಿ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ದೇಲಂಪಾಡಿ ಗ್ರಾಮದ ಕೂಡುಮಜಲು ಮುದಿಯಾರು ಸದಾಶಿವ ಗೌಡ (58) ಮೃತರು. ಅವರು ಪತ್ನಿ, ಪುತ್ರನನ್ನು ಅಗಲಿದ್ದಾರೆ. ರಾತ್ರಿ ಜಾಲ್ಸೂರಿನ ಅರಣ್ಯ ತಪಾಸಣ ಚೆಕ್ಪೋಸ್ಟ್ನಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಬೆಳಗ್ಗೆ ವೇಳೆಗೆ ಕುಸಿದು ಬಿದ್ದಿದ್ದರು. ತತ್ಕ್ಷಣ ಅವರನ್ನು ಅರಣ್ಯ ಇಲಾಖೆಯ ಸಿಬಂದಿ ಸುಳ್ಯದ ಸರಕಾರಿ ಆಸ್ಪತ್ರೆಗೆ ಕರೆದೊಯ್ದು, ಬಳಿಕ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆ ವೇಳೆ ಅವರು ಮೃತಪಟ್ಟಿದ್ದಾರೆ. ಸದಾಶಿವ ಗೌಡ ಅವರು ಜಾಲ್ಸೂರಿನಲ್ಲಿ ಕಳೆದ ಏಳು ವರ್ಷಗಳಿಂದ ಅರಣ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಮುಂದಿನ ವರ್ಷ ನಿವೃತ್ತರಾಗಲಿದ್ದರು.