ಕರಾವಳಿಯಲ್ಲಿ ಸರ್ಕಾರದ ವಿರುದ್ಧ ಹೋರಾಟ!
– ಶರಣ್ ಪಂಪ್ವೆಲ್ ವಿರುದ್ಧ ಬಿ-ರಿಪೋರ್ಟ್ ಸಲ್ಲಿಸಲು ವಿಶ್ವ ಹಿಂದೂ ಪರಿಷತ್ ಅಗ್ರಹ: ಮಂಗಳೂರಿನಲ್ಲಿ ಪೊಲೀಸರ ನಡೆ ಖಂಡಿಸಿ ಪ್ರತಿಭಟನೆ
– ವಾಲ್ಮೀಕಿ ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಮಂಗಳೂರಿನಲ್ಲಿ ಬಿಜೆಪಿ ಹೋರಾಟ
NAMMUR EXPRESS NEWS
ವಿಶ್ವ ಹಿಂದೂ ಪರಿಷತ್ ಮುಖಂಡ ಶರತ್ ಪಂಪ್ವೆಲ್ ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ದಾಖಲಿಸಿರುವ ಪ್ರಕರಣದಲ್ಲಿ ಬಿ-ರಿಪೋರ್ಟ್ ಸಲ್ಲಿಸಬೇಕೆಂದು ವಿಎಚ್ಪಿ ಮುಖಂಡ ಜಗದೀಶ ಶೇಣವ ಒತ್ತಾಯಿಸಿದ್ದಾರೆ. ರಸ್ತೆಯಲ್ಲಿ ನಮಾಜ್ ಮಾಡಿರುವುದನ್ನು ಪ್ರಶ್ನಿಸಿರುವುದಕ್ಕೆ ಶರಣ್ ಪಂಪ್ವೆಲ್ ಮೇಲೆ ಕೇಸ್ ದಾಖಲಿಸಿರುವುದು ಸರಿಯಲ್ಲ. ಅಷ್ಟೇಅಲ್ಲ, ನಮಾಜ್ ಮಾಡಿದವರ ಮೇಲೆ ಹಾಕಿದ ಕೇಸ್ಗೆ ಬಿ-ರಿಪೋರ್ಟ್ ಹಾಕಿದ ಸರ್ಕಾರದ ನಡೆ ಕೂಡ ಖಂಡನೀಯ ಎಂದು ಅವರು ಮಂಗಳೂರಿನ ಮಲ್ಲಿಕಟ್ಟೆ ವೃತ್ತದ ಬಳಿ ಆಯೋಜಿಸಲಾಗಿದ್ದ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಪ್ರಕರಣ ದಾಖಲಾಗಿ ಒಂದೇ ದಿನದಲ್ಲಿ ಬಿರಿಪೋರ್ಟ್ ಹಾಕುವುದು ಹಾಗೂ ಬೆಳ್ತಂಗಡಿಯಲ್ಲಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿದ ಎರಡೇ ದಿನದಲ್ಲಿ ಚಾರ್ಜ್ಶೀಟ್ ಹಾಕುವುದು ಬಹುಶಃ ಇಡೀ ದೇಶದಲ್ಲೇ ನಮ್ಮ ಜಿಲ್ಲೆಯಲ್ಲೇ ಮೊದಲು ಆಗಿರಬೇಕು. ಇಲ್ಲಿ ನ್ಯಾಯ ಕೇಳಿದವರಿಗೆ ಶಿಕ್ಷೆ. ತಪ್ಪು ಮಾಡಿದವರಿಗೆ ರಾಜ ಮರ್ಯಾದೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ಹಿಂದೂ ಸಮಾಜ ಒಟ್ಟಾಗಿದೆ. ಪೊಲೀಸ್ ಆಯುಕ್ತರು ಹಿಂದೂ ಸಂಘಟನೆಯ ಇತಿಹಾಸವನ್ನು ಅರಿತುಕೊಳ್ಳಬೇಕು. ಹೀಗಾಗಿ, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ಮಾನಪಾ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಪೊಳಲಿ ಗಿರಿ ಪ್ರಕಾಶ್ ತಂತ್ರಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಾಲ್ಮೀಕಿ ನಿಗಮದ ಅಕ್ರಮ: ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಾಯ: ಮಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ
ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಹಾಗೂ ಕೋಟ್ಯಂತರ ಹಣ ವರ್ಗಾವಣೆ ಪ್ರಕರಣ ಸಂಬಂಧ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವಂತೆ ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಯುತ್ತಿದೆ. ಇದೀಗ ಮಂಗಳೂರಿನಲ್ಲಿಯೂ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು ಸಚಿವರ ತಲೆದಂಡಕ್ಕೆ ಆಗ್ರಹಿಸಿ ಪಿವಿಎಸ್ ವೃತ್ತದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಸಚಿವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡಿರುವ ಅಧೀಕ್ಷಕ ಲಕ್ಷ್ಮಿನಾರಾಯಣ ಅವರು ಕೂಡ ಡೆತ್ನೋಟ್ನಲ್ಲಿ ಹಲವಾರು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅಲ್ಲದೆ, ಸಚಿವರ ಮೌಖಿಕ ಆದೇಶದ ಮೇರೆಗೆ ಕೋಟ್ಯಂತರ ಹಣವನ್ನು ಅಧಿಕಾರಿಗಳು ಬೇರೆಯವರ ಖಾತೆಗೆ ವರ್ಗಾಯಿಸಿರುವುದಾಗಿ ಹೇಳಲಾಗುತ್ತಿದೆ. ಇಷ್ಟೊಂದು ಗುರುತರ ಆರೋಪಗಳು ಕೇಳಿಬಂದ ಬಳಿಕವೂ ಜವಾಬ್ದಾರಿಯುತ ಸ್ಥಾನದಿಂದ ಕೆಳಗಿಳಿದು ತನಿಖೆ ಸಹಕರಿಸಬೇಕು. ಒಂದುವೇಳೆ ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇನ್ನು ಬಿಜೆಪಿ ಕಾರ್ಯಕರ್ತರು ಕೆಲಹೊತ್ತು ರಸ್ತೆ ತಡೆ ಕೂಡ ಮಾಡಿದ್ದಾರೆ. ಇದರಿಂದ ನಗರದ ಎಂಜಿ ರಸ್ತೆ ಹಾಗೂ ಸುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಕೂಡ ಉಂಟಾಗಿತ್ತು.