ಕೇರಳ ಗಡಿಯಲ್ಲಿ ಗಾಂಜಾ ಸಪ್ಲೈ ಗ್ಯಾಂಗ್!
– ಬಸ್ನಲ್ಲಿ ಸಾಗಾಟ ಮಾಡುತ್ತಿದ್ದ ಬರೋಬ್ಬರಿ 5 ಕೆಜಿ ಗಾಂಜಾ ವಶ!
– ಮಂಜೇಶ್ವರ: ತಪಾಸಣೆ ಗೊತ್ತಾಗಿ ಆರೋಪಿ ಬಸ್ನಿಂದ ಪರಾರಿ
ಶಾಸಕ ಹರೀಶ್ ಪೂಂಜಾ ಅವರನ್ನು ಪೊಲೀಸರೇ ಕರೆದುಕೊಂಡು ಸ್ಟೇಷನ್ಗೆ ಹೋಗಿದ್ದು: ಎಸ್ಪಿ ಸ್ಪಷ್ಟನೆ
– ಪೊಲೀಸರು ಪೂಂಜಾ ಮನೆಯಿಂದ ಓಡಿ ಹೋಗಿದ್ದಲ್ಲ!
– ಮಂಗಳೂರಿನ ಬೈಕಂಪಾಡಿ ಬಳಿ ಸರಣಿ ಅಪಘಾತ
NAMMUR EXPRESS NEWS
ಮಂಗಳೂರು: ಬಸ್ನಲ್ಲಿ ಬರೋಬ್ಬರಿ ಐದುವರೆ ಕೆಜಿಯಷ್ಟು ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಅಬಕಾರಿ ಅಧಿಕಾರಿಗಳು ಕಾಸರಗೋಡಿನ ಮಂಜೇಶ್ವರದಲ್ಲಿ ಪತ್ತೆ ಮಾಡಿ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಅಧಿಕಾರಿಗಳಿಗೆ ಲಭಿಸಿದ್ದ ಖಚಿತ ಮಾಹಿತಿ ಮೇರೆಗೆ ಸೋಮವಾರ ಬೆಳಗ್ಗೆ ಮಂಜೇಶ್ವರದ ಹೊಸಂಗಡಿಯಲ್ಲಿ ವಾಹನವನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ನ್ನು ಕೂಡ ತಪಾಸಣೆಗೆ ನಿಲ್ಲಿಸಿದ್ದಾರೆ. ಈ ವೇಳೆ ಬಸ್ನೊಳಗೆ ಹತ್ತಿ ಬ್ಯಾಗ್ಗಳನ್ನು ಚೆಕ್ ಮಾಡುವಾಗ ಬೃಹತ್ ಪ್ರಮಾಣದ ಗಾಂಜಾ ಪತ್ತೆಯಾಗಿದೆ. ಅಬಕಾರಿ ಅಧಿಕಾರಿಗಳು ಬಸ್ಗೆ ಹತ್ತಿರುವುದನ್ನು ಗಮನಿಸಿದ್ದ ಆ ಬ್ಯಾಗ್ನ ವಾರಸುದಾರ ಅದನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಆರೋಪಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಗಾಂಜಾ ಮಾರಾಟ ಬಹಳ ರಾಜಾರೋಷವಾಗಿ ನಡೆಯುತ್ತಿದೆ. ಈ ಹಿಂದೆ ಖಾಸಗಿ ವಾಹನಗಳಲ್ಲಿ ಗಾಂಜಾವನ್ನು ಗಿರಾಕಿಗಳಿಗಾಗಿ ಕೊಂಡೊಯ್ಯಲಾಗುತ್ತಿತ್ತು. ಆದರೆ, ಈಗ ಪೊಲೀಸರಿಗೆ ಸಿಕ್ಕಿ ಬೀಳುವ ಸಾಧ್ಯತೆಯಿರುವ ಕಾರಣ ಸರ್ಕಾರಿ ಬಸ್ನಲ್ಲೇ ಸುಲಭವಾಗಿ ಸಾಗಿಸುತ್ತಿರುವುದು ಕಂಡುಬರುತ್ತಿದೆ. ಆದೇರೀತಿ ಕಾಸರಗೋಡಿನತ್ತ ಡ್ರಗ್ಸ್ ಪೆಡ್ಲರ್ಗಳು ಗಾಂಜಾ ಸಾಗಾಟ ಮಾಡುತ್ತಿರಬೇಕಾದರೆ ದೊಡ್ಡ ಪ್ರಮಾಣದ ಡ್ರಗ್ಸ್ ಪತ್ತೆಯಾಗಿರುವುದು ಗಮನಾರ್ಹ.
ಶಾಸಕ ಹರೀಶ್ ಪೂಂಜಾ ಅವರನ್ನು ಪೊಲೀಸರೇ ಕರೆದುಕೊಂಡು ಸ್ಟೇಷನ್ಗೆ ಹೋಗಿದ್ದು: ಎಸ್ಪಿ ಸ್ಪಷ್ಟನೆ
– ಪೊಲೀಸರು ಪೂಂಜಾ ಮನೆಯಿಂದ ಓಡಿ ಹೋಗಿದ್ದಲ್ಲ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಮನೆಗೆ ಪೊಲೀಸರ ಭೇಟಿ ಹಾಗೂ ಅವರ ವಿಚಾರಣೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಎಸ್ಪಿ ಸಿಬಿ ರಿಷ್ಯಂತ್ ಸ್ಪಷ್ಟನೆ ನೀಡಿದ್ದಾರೆ. ಶಾಸಕ ಹರೀಶ್ ಪೂಂಜಾ ಅವರನ್ನು ಮನೆಯಿಂದ ಠಾಣೆಗೆ ಪೊಲೀಸರೇ ಕರೆದುಕೊಂಡು ಬಂದಿದ್ದು ಬಳಿಕ ಅವರಿಗೆ ಸ್ಟೇಷನ್ ಬೇಲ್ ನೀಡಿರುವುದಾಗಿ ಅವರು ಹೇಳಿದ್ದಾರೆ. ಶಾಸಕ ಪೂಂಜಾ ಅವರನ್ನು ವಿಚಾರಣೆಗೆ ಬರುವಂತೆ ನೋಟಿಸ್ ನೀಡುವುದಕ್ಕೆ ಮೊದಲು ಮೂವರು ಪೊಲೀಸರು ಮಾತ್ರ ತೆರಳಿದ್ದರು. ಆದರೆ, ಅವರ ಮನೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದ ಕಾರಣ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತೆ ದೃಷ್ಟಿಯಿಂದ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಜನಪ್ರತಿನಿಧಿಗಳ ಮನವಿ ಹಿನ್ನಲೆಯಲ್ಲಿ ಪೊಲೀಸರು ಅಲ್ಲಿಂದ ವಾಪಾಸ್ ಬಂದಿದ್ದೇ ಹೊರತು ಪೊಲೀಸರು ಓಡಿ ಹೋಗಿದ್ದಲ್ಲ ಎಂದು ಎಸ್ಪಿ ಹೇಳಿದ್ದಾರೆ. ಶಾಸಕ ಪೂಂಜಾ ವಿರುದ್ಧದ ಒಂದು ಪ್ರಕರಣದಲ್ಲಿ ಸ್ಟೇಷನ್ ಬೇಲ್ ನೀಡಲಾಗಿದ್ದು, ಧರಣಿ ವೇಳೆ ಪೊಲೀಸ್ ಠಾಣೆಯಲ್ಲಿ ಶಾಸಕರ ಜತೆಗಿದ್ದವರೆಲ್ಲರೂ ಆರೋಪಿಗಳಾಗಿರುತ್ತಾರೆ ಎಂದು ರಿಷ್ಯಂತ್ ತಿಳಿಸಿದ್ದಾರೆ.
ಮಂಗಳೂರಿನ ಬೈಕಂಪಾಡಿ ಬಳಿ ಸರಣಿ ಅಪಘಾತ!
ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ಜೋಕಟ್ಟೆ ಕ್ರಾಸ್ ಬಳಿ ತಡೆರಹಿತ ಬಸ್ ಡಿಕ್ಕಿ ಹೊಡೆದ ಪರಿಣಾಮ ಸರಣಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಸ್ಕೂಟರ್ ಸವಾರರೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಾಳು ಸ್ಕೂಟರ್ ಸವಾರನನ್ನು ಪಣಂಬೂರು ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಎಕೆಎಂಎಸ್ ಹೆಸರಿನ ತಡೆರಹಿತ ಬಸ್ ಜೋಕಟ್ಟೆ ಕ್ರಾಸ್ ತಲುಪುತ್ತಿದ್ದಂತೆ ಟ್ರಾಫಿಕ್ ಪೊಲೀಸ್ ಜಂಕ್ಷನ್ ಬಳಿ ನಿಲ್ಲಿಸಿದ್ದ ಎರಡು ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಒಂದು ಕಾರು ಮುಂದಕ್ಕೆ ಚಲಿಸಿದ್ದು ಎದುರು ನಿಲ್ಲಿಸಿದ್ದ ಬಸ್ಸಿಗೆ ಡಿಕ್ಕಿ ಹೊಡೆದಿದೆ. ಅಷ್ಟೇಅಲ್ಲ ಮತ್ತೆ ಮುಂದಕ್ಕೆ ಚಲಿಸಿ ಬದಿಯಲ್ಲಿ ನಿಲ್ಲಿಸಿದ್ದ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಸ್ಕೂಟರ್ ಸವಾರ ಸತೀಶ್ ಎಂಬವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತದಿಂದ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು. ಕೂಡಲೇ ಟ್ರಾಫಿಕ್ ಪೊಲೀಸರು ಅಪಘಾತಕ್ಕೀಡಾದ ವಾಹನಗಳನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ. ಬಸ್ ಚಾಲಕ ಇರ್ಫಾನ್ ವಿರುದ್ಧ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.