ಕರಾವಳಿ ಬ್ರೇಕಿಂಗ್ ನ್ಯೂಸ್
– ರಾಜ್ಯದ ದೊಡ್ಡ ಸೈಬರ್ ವಂಚನೆ: 1.6 ಕೋಟಿ ಮೋಸ!
– ಮಂಗಳೂರಿನಲ್ಲಿ ಸೈಬರ್ ಜಾಲದ ವಂಚನೆಗೆ ನಿವೃತ್ತಿ ಎಂಜಿನಿಯರ್ ಕಳೆದುಕೊಂಡ ಹಣ ಬರೋಬ್ಬರಿ 1.60 ಕೋಟಿ ರೂ.
– ಮುಂಬೈ ಕ್ರೈಂ ಬ್ರಾಂಚ್ ಸೋಗಿನಲ್ಲಿ ಪ್ರತಿಷ್ಠಿತ ವ್ಯಕ್ತಿಯ ಖಾತೆಗೆ ಖನ್ನ
NAMMUR EXPRESS NEWS
ಮಂಗಳೂರು: ಎಲ್ಲೋ ಕುಳಿತು ಆನ್ಲೈನ್ ಮೂಲಕ ಪ್ರತಿಷ್ಠಿತರ ಬ್ಯಾಂಕ್ ಖಾತೆಗಳಿಗೆ ಖನ್ನ ಹಾಕಿ ಕ್ಷಣಮಾತ್ರದಲ್ಲಿ ಕೋಟ್ಯಂತರ ಹಣವನ್ನು ಪೀಕಿಸುವ ಸೈಬರ್ ಜಾಲದ ಕರಾಮತ್ತು ಇತ್ತೀಚಿನ ದಿನಗಳಲ್ಲಿ ಜೋರಾಗುತ್ತಿದೆ. ಇತ್ತೀಚೆಗೆ ಪುತ್ತೂರಿನಲ್ಲಿ ವೈದ್ಯರೊಬ್ಬರಿಗೆ 16 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದ ಒಂದು ತಿಂಗಳಲ್ಲೇ ಇದೀಗ ಮಂಗಳೂರಿನಲ್ಲಿ ಅದಕ್ಕಿಂತಲೂ ದೊಡ್ಡ ಮೊತ್ತದ ಸೈಬರ್ ವಂಚನೆಯೊಂದು ಬೆಳಕಿಗೆ ಬಂದಿದೆ. ಆ ವ್ಯಕ್ತಿ ಕಳೆದುಕೊಂಡಿರುವ ಹಣದ ಮೊತ್ತ ನೋಡಿದರೆ ಎಂಥವರಿಗೂ ಶಾಕ್ ಆಗಬಹುದು. ಹಡಗಿನಲ್ಲಿ ಎಂಜಿನಿಯರ್ ಆಗಿ ನಿವೃತ್ತಿ ಜೀವನ ನಡೆಸುತ್ತಿರುವ ವ್ಯಕ್ತಿಯು ಸೈಬರ್ ಜಾಲದ ಬ್ಲಾಕ್ಮೇಲ್ಗೆ ಹೆದರಿ ಬರೋಬ್ಬರಿ 1.60 ಕೋಟಿ ರೂ. ಪಾವತಿಸಿ ಮೋಸ ಹೋಗಿದ್ದಾರೆ. ತಾವು ಮುಂಬೈ ಕ್ರೈಂ ಬ್ರಾಂಚ್ನ ಅಧಿಕಾರಿಗಳು ಎಂದುಕೊಂಡು ಈ ನಿವೃತ್ತ ಎಂಜಿನಿಯರ್ ಅವರನ್ನು ಸಂಪರ್ಕ ಮಾಡಿದ್ದ ಜಾಲದವರು ಮುಂದೆ ಬಹಳ ಸುಂದರ ಕಥೆಯೊಂದನ್ನು ಸೃಷ್ಟಿಸಿ ಕೋಟಿ ಹಣವನ್ನು ಗುಳುಂ ಮಾಡಿದ್ದಾರೆ.
ಮೋಸ ಮಾಡಿದ್ದು ಹೇಗೆ?
ತಾನು ಫೆಡೆಕ್ಸ್ ಕಂಪನಿಯ ರಾಜೇಶ್ ಕುಮಾರ್ ಎಂಬುದಾಗಿ ಹೇಳಿ ಕರೆ ಮಾಡಿದ ವ್ಯಕ್ತಿಯು ನೀವು ಮುಂಬೈನಿಂದ ಥಾಯ್ಲೆಂಡ್ಗೆ ಕಳುಹಿಸಿರುವ ಪಾರ್ಸೆಲ್ನಲ್ಲಿ 140 ಗ್ರಾಂ ಎಂಡಿಎಂಎ ಡ್ರಗ್ಸ್ ಇದ್ದು, ಆ ನಿಷೇಧಿತ ವಸ್ತು ಬಗ್ಗೆ ಕ್ರೈಂ ಬ್ರಾಂಚ್ನವರು ತನಿಖೆ ನಡೆಸುತ್ತಿದ್ದಾರೆ. ಆ ಬಳಿಕ ಮುಂಬೈ ಕ್ರೈಂ ಬ್ರಾಂಚ್ನ ಅಧಿಕಾರಿಯೆಂದು ಹೇಳಿ ಇನ್ನೋರ್ವ ಕರೆ ಮಾಡಿದ್ದಾನೆ. ಆತ ಕೂಡ ಹಲವು ಪ್ರಕರಣಗಳಲ್ಲಿ ಸಿಲುಕಿರುವುದಾಗಿ ಹೆದರಿಸಿದ್ದಾನೆ. ಇದರಿಂದ ಬಿಡಿಸಿಕೊಳ್ಳಬೇಕಾದರೆ ತಾವು ನಿಗದಿತ ಮೊತ್ತ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಜತೆಗೆ ಕೆಲವೊಂದು ನೋಟಿಸ್ಗಳನ್ನು ಕೂಡ ರವಾನಿಸಿದ್ದಾರೆ. ಒಂದುವೇಳೆ, ಹೇಳಿದ ಹಣ ನೀಡದಿದ್ದರೆ ವಿದೇಶದಲ್ಲಿರುವ ತಮ್ಮ ಮಗ ಹಾಗೂ ಮಗಳನ್ನು ಬಂಧಿಸಲಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ. ಏಕೆಂದರೆ, ಈ ಖದೀಮರು ಅದಾಗಲೇ ಎಂಜಿನಿಯರ್ನ ಮಕ್ಕಳು ವಿದೇಶದಲ್ಲಿ ನೆಲೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.
ಸೈಬರ್ ಜಾಲದ ಎಲ್ಲ ಕಟ್ಟುಕಥೆಯನ್ನು ನಂಬಿದ್ದ ಎಂಜಿನಿಯರ್ ಮಕ್ಕಳಿಗೆ ತೊಂದರೆಯಾಗಬಹುದೆಂದು ಹೆದರಿ ಹಣ ವರ್ಗಾಯಿಸುವುದಕ್ಕೆ ನಿರ್ಧರಿಸಿದ್ದಾರೆ. ಮರ್ಯಾದೆ ಹೋಗಬಹುದು ಎಂಬ ಕಾರಣಕ್ಕೆ ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಅದರಂತೆ ಮೇ 2ರಂದು 1.10 ಕೋಟಿ ರೂ.ವನ್ನು ಖದೀಮರ ಖಾತೆಗೆ ವರ್ಗಾಯಿಸಿದ್ದಾರೆ. ಅದಾದ ಬಳಿಕ ಮತ್ತೆ ಮೇ 6ರಂದು ಮತ್ತೆ 50 ಲಕ್ಷ ರೂ. ಟ್ರಾನ್ಸ್ಫರ್ ಮಾಡಿದ್ದಾರೆ. ಮರುದಿನ ಈ ಬಗ್ಗೆ ಮಾಹಿತಿ ಪಡೆಯುವುದಕ್ಕೆ ಎಂಜಿನಿಯರ್ ವಾಪಾಸ್ ಕರೆ ಮಾಡಿದರೆ ಆ ಕಡೆಯಿಂದ ಯಾವುದೇ ಸ್ಪಂದನೆ ದೊರೆಯಲಿಲ್ಲ. ಸಂಶಯ ಬಂದು ಮಗಳಿಗೆ ಕರೆ ಮಾಡಿದಾಗ ತಾವು ಬಹುದೊಡ್ಡ ಸೈಬರ್ ಸ್ಕ್ಯಾಮ್ನಲ್ಲಿ ಟ್ರಾಪ್ ಆಗಿರುವುದು ಗೊತ್ತಾಗಿದೆ.
ಜನರೇ ಎಚ್ಚರ ಎಚ್ಚರ…!
ಇತ್ತೀಚಿನ ದಿನಗಳಲ್ಲಿ ಈ ರೀತಿಯ ಪ್ರಕರಣಗಳು ಬೆಳಕಿಗೆ ಬರುವುದು ಹೊಸದಲ್ಲ. ಅದರಲ್ಲಿಯೂ ಹೆಚ್ಚಿನ ಶೈಕ್ಷಣಿಕ ಅನುಭವ ಹೊಂದಿರುವ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳೇ ಮೋಸ ಹೋಗಿ ಕೋಟ್ಯಂತರ ಹಣ ಕಳೆದುಕೊಳ್ಳುತ್ತಿದ್ದಾರೆ ಎನ್ನುವುದು ಕೂಡ ಗಮನಾರ್ಹ. ಹೀಗಿರುವಾಗ, ಈ ರೀತಿ ಪಾರ್ಸೆಲ್ ಅಥವಾ ಸಿಬಿಐ ಪೊಲೀಸ್ ಅಧಿಕಾರಿ ಅಥವಾ ನಗ್ನ ಚಿತ್ರಗಳನ್ನು ತೋರಿಸಿ ಹಣ ಪೀಕಿಸುವುದಕ್ಕೆ ಯಾರಾದರೂ ಕರೆ ಮಾಡಿದರೆ ಕೂಡಲೇ ಸಮೀಪದ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುವ ಮೂಲಕ ಈ ಜಾಲಕ್ಕೆ ಟ್ರ್ಯಾಪ್ ಆಗದಂತೆ ಎಚ್ಚರಿಕೆ ವಹಿಸುವುದು ಉತ್ತಮ.