ತಾಯಿ ಹೊಡೆದು ಕೊಂದ ಮಗನಿಗೆ ಸಮುದಾಯ ಸೇವೆ ಶಿಕ್ಷೆ!
– ದಕ್ಷಿಣ ಕನ್ನಡದ ಸಂಪಾಜೆಯಲ್ಲಿಅಪರೂಪದ ಪ್ರಕರಣ
– ಏನಿದು ಕೇಸ್…? ಕೋರ್ಟ್ ಹೇಳಿದ್ದು ಏನು…?
– ಉಪ್ಪಿನಂಗಡಿ: ಅಪ್ಪನ ಸಾವಿನ ಕೊರಗಿನಲ್ಲಿದ್ದ ಮಗ ಆತ್ಮಹತ್ಯೆಗೆ ಶರಣು
NAMMUR EXPRESS NEWS
ಸಂಪಾಜೆ: ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಹೊಡೆದು ಕೊಂದಿದ್ದ ಮಗನನ್ನು ಖುಲಾಸೆಗೊಳಿಸಿದ್ದ ಮಡಿಕೇರಿ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿರುವ ಹೈಕೋರ್ಟ್ ಆರೋಪಿಗೆ ಸಮುದಾಯ ಸೇವೆ ಮಾಡುವ ಶಿಕ್ಷೆಯನ್ನು ವಿಧಿಸಿದೆ. ಆರೋಪಿ ಈ ಮೊದಲೇ ಎರಡು ವರ್ಷ ಜೈಲು ಶಿಕ್ಷೆ ಅನುವಿಸಿದ್ದ ಹಿನ್ನೆಲೆಯಲ್ಲಿ ಸುಧಾರಣಾ ಕ್ರಮವಾಗಿ ಕೊಡಗು-ದಕ್ಷಿಣ ಕನ್ನಡ ಗಡಿಭಾಗವಾದ ಸಂಪಾಜೆಯ ಸರ್ಕಾರಿ ಶಾಲೆಯಲ್ಲಿ ಆವರಣ ಸ್ವಚ್ಛಗೊಳಿಸುವುದು, ಅದರ ನಿರ್ವಹಣೆ ಮಾಡುವುದು ಹಾಗೂ ಹೂದೋಟದ ಆರೈಕೆ ಮಾಡುವುದನ್ನು ಶಿಕ್ಷೆಯ ರೂಪದಲ್ಲಿ ಸಮುದಾಯ ಸೇವೆ ಮಾಡುವಂತೆ ಹೈಕೋರ್ಟ್ ಆದೇಶ ಮಾಡಿದೆ. ಈ ಹಿಂದೆ ಅಧೀನ ನ್ಯಾಯಾಲವು ಆರೋಪಿಯನ್ನು ಖುಲಾಸೆಗೊಳಿಸಿದ್ದನ್ನು ಪ್ರಶ್ನಿಸಿ ಮಡಿಕೇರಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ್ದ ಹೈಕೋರ್ಟ್ ನ್ಯಾ. ಕೆಎಸ್ ಮುದ್ಗಲ್ ಹಾಗೂ ಜಿಟಿ ಶಿವಶಂಕರೇಗೌಡ ಅವರಿದ್ದ ವಿಭಾಗೀಯ ಪೀಠವು ಈ ರೀತಿಯ ಆದೇಶ ನೀಡಿದೆ. ಆರೋಪಿಯು ಒಂದುವೇಳೆ ಸಮುದಾಯ ಸೇವೆ ಮಾಡಿದ್ದರೆ ಹೆಚ್ಚುವರಿಯಾಗಿ 25 ಸಾವಿರ ದಂಡ ಹಾಗೂ ಮೂರು ತಿಂಗಳು ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ.
ತಾಯಿ ಕೊಂದಿದ್ದು ಹೇಗೆ?
2015ರ ಏ.4ರಂದು ಈ ಕೊಲೆ ನಡೆದಿತ್ತು. ದುಶ್ಚಟಗಳಿಂದ ದಾರಿ ತಪ್ಪಿದ್ದ ಮಗ ಅನಿಲ್ಗೆ ತಾಯಿ ಗಂಗಮ್ಮ ಬೈಯ್ದು ಬುದ್ಧಿ ಹೇಳಿದ್ದರು. ಸಿಟ್ಟುಗೆದ್ದ ಮಗ ದೊಣ್ಣೆಯಿಂದ ಥಳಿಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಗಂಗಮ್ಮನವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆರ ಅವರು ಏ.5ರಂದು ಸಾವನ್ನಪ್ಪಿದ್ದು, ಪೊಲೀಸರು ಅನಿಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದರು.
ಅಪ್ಪನ ಸಾವಿನ ಕೊರಗಿನಲ್ಲಿದ್ದ ಮಗ ಆತ್ಮಹತ್ಯೆಗೆ ಶರಣು!
ಉಪ್ಪಿನಂಗಡಿ: ಮೂರು ವರ್ಷದ ಹಿಂದೆ ಮೃತಪಟ್ಟಿದ್ದ ತನ್ನ ತಂದೆಯ ಕೊರಗಿನಲ್ಲಿದ್ದ ಮಗ ಈಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉಪ್ಪಿನಂಗಡಿ ಗೋಳಿತ್ತೊಟ್ಟು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನುಇಲ್ಲಿನ ಅನಾಲು ನಿವಾಸಿ ದಿ. ವಾಸಪ್ಪ ಗೌಡರ ಶ್ರೀಹರ್ಷ ಗೌಡ(21) ಎಂದು ಗುರುತಿಸಲಾಗಿದೆ.
ಶ್ರೀಹರ್ಷ ಮೇ 4ರಂದು ರಾತ್ರಿ ಮನೆ ಸಮೀಪದ ಚಿಕ್ಕಪ್ಪ ಶೀನಪ್ಪ ಗೌಡರ ಮಗಳ ಮದುವೆಯ ಔತಣಕೂಟವಿದ್ದ ಹಿನ್ನಲೆ ಸಂಜೆವರೆಗೆ ಅಲ್ಲಿಯೇ ಕೆಲಸ ಮಾಡಿದ್ದು, ಬಳಿಕ ಮನೆಗೆ ವಾಪಾಸ್ ಬಂದಿದ್ದರು. ಮರುದಿನ ಬೆಳಗ್ಗಿನ ಜಾವ ಸುಮಾರು 2.30ರ ಹೊತ್ತಿಗೆ ಶ್ರೀಹರ್ಷ ಸಹೋದರ ಮನೆಗೆ ಬಂದಾಗ ಮನೆ ಬಾಗಿಲು ತೆರೆದಿದ್ದು, ಒಳಗಡೆ ಹೋಗಿ ನೋಡಿದಾಗ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.
ಶ್ರೀಹರ್ಷ ತಂದೆ ಮೂರು ವರ್ಷದ ಹಿಂದೆಯೇ ಮೃತಪಟ್ಟಿದ್ದು, ಆ ನಂತರದಲ್ಲಿ ಮಾನಸಿಕವಾಗಿ ತೀವ್ರ ಆಘಾತಕ್ಕೆ ಒಳಗಾಗಿದ್ದರು. ಆ ಕಾರಣದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಣ್ಣ ಹರ್ಷಿತ್ ಗೌಡ ಉಪ್ಪಿನಂಗಡಿ ಠಾಣೆಗೆ ದೂರು ದಾಖಲಿಸಿದ್ದಾರೆ.