ಕರಾವಳಿ ಟಾಪ್ ನ್ಯೂಸ್
– ಧರ್ಮಸ್ಥಳ ಯಕ್ಷಗಾನ ಮೇಳದ ಮೇಲ್ವಿಚಾರಕರಾಗಿದ್ದ ಹಿರಿಯ ಚೆಂಡೆ ವಾದಕ ನಾಗರಾಜ ಆರಿಗ ಆತ್ಮಹತ್ಯೆಗೆ ಶರಣು
– ಬೈಕ್ ಪರಸ್ಪರ ಡಿಕ್ಕಿಯಾಗಿ ಸಹ ಸವಾರ ಯುವಕ ಸಾವು
– ಕೊಕ್ಕಡದಲ್ಲಿ ಹಲ್ಲೆಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ: ಕೊಲೆ ಕೇಸ್ ದಾಖಲು!
– ಪುತ್ತೂರು: ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಎಂದು ಖಾಸಗಿ ಆಸ್ಪತ್ರೆ ವಿರುದ್ದ ಸಂಬಂಧಿಕರ ಆಕ್ರೋಶ: ಪ್ರಕರಣ ದಾಖಲು
NAMMUR EXPRESS NEWS
ಎರಡು ಸ್ಕೂಟರ್ ಪರಸ್ಪರ ಡಿಕ್ಕಿಯಾಗಿ ಸಹಸವಾರರೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ಸಮೀಪದ ಕಲ್ಲಾಪು ಜಂಕ್ಷನ್ನಲ್ಲಿ ಇಂದು ಮುಂಜಾನೆ ನಡೆದಿದೆ. ಮೃತ ಯುವಕನನ್ನು ಉಳ್ಳಾಲ ಕೋಟೆಪುರ,ಕೋಡಿ ನಿವಾಸಿ ಅಹಮ್ಮದ್ ನಿಷಾದ್ (22) ಎಂದು ಗುರುತಿಸಲಾಗಿದೆ. ನಿಷಾದ್ ಇಂದು ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಸಯ್ಯದ್ ಹಫೀಝ್ ಎಂಬವರೊಂದಿಗೆ ಸ್ಕೂಟರಲ್ಲಿ ಸಹಸವಾರನಾಗಿ ಮಂಗಳೂರಿನಿಂದ ತೊಕ್ಕೊಟ್ಟಿಗೆ ಬರುತ್ತಿದ್ದರು. ಕಲ್ಲಾಪು ಜಂಕ್ಷನ್ ನಲ್ಲಿ ತೊಕ್ಕೊಟ್ಟಿನಿಂದ ಬಂದು ಗ್ಲೋಬಲ್ ಮಾರ್ಕೆಟ್ ಬಳಿ ಕ್ರಾಸ್ ಆಗುತ್ತಿದ್ದಂತೆ ಇನ್ನೊಂದು ಸ್ಕೂಟರ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಎರಡೂ ಸ್ಕೂಟರ್ನಲ್ಲಿದ್ದ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಆದರೆ ಗಂಭೀರವಾಗಿ ಗಾಯಗೊಂಡಿದ್ದ ನಿಷಾದ್ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಚಿಕಿತ್ಸೆ ಫಲಿಸದೆ ಅವರು ಬಳಿಕ ಮೃತಪಟ್ಟಿದ್ದಾರೆ. ಇನ್ನು ಸ್ಕೂಟರ್ ಸವಾರ ಹಫೀಜ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ ಮತ್ತೊಂದು ಸ್ಕೂಟರ್ ಸವಾರ ಕುತ್ತಾರು ಪದವು ನಿವಾಸಿ ಅಬ್ಬೂಬಕ್ಕರ್ ಸಿದ್ದೀಕ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೊಕ್ಕಡದಲ್ಲಿ ಹಲ್ಲೆಯಿಂದ ವ್ಯಕ್ತಿ ಮೃತಪಟ್ಟ ಪ್ರಕರಣ: ಕೊಲೆ ಕೇಸ್ ದಾಖಲು!
ಕೊಕ್ಕಡ: ಅನಾರೋಗ್ಯ ಪೀಡಿತರಾಗಿ ಬಳಲುತ್ತಿದ್ದ ವ್ಯಕ್ತಿಗೆ ಹಲ್ಲೆ ನಡೆಸಿ ಸಾವಿಗೆ ಕಾರಣವಾದ ಆರೋಪದಲ್ಲಿ ಅರೆಸ್ಟ್ ಆಗಿರುವ ಅರಸಿನಮಕ್ಕಿ ಪಶುಚಿಕಿತ್ಸಾ ಕೇಂದ್ರದ ಹಿರಿಯ ಪಶು ವೈದ್ಯಕೀಯ ಪರೀಕ್ಷಕ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಮೇ .13ರಂದು ಸಂಜೆ ಕೊಕ್ಕಡದ ವೃತ್ತದಲ್ಲಿ ಪಶು ವೈದ್ಯಕೀಯ ಪರೀಕ್ಷಕ ಕುಮಾರ್ ಎಂಬುವರು ಹಲ್ಲೆ ನಡೆಸಿದ ಪರಿಣಾಮ ಬೆಳ್ತಂಗಡಿ ತಾಲೂಕಿನ ಪಟ್ರಮೆ ನಿವಾಸಿ ಕೃಷ್ಣಪ್ಪ (58) ಎಂಬುವರು ಕುಸಿದು ಬಿದ್ದು ಮೃತಪಟ್ಟಿದ್ದರು ಎನ್ನಲಾಗಿತ್ತು. ಘಟನೆ ಕುರಿತಂತೆ ಮೃತರ ಪತ್ನಿ ಭಾರತಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು. ಕುಮಾರ್ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು , ಮೇ14ರಂದು ಬಂಧಿಸಲಾಗಿತ್ತು . ಬೆಳ್ತಂಗಡಿ ಗ್ರಾಮಾಂತರ ವೃತ್ತನಿರೀ ಕ್ಷಕ ವಸಂತ ಆರ್.ಆಚಾರ್ ಮತ್ತು ತಂಡ ಪ್ರಕರಣದ ತನಿಖೆ ನಡೆಸುತ್ತಿದೆ.
ಜ್ವರ ಎಂದು ದಾಖಲಾದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಸರ್ಜರಿ ಬಳಿಕ ರೋಗಿ ಮೃತ್ಯು!
ಪುತ್ತೂರು: ಖಾಸಗಿ ಆಸ್ಪತ್ರೆಗೆ ಒಳರೋಗಿಯಗಿ ದಾಖಲಾದ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಡೆದಿದ್ದು, ಮೃತರ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಕಕ್ಕೆಪದವು ಉಳಿಗ್ರಾಮದ ಪಿಲಿಬೈಲಿನ ನಿವಾಸಿ ಕೃಷ್ಣಪ್ಪ ಗೌಡ (೫೧) ಮೃತರು. ಜ್ವರ ಬಂದ ಕಾರಣ ಕೃಷ್ಣಪ್ಪರನ್ನು ಪುತ್ತೂರಿನ ದರ್ಬೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷಿಸಿದ ವೈದ್ಯರು ಅವರ ನಾಲಿಗೆ ಅಡಿ ಭಾಗದಲ್ಲಿ ಗೆಡ್ಡೆ ಇದೆ. ಅದನ್ನು ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಿ ತೆಗೆಯಬೇಕೆಂದು ಮನೆಯವರಿಗೆ ಸೂಚಿಸಿ ಪತ್ನಿ ಸರೋಜಿನಿ ಹಾಗೂ ಅವರ ಸಂಬಂಧಿಕ ಮಹಿಳೆಯೊಬ್ಬರ ಸಹಿ ಹಾಕಿಸಿಕೊಂಡಿದ್ದರು. ಜ್ವರಕ್ಕೆಂದು ದಾಖಲಾದ ವ್ಯಕ್ತಿಗೆ ಕ್ಯಾನ್ಸರ್ ಇದೆ ಎಂದು ಗೆಡ್ಡೆಯ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿತ್ತು.
ಚಿಕಿತ್ಸೆ ಬಳಿಕ ಕೃಷ್ಣಪ್ಪ ಗೌಡ ಮೃತಪಟ್ಟಿದ್ದರು. ಇದರಿಂದ ಅವರ ಸಂಬಂಧಿಕರು ಹಾಗೂ ಸಾರ್ವಜನಿಕರು ರಾತ್ರೋರಾತ್ರಿ ಆಸ್ಪತ್ರೆಯ ಮುಂಭಾಗದಲ್ಲಿ ಜಮಾಯಿಸಿ ವೈದ್ಯರ ನಿರ್ಲಕ್ಷ್ಯದಿಂದಲೇ ಸಾವು ಸಂಭವಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಂಬಂಧಿಕರ ಆರೋಪದ ಹಿನ್ನಲೆಯಲ್ಲಿ ವ್ಯಕ್ತಿಯ ಮರಣೋತ್ತರ ಪರೀಕ್ಷೆಗಾಗಿ ದೇರಳಕಟ್ಟೆಯ ಆಸ್ಪತ್ರೆಗೆ ಮೃತದೇಹವನ್ನು ಕಳುಹಿಸಲಾಗಿದೆ. ಮೃತರ ಅಣ್ಣ ವಸಂತ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ನಗರಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಧರ್ಮಸ್ಥಳ ಯಕ್ಷಗಾನ ಮೇಳದ ಮೇಲ್ವಿಚಾರಕರಾಗಿದ್ದ ಹಿರಿಯ ಚೆಂಡೆ ವಾದಕ ನಾಗರಾಜ ಆರಿಗ ಆತ್ಮಹತ್ಯೆಗೆ ಶರಣು
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಸಮೀಪದ ಇಚ್ಲಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಿರಿಯ ಚೆಂಡೆ ವಾದಕರಾಗಿರುವ ನಾಗರಾಜ ಆರಿಗ(78) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಧರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಹಲವು ವರ್ಷ ಚೆಂಡೆ ವಾದಕರಾಗಿದ್ದರು. ಅಲ್ಲದೆ ಧರ್ಮಸ್ಥಳ ತಿರುಗಾಟ ಮೇಳದ ಮೇಲ್ವಿಚಾರಕರಾಗಿಯೂ ಕೆಲಸ ಮಾಡಿದ್ದಾರೆ. ಅಲ್ಲದೆ ಹಲವು ಸಾಮಾಜಿಕ ಸಂಘಟನಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದ ನಾಗರಾಜ ಬೀಡುಬೈಲು ಅವರು ಮನೆಯಲ್ಲಿ 2 ವರ್ಷದಿಂದ ಒಂಟಿಯಾಗಿ ವಾಸವಾಗಿದ್ದರು.
ಎಂದಿನಂತೆ ಮನೆ ಕೆಲಸದವರಾದ ಸುಧಾಕರ ಅವರು ಮೇ 14ರಂದು ಮಲಗಲೆಂದು ರಾತ್ರಿ ವೇಳೆ ಬಂದಾಗ ಮನೆ ವಿದ್ಯುತ್ ದೀಪ ಉರಿಯುತ್ತಿರಲಿಲ್ಲ. ಅನುಮಾನಗೊಂಡು ಮನೆಯೊಳಗೆ ನೋಡಿದರೂ ಇರಲಿಲ್ಲ. ನಂತರ ಸ್ಥಳೀಯರೆಲ್ಲ ಸೇರಿ ಮರುದಿನ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದಾಗ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಮಗಳು ಬಂದ ಬಳಿಕ ಮೃತದೇಹ ಹೊರ ತೆಗೆಯಲಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿರುವುದಾಗಿ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.