ಹಣ ಗಳಿಸುವ ಆಸೆಗೆ ಹೋಗಿ 10.66 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ!
– ಮಣಿಪಾಲ: ಆನ್ಲೈನ್ ಪಾರ್ಟ್ಟೈಮ್ ಜಾಬ್ ಮೋಸ
ಉಡುಪಿ: ನಡುರಸ್ತೆಯಲ್ಲೇ ಅಟ್ಟಹಾಸ ಮೆರೆದ ಗ್ಯಾಂಗ್: 6 ಮಂದಿ ಅರೆಸ್ಟ್
– ಬೆಳ್ತಂಗಡಿ: 4 ವರ್ಷದ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣ ಭೇದಿಸಿದ ಪೊಲೀಸರು!
NAMMUR EXPRESS NEWS
ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಿದ್ಯಾರ್ಥಿಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಪ್ರಕರಣವೊಂದು ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಬೆಳಕಿಗೆ ಬಂದಿದೆ. ಮಣಿಪಾಲದ ವಿದ್ಯಾರ್ಥಿ ಸೌರಭ(22) ಎಂಬವರಿಗೆ ಅಪರಿಚಿತ ವ್ಯಕ್ತಿ ಆನ್ಲೈನ್ ಪಾರ್ಟ್ಟೈಮ್ ಜಾಬ್ ಕುರಿತು ಲಿಂಕ್ವೊಂದನ್ನು ಕಳುಹಿಸಿ ಗ್ರೂಪ್ಗೆ ಸೇರ್ಪಡೆ ಮಾಡಿದ್ದ. ಬಳಿಕ ವಿವಿಧ ರೀತಿಯ ಟಾಸ್ಕ್ಗಳನ್ನು ನೀಡಿ ಅದನ್ನು ಪೂರ್ಣಗೊಳಿಸಿದರೆ ಬ್ಯಾಂಕ್ ಖಾತೆಗೆ ಹಣವನ್ನು ಜಮೆ ಮಾಡುವುದಾಗಿ ನಂಬಿಸಿ ಸೌರಭ್ನ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದುಕೊಂಡಿದ್ದ. ಟಾಸ್ಕ್ ಪೂರ್ಣಗೊಳಿಸಿದ್ದ ಸೌರಭ್ ಖಾತೆಗೆ ಮೊದಲು 5600 ರೂ. ಜಮೆ ಮಾಡಲಾಗಿತ್ತು. ನಂತರ ಅಪರಿಚಿತ ವ್ಯಕ್ತಿಯು ಇನ್ನು ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಮತ್ತಷ್ಟು ಲಾಭ ಬರುವುದಾಗಿ ನಂಬಿಸಿದ್ದಾನೆ. ಅದರಂತೆ ಸೌರಭ್ ಮೇ 22ರಂದು 10,66,590 ರೂ. ಹೂಡಿಕೆ ಮಾಡಿದ್ದ. ಬಳಿಕ ನೋಡಿದರೆ ಅಷ್ಟು ಹಣವನ್ನು ಸೈಬರ್ ಖದೀಮರು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಈಗ ಹಣ ಕಳೆದುಕೊಂಡಿರುವ ವಿದ್ಯಾರ್ಥಿ ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಡುರಸ್ತೆಯಲ್ಲೇ ಅಟ್ಟಹಾಸ ಮೆರೆದ ಗ್ಯಾಂಗ್: 6 ಮಂದಿ ಅರೆಸ್ಟ್
ಉಡುಪಿಯ ನಡುರಸ್ತೆಯಲ್ಲೇ ಎರಡು ಗುಂಪುಗಳು ತಲವಾರು ಬೀಸುತ್ತ ಗ್ಯಾಂಗ್ವಾರ್ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಒಟ್ಟು 6ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ. ಪೊಲೀಸರು ಮತ್ತೆ ಮೇ 25ರಂದು ಮೂವರನ್ನು ಬಂಧಿಸಿದ್ದಾರೆ.
ಈಗ ಬಂಧಿಸಲಾಗಿರುವ ಪುಡಿ ರೌಡಿಗಳನ್ನು ಮಜೀದ್, ಅಲ್ಫಾಝ್ ಹಾಗೂ ಶರೀಫ್ ಎಂದು ಗುರುತಿಸಲಾಗಿದ್ದು, ಪ್ರಮುಖ ಆರೋಪಿ ಕಾಪುವಿನ ಕೊಂಬಗುಡ್ಡೆಯ ಆಶಿಕ್, ತೋನ್ಸೆಯ ರಾಕೀಬ್, ಸಕ್ಲೈನ್ನನ್ನು ಈಗಾಗಲೇ ಜೈಲಿಗೆ ಕಳುಹಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನು ಕೂಡ ಇಬ್ಬರ ಬಂಧನ ಬಾಕಿಯಿದೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ರಿಯಲ್ ಎಸ್ಟೇಟ್ ವಿವಾದಕ್ಕೆ ಸಂಬಂಧಿಸಿದಂತೆ ಉಭಯ ಗ್ಯಾಂಗ್ನ ಸದಸ್ಯರು ಪರಸ್ಪರ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ಈ ಗ್ಯಾಂಗ್ವಾರ್ ಕೃತ್ಯಕ್ಕೆ ಬಳಸಲಾಗಿದ್ದ ಎರಡು ಕಾರು, ಲಾಂಗ್ಗಳನ್ನು ವಶಕ್ಕೆ ಪಡೆಯಲಾಗಿದೆ.
4 ವರ್ಷದ ಹಿಂದೆ ಬೆಳ್ತಂಗಡಿಯಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣ ಭೇದಿಸಿದ ಪೊಲೀಸರು!
ದಕ್ಷಿಣ ಕನ್ನಡದಲ್ಲಿ ಇತ್ತೀಚೆಗೆ ನಡೆದಿದ್ದ ಸರಣಿ ಚಿನ್ನಾಭರಣ ಕಳವು ಪ್ರಕರಣವನ್ನು ಒಂದೊಂದಾಗಿ ಪೊಲೀಸರು ಭೇದಿಸುತ್ತಿರುವುದು ಜಿಲ್ಲೆಯ ನಿವಾಸಿಗಳಲ್ಲಿ ನೆಮ್ಮದಿ ತರುತ್ತಿದೆ. ಎರಡು ದಿನದ ಹಿಂದೆಯಷ್ಟೇ ಮಂಗಳೂರಿನ ಕುಲಶೇಖರದಲ್ಲಿ ನಡೆದಿದ್ದ ದೊಡ್ಡ ಮೌಲ್ಯದ ಚಿನ್ನಾಭರಣ ಪ್ರಕರಣವನ್ನು ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದರು.
ಇದೀಗ ಬೆಳ್ತಂಗಡಿಯ ಕಲ್ಮಂಜ ಗ್ರಾಮದ ಮಿಯಾ ಎಂಬಲ್ಲಿ ಅಚ್ಯುತ್ ಭಟ್ ಎಂಬವರ ಮನೆಯಲ್ಲಿ 2020ರಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ ಪ್ರಕರಣವನ್ನು ಪತ್ತೆ ಮಾಡಿರುವ ಧರ್ಮಸ್ಥಳದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಠಾಣೆಯಲ್ಲಿ ಪತ್ರಿಕಾಗೋಷ್ಠಿ ವಿವರಣೆ ನೀಡಿದ ಎಸ್ಪಿ ಸಿಬಿ ರಿಷ್ಯಂತ್, ಈ ಪ್ರಕರಣದಲ್ಲಿ ಮನೆ ಮಂದಿಯನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 25 ಸಾವಿರ ನಗದು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದರು. ಈ ಪ್ರಕರಣದಲ್ಲಿ ಕದ್ದ ವಸ್ತುಗಳು ಪತ್ತೆಯಾಗದೆ ಆರೋಪಿಗಳು ಕೈಗೆ ಸಿಕ್ಕದಿದ್ದ ಕಾರಣ ಬಿರಿಪೋರ್ಟ್ ಹಾಕಲಾಗಿತ್ತು. ಆದರೆ, ಮೇ 22ರಂದು ಈ ಪ್ರಕರಣದಲ್ಲಿ ದೋಚಿಕೊಂಡು ಹೋಗಿದ್ದ ಚಿನ್ನವನ್ನು ಮಾರಾಟ ಮಾಡಲು ಸಂಶಯಾಸ್ಪದ ವ್ಯಕ್ತಿಯೊಬ್ಬ ತೆರಳುತ್ತಿರುವ ಬಗ್ಗೆ ಧರ್ಮಸ್ಥಳ ಠಾಣಾ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ವೇಳೆ ಮುಂಡಾಜೆಯ ರಿಯಾಜ್ ಎಂಬಾತನನ್ನು ವಶಕಕೆ ಪಡೆದು ವಿಚಾರಿಸಿದಾಗ ಈ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೆ, ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಮುಂಡಾಜೆ ಗ್ರಾಮದ ಕೂಳೂರು ಮನೆಯ ನವಾಝ್ ಹಾಗೂ ಕಲ್ಬುರ್ಗಿಯ ಕೃಷ್ಣ ಎಂಬಾತ ಧರ್ಮಸ್ಥಳದಲ್ಲಿ ಇರುವುದಾಗಿ ತಿಳಿಸಿದ್ದಾನೆ. ಈ ದರೋಡೆ ಕೇಸ್ನಲ್ಲಿ ಒಟ್ಟು 7,87,000 ಮೌಲ್ಯದ ಆಭರಣ ದರೋಡೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ರಿಷ್ಯಂತ್ ವಿವರಿಸಿದ್ದಾರೆ.