ಶಾಸಕ ಹರೀಶ್ ಪೂಂಜಾ ಸೇಫ್!?
– ಬಂಧಿಸಲು ಬಂದ ಪೊಲೀಸರು ನೋಟಿಸ್ ಕೊಟ್ಟು ವಾಪಾಸ್
– ಪೂಂಜಾ ನಿವಾಸದಲ್ಲಿ 6 ತಾಸುಗಳಿಂದ ನಡೆದ ಬಂಧನ ಹೈಡ್ರಾಮಾ ಅಂತ್ಯ
– ಪೂಂಜಾ ಬಂಧನ ವಿರೋಧಿಸಿ ಪೂಂಜಾ ನಿವಾಸದ ಎದುರು ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು
NAMMUR EXPRESS NEWS
ಬೆಳ್ತಂಗಡಿ: ಠಾಣೆಗೆ ಹೋಗಿ ಪೊಲೀಸರಿಗೆ ಆವಾಜ್ ಹಾಕಿರುವ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರನ್ನು ಬಂಧಿಸುವುದಕ್ಕೆ ಬಂದಿದ್ದ ಪೊಲೀಸರು ಸುಮಾರು ಆರು ತಾಸುಗಳು ಕಾದು ಕೊನೆಗೆ ಪೂಂಜಾ ವಕೀಲರು ಹಾಗೂ ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಕೇವಲ ನೋಟಿಸ್ ಕೊಟ್ಟು ವಾಪಾಸ್ ಹೋಗಿದ್ದಾರೆ. ಜತೆಗೆ ಐದು ದಿನದೊಳಗೆ ಪೂಂಜಾ ಠಾಣೆಗೆ ಬಂದು ಉತ್ತರಿಸುವಂತೆ ಸೂಚಿಸಿದ್ದಾರೆ. ಇದರೊಂದಿಗೆ ಕಳೆದ ಆರು ತಾಸುಗಳಿಂದ ಪೂಂಜಾ ಅವರ ನಿವಾಸದ ಎದುರು ನಡೆಯುತ್ತಿದ್ದ ಬಂಧನದ ಹೈಡ್ರಾಮಾ ಅಂತ್ಯಗೊಂಡಿದೆ.
ಎರಡು ಪ್ರಕರಣಗಳಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ ಪೂಂಜಾ ನಿವಾಸಕ್ಕೆ ಬಂದಿದ್ದರು. ಈ ಪೂಂಜಾ ಅವರು ತಮ್ಮ ನಿವಾಸದಲ್ಲೇ ಇದ್ದರು. ಅಷ್ಟೊತ್ತಿಗೆ ವಿಷಯ ತಿಳಿದು ಬಿಜೆಪಿ ಕಾರ್ಯಕರ್ತರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಪೂಂಜಾ ಅವರ ನಿವಾಸದ ಎದುರು ಜಮಾಯಿಸುವುದಕ್ಕೆ ತೊಡಗಿದ್ದರು. ಇದರಿಂದ ತಕ್ಷಣಕ್ಕೆ ಪೂಂಜಾರನ್ನು ಕರೆದೊಯ್ಯುವ ಪ್ರಯತ್ನ ಕೂಡ ವಿಫಲವಾಗಿತ್ತು. ಇನ್ನೇನು ಪರಿಸ್ಥಿತಿ ಕೈತಪ್ಪಿ ಹೋಗಬಹುದೆಂದು ಮನಗಂಡ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ಆಗಮಿಸಿ ಯಾವುದೇ ಗಲಾಟೆ ಆಗದಂತೆ ಮುಂಜಾಗ್ರತೆ ಕೈಗೊಂಡಿದ್ದರು.
ಇದೇ ವೇಳೆಗೆ ಮಂಗಳೂರಿನಿಂದ ವಕೀಲರ ತಂಡ ಕೂಡ ಆಗಮಿಸಿದ್ದು, ನೊಟೀಸ್ ನೀಡದೆ ಯಾವುದೇ ಕಾರಣಕ್ಕೂ ಪೂಂಜಾ ಅವರನ್ನು ಬಂಧಿಸುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದರು. ಜತೆಗೆ, ಒಬ್ಬ ಜನಪ್ರತಿನಿಧಿ ಹಾಗೂ ಆರೋಪಿಯನ್ನು ಬಂಧಿಸಬೇಕಾದರೆ ಏನೆಲ್ಲ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಪೊಲೀಸ್ ಅಧಿಕಾರಿಗಳಿಗೆ ಮನವರಿಕೆ ಮಾಡುವುದಕ್ಕೆ ಪ್ರಯತ್ನಿಸಿದರು. ಅದಾದ ಬಳಿಕ ಸಂಸದ ನಳಿನ್ ಕುಮಾರ್ ಸೇರಿದಂತೆ ಜಿಲ್ಲೆಯ ಹಲವು ಬಿಜೆಪಿ ಶಾಸಕರು ಕೂಡ ಪೂಂಜಾ ನಿವಾಸಕ್ಕೆ ಬಂದು ಕಾನೂನು ತಜ್ಞರೊಂದಿಗೆ ಚರ್ಚಿಸಿದ್ದಾರೆ. ಅಲ್ಲದೆ, ನೋಟಿಸ್ ಕೊಡದೆ ಬಂಧಿಸುವುದಕ್ಕೆ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಸುಧೀರ್ಘ ವಾದ-ವಿವಾದಗಳ ಬಳಿಕ ಪೊಲೀಸರು ಪೂಂಜಾ ಅವರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಇದಕ್ಕೆ ಒಪ್ಪಿದ ಪೂಂಜಾ ಹಾಗೂ ಬಿಜೆಪಿ ನಾಯಕರು ನೋಟಿಸ್ ಅನ್ನು ಸ್ವೀಕರಿಸಿದ್ದಾರೆ. ಇದರೊಂದಿಗೆ ಪೂಂಜಾ ಅವರನ್ನು ಬಂಧಿಸುವ ನಿರ್ಧಾರದಿಂದ ಪೊಲೀಸರು ಸದ್ಯಕ್ಕೆ ಹಿಂದೆ ಸರಿದಿದ್ದಾರೆ.
ಅಪಘಾತ ತಪ್ಪಿಸಲು ಹೋಗಿ ಕಾರಿಗೆ ಡಿಕ್ಕಿಯಾಗಿ ಪಲ್ಟಿಯಾದ ಮೀನು ಲಾರಿ!
ಉಡುಪಿಯ ಅಂಬಲಪಾಡಿ ಬಳಿ ಕಾರು ಹಾಗೂ ಮೀನಿನ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನಿನ ಟ್ರಕ್ ಕೇರಳದ ಕಡೆಗೆ ಹೋಗುತ್ತಿದ್ದು, ಅಂಬಲಪಾಡಿ ಸರ್ವೀಸ್ ರಸ್ತೆಯಿಂದ ಹೆದ್ದಾರಿ ಪ್ರವೇಶಿಸಿದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವುದಕ್ಕೆ ಚಾಲಕ ಹೋಗಿದ್ದಾನೆ. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಟ್ರಕ್ ಡಿವೈಡರ್ ದಾಟಿ ಎದುರುಗಡೆಯಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಬಳಿಕ ಮೀನನ್ನು ಮತ್ತೊಂದು ವಾಹನಕ್ಕೆ ಶಿಫ್ಟ್ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಉಡುಪಿ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಸಂಚಾರ ದಟ್ಟಣೆಯನ್ ತಪ್ಪಿಸಿದ್ದಾರೆ.