ನ್ಯಾಚುರಲ್ ಐಸ್ಕ್ರೀಂ ಕಂಪೆನಿ ಮಾಲೀಕ ರಘುನಂದನ್ ಕಾಮತ್ ಇನ್ನಿಲ್ಲ!
– ದೇಶದ ಮುಂಚೂಣಿ ಐಸ್ ಕ್ರೀಮ್ ಬ್ರಾಂಡ್
– ಮೂಲ್ಕಿ ಮೂಲದ ಸಾಧಕ ಇನ್ನು ನೆನಪು ಮಾತ್ರ!
NAMMUR EXPRESS NEWS
ಕರಾವಳಿ ಸೇರಿದಂತೆ ದೇಶದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿರುವ ಮಂಗಳೂರು ಮೂಲದ ನ್ಯಾಚುರಲ್ ಐಸ್ಕ್ರೀಂನ ಮಾಲೀಕರಾದ ರಘುನಂದನ್ ಕಾಮತ್(70) ಮುಂಬೈನಲ್ಲಿ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಕಾಮತ್ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.
ರಘುನಂದನ್ ಕಾಮತ್ ಅವರು 1954ರಲ್ಲಿ ಮೂಲ್ಕಿಯಲ್ಲಿ ಬಡ ಕುಟುಂಬದಲ್ಲಿ ಜನಿಸಿದ್ದರು. ಕಾಮತ್ ಅವರ ತಂದೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಬಡತನದಿಂದಾಗಿ ತಮ್ಮ 15ನೇ ವಯಸ್ಸಿನಲ್ಲೇ ಹೋಟೆಲ್ ಕೆಲಸಕ್ಕೆಂದು ತಮ್ಮ ಸಹೋದರರ ಜತೆಗೆ ಮುಂಬೈಗೆ ತೆರಳಿದ್ದರು. ಮುಂದೆ ಅವರು ಹೋಟೆಲ್ ಉದ್ಯಮ ಆರಂಭಿಸಿ ಹಣ್ಣುಗಳಿಂದಲೇ ಐಸ್ಕ್ರೀಂ ತಯಾರಿಸಿ ಗ್ರಾಹಕರ ಅಭಿರುಚಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಇದರಿಂದ ಪ್ರೇರಿತರಾಗಿದ್ದ ರಘುನಂದನ್ ಕಾಮತ್ ಅವರು 1984ರಲ್ಲಿ ಮುಂಬೈ ನಗರದಲ್ಲಿ ನ್ಯಾಚುರಲ್ ಐಸ್ಕ್ರೀಂ ಕಂಪೆನಿಯನ್ನು ಹುಟ್ಟು ಹಾಕಿದ್ದರು. ಮುಂದೆ ಅದು ಜನಪ್ರಿಯತೆ ಪಡೆದುಕೊಂಡಿದ್ದು, ದೇಶಾದ್ಯಂತ ದೊಡ್ಡ ಐಸ್ಕ್ರೀಂ ಬ್ರಾಂಡ್ ಆಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹಣ್ಣುಗಳಿಂದ ಐಸ್ ಕ್ರೀಮ್ ಉತ್ಪಾದನೆ
ಪ್ರಸ್ತುತ ಕರ್ನಾಟಕದ ಪ್ರಮುಖ ನಗರಗಳು ಸೇರಿದಂತೆ ದೇಶದೆಲ್ಲೆಡೆ 140ಕ್ಕೂ ಅಧಿಕ ನ್ಯಾಚುರಲ್ ಐಸ್ಕ್ರೀಂ ಔಟ್ಲೆಟ್ಗಳಿವೆ. ಐಸ್ಕ್ರೀಂಗಳಲ್ಲಿ ಕೃತಕ ಸಾಮಗ್ರಿ ಬಳಸದೆ ಸ್ಥಳೀಯವಾಗಿ ದೊರೆಯುವ ಹಣ್ಣುಗಳನ್ನು ಬಳಸಿ ಅದರ ಸ್ವಾದದಿಂದ ಬ್ರಾಂಡ್ ಸೃಷ್ಟಿಸಿ ಅಪಾರ ಮಟ್ಟಿಗೆ ಯಶಸ್ಸನ್ನು ಗಳಿಸಿದ್ದಾರೆ. ದೇಶದಲ್ಲಿ ಒಂದು ಕಾಲದಲ್ಲಿ ಐಸ್ಕ್ರೀಂ ಎನ್ನುವುದು ಮಧ್ಯಮ ಹಾಗೂ ಶ್ರೀಮಂತರ ವಲಯದಲ್ಲಿ ಮಾತ್ರ ಹೆಚ್ಚು ಮಾರಾಟವಾಗುತ್ತಿತ್ತು. ಅಂಥಹ ಸಮಯದಲ್ಲಿ ಬಹಳ ವಿಭಿನ್ನ ರೀತಿಯಲ್ಲಿ ಐಸ್ಕ್ರೀಂ ಕಂಪೆನಿ ಆರಂಭಿಸಿ ಅದು ಎಲ್ಲ ವರ್ಗದವರಿಗೂ ಸುಲಭವಾಗಿ ದೊರೆಯಬೇಕು ಎನ್ನುವ ಕಲ್ಪನೆಯಡಿ ನ್ಯಾಚುರಲ್ ಐಸ್ಕ್ರೀಂ ನೆಟ್ವರ್ಕ್ ದೇಶವ್ಯಾಪಿ ಬೆಳೆಸಿದ್ದಾರೆ. ಹೀಗಾಗಿ, ಅವರನ್ನು ದೇಶದ ಐಸ್ಕ್ರೀಂ ಮ್ಯಾನ್ ಎಂಬುದಾಗಿ ಕರೆಯಲಾಗುತ್ತಿದೆ.
ಮಂಗಳೂರಿನಲ್ಲಿಯೂ ಬೊಂಡಾ ಫ್ಯಾಕ್ಟರಿ!
ನ್ಯಾಚುರಲ್ ಐಸ್ಕ್ರೀಂ ಇತ್ತೀಚಿನ ವರ್ಷಗಳಲ್ಲಿ ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿಯೂ ಹೆಚ್ಚಿನ ಜನಪ್ರಿಯತೆ ಗಳಿಸುತ್ತಿದೆ. ಮಂಗಳೂರು ಹೊರವಲಯದ ಪಡೀಲ್ ಸಮೀಪ ಬೊಂಡಾ ಫ್ಯಾಕ್ಟರಿ ಸ್ಥಾಪಿಸಿದ್ದಾರೆ. ಕೋಮಲ ತೆಂಗಿನ ನೀರು ಮಂಗಳೂರಿನಲ್ಲಿ ಅಚ್ಚುಮೆಚ್ಚಿನ ಪಾನೀಯವಾಗಿದ್ದರೂ, ಇದು ನ್ಯಾಚುರಲ್ಸ್ ಐಸ್ ಕ್ರೀಮ್ ತಯಾರಿಕೆಯ ಪ್ರಕ್ರಿಯೆಯಲ್ಲಿ ನೇರ ಉದ್ದೇಶವನ್ನು ಪೂರೈಸುವುದಿಲ್ಲ. ಆದಾಗ್ಯೂ, ಕೋಮಲ ತೆಂಗಿನಕಾಯಿಯಿಂದ ಪಡೆದ ಕೆನೆ (ಮಲೈ) ಪರಿಪೂರ್ಣ ಕೋಮಲ ತೆಂಗಿನಕಾಯಿ ಐಸ್ ಕ್ರೀಮ್ ಅನ್ನು ತಯಾರಿಸಲು ನಿರ್ಣಾಯಕ ಅಂಶವಾಗಿದೆ . ಈ ಸಮಸ್ಯೆಯನ್ನು ನಿಭಾಯಿಸಲು, ಕಾಮತ್ ಅವರು ಬೊಂಡಾ ಫ್ಯಾಕ್ಟರಿ ಎಂಬ ಚತುರ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ಆ ಮೂಲಕ ಇಲ್ಲಿ ಸ್ಥಳೀಯವಾಗಿ ಎಳೆನೀರನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ನೇರವಾಗಿ ಮಾರಾಟ ಮಾಡಲಾಗುತ್ತಿದೆ. ಹೀಗೆ, ಹಲವು ವೈಶಿಷ್ಟ್ಯತೆಗಳಿಂದ ಗುರುತಿಸಿಕೊಂಡಿರುವ ನ್ಯಾಚುರಲ್ ಐಸ್ಕ್ರೀಂ ಪ್ರಸ್ತುತ ವಾರ್ಷಿಕವಾಗಿ 400 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸುತ್ತಿದೆ.