ಕರಾವಳಿ ಭಾಗದಲ್ಲಿ ಮತ್ತೆ ನಕ್ಸಲರು!?
-ಸುಳ್ಯ ಗಡಿಯ ಕೂಜಿಮಲೆ ವ್ಯಾಪ್ತಿಯಲ್ಲಿ ನಕ್ಸಲರು ಪ್ರತ್ಯಕ್ಷ
– ದಿನಸಿ ಸಾಮಾನು ಖರೀದಿಸಿದ 8 ಮಂದಿಯ ತಂಡ
NAMMUR EXPRESS NEWS
ಮಂಗಳೂರು: ದಶಕದಿಂದ ತಣ್ಣಗಾಗಿದ್ದ ನಕ್ಸಲ್ ಚಟುವಟಿಕೆ ಮತ್ತೆ ರಾಜ್ಯದ ಕರಾವಳಿ ಜಿಲ್ಲೆಯಲ್ಲಿ ಸಕ್ರಿಯವಾಗಿದೆ ಎಂಬ ಅನುಮಾನಕ್ಕೆ ಪುಷ್ಟಿ ನೀಡುವಂತೆ ಕಳೆದ ಮೂರು- ನಾಲ್ಕು ತಿಂಗಳಿಂದ ನಕ್ಸಲರ ಸದ್ದು ಅಲ್ಲಲ್ಲಿ ಕೇಳಿಬರುತ್ತಿದೆ. ಇದೀಗ ಹೊಸ ಬೆಳವಣಿಗೆ ಎಂಬಂತೆ ದಕ್ಷಿಣ ಕನ್ನಡ- ಕೊಡಗು ಗಡಿಭಾಗದ ಪ್ರದೇಶವಾದ ಮಡಿಕೇರಿ ತಾಲೂಕು ಕಡಮಕಲ್ಲು ಬಳಿಯ ಕೂಜಿಮಲೆ ವ್ಯಾಪ್ತಿಯಲ್ಲಿನ ರಬ್ಬರ್ ಎಸ್ಟೇಟ್ ನ ಬಳಿ ಶನಿವಾರ ಸಂಜೆ ನಕ್ಸಲರು ಓಡಾಟ ನಡೆಸಿರುವ ಬಗ್ಗೆ ಗ್ರಾಮಸ್ಥರು ಅನುಮಾನ ಹೊರಹಾಕಿದ್ದಾರೆ. 8 ಜನ ಶಂಕಿತ ನಕ್ಸಲರಿದ್ದ ತಂಡ ಕೂಜಿಮಲೆ, ಕಲ್ಮಕಾರಿನ ಅಂಗಡಿಯೊಂದರಿಂದ 3,500 ರೂ. ಮೌಲ್ಯದ ದಿನಸಿ ಖರೀದಿಸಿದ್ದಾರೆ ಎನ್ನಲಾಗಿದೆ. ತಮ್ಮಲ್ಲಿದ್ದ ನಗದು ಹಣವನ್ನು ನೀಡಿ ಸಾಮಾಗ್ರಿಗಳನ್ನು ಖರೀದಿಸಿ ಬಳಿಕ ಅಲ್ಲಿಂದ ತೆರಳಿದೆ ಎನ್ನಲಾಗಿದೆ.
2012 ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಒಡಾಟ ನಡೆಸಿದ್ದರು..ಬಳಿಕ 2018 ರ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು.ಇದಾದ 5 ವರ್ಷದ ಬಳಿಕ ಮತ್ತೆ ಅದೇ ಭಾಗದಲ್ಲಿ ನಕ್ಸಲ್ ತಂಡ ಪ್ರತ್ಯಕ್ಷವಾಗಿದೆ. ನಕ್ಸಲರು ಕಾಣಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕಾಲೂರಿನಲ್ಲಿ ಕೂoಬಿಂಗ್ ಕಾರ್ಯಾಚರಣೆ ಆರಂಭಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ನವೆಂಬರ್ ತಿಂಗಳಲ್ಲಿ ಕೇರಳದ ವಯನಾಡಿನಲ್ಲಿ ಕಾಣಿಸಿಕೊಂಡ ನಕ್ಸಲರನ್ನು ಬೆನ್ನಟ್ಟಿದ ಕೇರಳ ಪೊಲೀಸರು ಕರ್ನಾಟಕ ಮೂಲದ ಶ್ರೀಮತಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಉಳಿದ ಇಬ್ಬರು ತಪ್ಪಿಸಿಕೊಂಡಿದ್ದರು. ನಕ್ಸಲರು ಕಳೆದ ತಿಂಗಳು ಫೆಬ್ರವರಿಯಲ್ಲಿ ಕೇರಳದಿಂದ ಉಡುಪಿ ಜಿಲ್ಲೆಯ ಬೈಂದೂರುಗೆ ಆಗಮಿಸಿರುವ ಅನುಮಾನ ವ್ಯಕ್ತವಾಗಿತ್ತು. ಉಡುಪಿಯ ಹೆಬ್ರಿ ಮೂಲದ ವಿಕ್ರಮ್ ಗೌಡ ನೇತೃತ್ವದ ನಕ್ಸಲರ ತಂಡ ಬೈಂದೂರು ತಾಲೂಕಿನ ಕೊಲ್ಲೂರು, ಮುದೂರು, ಜಡ್ಕಲ್, ಬೆಳ್ಕಲ್ ಗ್ರಾಮ ಸುತ್ತಮುತ್ತ ಓಡಾಡಿರುವ ಶಂಕೆ ಮೂಡಿತ್ತು. ಈ ಹಿನ್ನಲೆಯಲ್ಲಿ ಆ ಭಾಗದಲ್ಲೂ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.