ಕರಾವಳಿಯಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ!
– ದಕ್ಷಿಣ ಕನ್ನಡದ ಕಡಬದ ಮನೆಯೊಂದರಲ್ಲಿ ಊಟ ಮಾಡಿ ಹೋದ ಶಂಕಿತರು
– ಒಂದೇ ತಿಂಗಳಲ್ಲಿ ಇದೀಗ ಮೂರನೇ ಬಾರಿಗೆ ಪತ್ತೆ?
NAMMUR EXPRESS NEWS
ಕಡಬ: ದಕ್ಷಿಣ ಕನ್ನಡದಲ್ಲಿ ಒಂದೇ ತಿಂಗಳಲ್ಲಿ ಇದೀಗ ಮೂರನೇ ಬಾರಿಗೆ ನಕ್ಸಲರು ಪ್ರತ್ಯಕ್ಷರಾಗಿರುವ ಮೂಲಕ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕಡಬ ತಾಲೂಕಿನ ಬಿಳಿನೆಲೆಯಲ್ಲಿ ನಕ್ಸಲರ ತಂಡವೊಂದು ಶಸ್ತ್ರಾಸ್ತ್ರದೊಂದಿಗೆ ಅಲ್ಲಿನ ಮನೆಗೆ ಬಂದು ಊಟ ಮಾಡಿ ಅಕ್ಕಿ ಮುಂತಾದ ವಸ್ತು ಕೂಡ ತೆಗೆದುಕೊಂಡು ಹೋಗಿರುವುದಾಗಿ ವರದಿಯಾಗಿದೆ. ಈ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಹಾಗೂ ಕಡಬ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ಪಡೆಯಿಂದ ಕೂಬಿಂಗ್ ಕೂಡ ಚುರುಕುಗೊಂಡಿದೆ.
ಬುಧವಾರ ರಾತ್ರಿ ಸುಮಾರು 7 ಗಂಟೆ ಅವಧಿಗೆ ಬಿಳಿನೆಲೆ ಚೇರು ಎಂಬಲ್ಲಿ ನಕಲ್ಸಲರ ತಂಡವು ಮನೆಗೆ ಬಂದಿದ್ದು, ಆ ತಂಡದಲ್ಲಿ ಆರು ಮಂದಿ ಶಂಕಿತ ನಕ್ಸಲರು ಇದ್ದರು ಎನ್ನಲಾಗಿದೆ. ಮನೆಯೊಂದಕ್ಕೆ ಬಂದ ತಂಡವು ಅಲ್ಲಿ ಊಟ ಮಾಡಿ ತಮ್ಮ ಮೊಬೈಲ್ ಅನ್ನು ಜಾರ್ಜ್ ಮಾಡಿಕೊಂಡು ಹೋಗಿದೆ. ಮೋಸ್ಟ್ ವಾಂಟೆಡ್ ನಕ್ಸಲ್ ಆಗಿರುವ ವಿಕ್ರಮ ಗೌಡ, ಮುಂಡಗಾರು ಲತಾ ತಂಡವೇ ಪ್ರತ್ಯಕ್ಷವಾಗಿರುವ ಬಗ್ಗೆ ಅನುಮಾನ ಮೂಡಿದೆ.
ಕೆಲವು ದಿನಗಳ ಹಿಂದೆಯಷ್ಟೇ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮಕ್ಕೆ ನಕ್ಸಲರ ತಂಡ ಬಂದು ಹೋಗಿರುವುದಾಗಿ ಅಲ್ಲಿನ ಜನರು ಹೇಳಿದ್ದರು. ಮಾ.23ರಂದು ಕಡಬ ತಾಲೂಕಿನ ಐನೆಕಿದು ಗ್ರಾಮದ ಅರಣ್ಯದಂಚಿನ ಮನೆಗಳಿಗೆ ಭೇಟಿ ನೀಡಿ ಊಟ ಮಾಡಿ ಒಂದಷ್ಟು ದಿನಸಿ ಸಾಮಾನು ತೆಗೆದುಕೊಂಡು ಹೋಗಿದ್ದರು. ಮಾ.16ರಂದು ದಕ್ಷಿಣ ಕನ್ನಡ ಹಾಗೂ ಕೊಡಗು ಗಡಿ ಪ್ರದೇಶವಾದ ಕೂಜಿಮಲೆ ಎಸ್ಟೇಟ್ನ ಅಂಗಡಿಯೊಂದಕ್ಕೆ ಭೇಟಿ ನೀಡಿ ಸಾಮಗ್ರಿಗಳನ್ನು ಖರೀದಿಸಿ ತೆರಳಿದ್ದರು. ಕೂಜಿಮಲೆ ಹಾಗೂ ಐನೆಕಿದು ಗ್ರಾಮದ ಮನೆಗಳಿಗೆ ಬಂದ ನಕ್ಸಲರ ತಂಡದಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದೆ.
ಈ ಹಿಂದೆ ಶೂಟೌಟ್ ನಡೆದಿದ್ದ ಅರಣ್ಯ ಪ್ರದೇಶ 2012ರಲ್ಲಿ ನಕ್ಸಲರು ಭೇಟಿ ನೀಡಿದ್ದ ಪರಿಸರದಲ್ಲಿ ಶೂಟೌಟ್ ನಡೆದ ಪರಿಸರದ ಸಮೀಪದ ಪ್ರದೇಶವೇ ಚೇರು. ಸುಬ್ರಹ್ಮಣ್ಯ ಸಮೀಪದ ಚೇರು, ಭಾಗ್ಯ, ಎರ್ಮಾಯಿಲ್, ನಡುತೋಟ, ಪಳ್ಳಿಗದ್ದೆ ಭಾಗಕ್ಕೆ ಆಗ ನಕ್ಸಲರು ಬಂದು ಹೋಗಿದ್ದರು. ಆ ಸಂದರ್ಭದಲ್ಲಿ ಪಳ್ಳಿಗದ್ದೆ ಕಾಡಿನಲ್ಲಿ ನಕ್ಸಲರು ಮತ್ತು ಎಎನ್ಎಫ್ ತಂಡದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ನಂತರದ ದಿನಗಳಲ್ಲಿ ಬಿಸಿಲೆ ಸಮೀಪದ ಭಾಗಿಮಲೆ ಕಾಡಿನಲ್ಲಿ ಎನ್ಐಎ ಎನ್ಕೌಂಟರ್ನಲ್ಲಿ ನಕ್ಸಲ್ ತಂಡದ ಓರ್ವ ಸದಸ್ಯ ಸಾವನ್ನಪ್ಪಿದ್ದ. ಇದೀಗ ಅದೇ ಪರಿಸರದಲ್ಲಿ ಮತ್ತೊಮ್ಮೆ ಶಂಕಿತರು ಭೇಟಿ ನೀಡಿರುವುದು ಸ್ಥಳೀಯರಲ್ಲಿ ಆತಂಕ ಉಂಟು ಮಾಡಿದೆ.