ಕರಾವಳಿಯಲ್ಲಿ ಜೀವ ಹಿಂಡುವ ಬಿಸಿಲಿನ ತಾಪ..!
– ಸುಡು ಬಿಸಿಲಿನಿಂದ ಪಾರಾಗಲು ಮನೆ ಮೇಲೆ ಸ್ಪ್ರಿಂಕ್ಲಾರ್ ಅಳವಡಿಕೆ!
– ಜನರ ನೆತ್ತಿ ಸುಡುತ್ತಿರುವ ಬಿರು ಬಿಸಿಲು
NAMMUR EXPRESS NEWS
ಮಂಗಳೂರು: ಕರ್ನಾಟಕದಲ್ಲಿ ಕೆಲ ವಾರಗಳಿಂದ ಒಂದೇ ಸಮನೆ ರೌದ್ರಾವತಾರ ತೋರುತ್ತಿರುವ ಬಿಸಲು ಜನರ ನೆತ್ತಿ ಸುಡುತ್ತಿದೆ. ಸುಡುವ ಬಿಸಿಲಿಗೆ ಬೆದರಿ ಜನರು ಮನೆಯಿಂದ ಹೊರ ಬರೋಕೆ ಹೆದರುತ್ತಿದ್ದು, ಹವಾಮಾನ ಇಲಾಖೆ ಕೂಡ ಬಿಸಿಲಿನಿಂದ ಪರಾಗಲು ಜನರು ಎಚ್ಚರದಿಂದ ಇರುವಂತೆ ಸೂಚನೆ ನೀಡಿದೆ. ಇನ್ನು ಕಡಲ ನಗರಿ ಮಂಗಳೂರಿನಲ್ಲೂ ಬಿಸಿಲಿನ ತಾಪ ಏರಿದ್ದು, 35° ಸರಾಸರಿಯಲ್ಲಿ ಕರಾವಳಿ ಭಾಗದಲ್ಲಿ ಈ ಬಾರಿಯ ಮಾರ್ಚ್ನಲ್ಲಿ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪ ಏರಿದ್ದರಿಂದ ಮನೆಯೊಳಗೆ ಹಗಲು ಹೊತ್ತು ಕೂರದಂತಹ ಸ್ಥಿತಿ ತುಳುನಾಡಿನಲ್ಲಿ ನಿರ್ಮಾಣವಾಗಿದ್ದು, ಜನರು ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾರೆ. ಈತನ್ಮಧ್ಯೆ ಪುತ್ತೂರಿನ ಪರ್ಲಡ್ಕ ಸಮೀಪ ಮನೆಯೊಂದರಲ್ಲಿ ಹಂಚಿನ ಮನೆಯ ಮೇಲೆ ಸ್ಪ್ರಿಂಕ್ಲಾರ್ ಮೂಲಕ ನೀರು ಹಾಕಿ ತಾಪಮಾನದಿಂದ ಪಾರಾಗಲು ಪ್ರಯತ್ನ ಪಟ್ಟಿದ್ದಾರೆ.
ಮನೆಯ ಮೇಲೆ ಸ್ಪ್ರಿಂಕ್ಲಾರ್ ಹಾಕಿ ನೀರು ಸಿಂಪಡಿಸುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಿಂದ ಜನರು ಯಾವ ಮಟ್ಟಿಗೆ ಬಿಸಿಲಿನ ಬೇಗೆಯಿಂದ ಬಳಲುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಪುತ್ತೂರಿನಲ್ಲಿ 41 ಡಿಗ್ರಿ ಸೆಲ್ಸಿಯಸ್ ನವರೆಗೆ ಮಧ್ಯಾಹ್ನದ ವೇಳೆ ಬಿಸಿಲಿನ ತಾಪ ಏರಿಕೆಯಾಗಿದ್ದು, ಸುಡುವ ಬಿಸಿಲಿನಿಂದ ಪಾರಾಗಲು ಜನರು ಮಧ್ಯಾಹ್ನ ವೇಳೆಗೆ ಮನೆಯಿಂದ ಹೊರಗೆ ಬಾರದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.