ಕರಾವಳಿಗೆ ಓಡಾಡುವ ಉತ್ತರ ಕರ್ನಾಟಕದ ಏಕೈಕ ರೈಲು ಸಮಯ ಬದಲು
– ಕರಾವಳಿ-ಉತ್ತರ ಕರ್ನಾಟಕ ಸಂಪರ್ಕ
– ವಿಜಯಪುರ-ಮಂಗಳೂರು ರೈಲಿನ ವೇಳಾಪಟ್ಟಿ ಪರಿಷ್ಕರಣೆ
NAMMUR EXPRESS NEWS
ಉತ್ತರ ಕರ್ನಾಟಕ ಹಾಗೂ ಕರಾವಳಿ ಭಾಗವನ್ನು ಸಂಪರ್ಕಿಸುವಲ್ಲಿ ಪ್ರಮುಖ ಸಂಚಾರ ಸೇವೆಯಾಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ರೈಲು ವಿಜಯಪುರ-ಮಂಗಳೂರು ಜಂಕ್ಷನ್ ರೈಲು. 2019ರ ನವೆಂಬರ್ನಲ್ಲಿ ವಿಶೇಷ ರೈಲು ಆಗಿ ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲನ್ನು ಪ್ರಾರಂಭಿಸಲಾಗಿದ್ದು, ಬಳಿಕ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ ಈ ರೈಲನ್ನು ರೆಗ್ಯುಲರೈಸ್ ಮಾಡಲಾಗಿದೆ. ಸದ್ಯ ಉತ್ತರ ಕರ್ನಾಟಕ ಭಾಗದಿಂದ ಉಡುಪಿ-ಮಂಗಳೂರು ಸೇರಿದಂತೆ ಕರಾವಳಿ ಭಾಗವನ್ನು ಸಂಪರ್ಕಿಸುತ್ತಿರುವ ಏಕೈಕ ರೈಲು ಸೇವೆ ಇದಾಗಿದೆ.
ಆದರೆ, ಈ ರೈಲು ಮಂಗಳೂರು ಹಾಗೂ ಅತ್ತ ವಿಜಯಪುರಕ್ಕೆ ತಲುಪುವ ಸಮಯವು ಪ್ರಯಾಣಿಕರ ದೃಷ್ಟಿಯಿಂದ ಹೆಚ್ಚು ಅನುಕೂಲಕರವಾಲ್ಲ ಎನ್ನುವುದು ರೈಲು ಸಂಘಟನೆಗಳು ಸೇರಿದಂತೆ ಹಲವರ ಆರೋಪವಾಗಿತ್ತು. ಈ ಸಂಬಂಧ ಅನೇಕ ಬಾರಿ ರೈಲ್ವೆ ಯಾತ್ರಾರ್ಥಿಗಳ ಸಂಘಟನೆಗಳು ಕೂಡ ಸಮಯ ಬದಲಾವಣೆಗೆ ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ.
ಆದರೆ, ಇದೀಗ ನೈಋತ್ಯ ರೈಲ್ವೆ ವಲಯವು ವಿಜಯಪುರ-ಮಂಗಳೂರು ಜಂಕ್ಷನ್ ರೈಲಿನ ಓಡಾಟದ ಸಮಯದಲ್ಲಿ ಪರಿಷ್ಕರಣೆಯನ್ನು ಮಾಡಿದೆ. ಆ ಮೂಲಕ ಈ ರೈಲಿನಲ್ಲಿ ದಿನನಿತ್ಯ ಓಡಾಡುವ ಪ್ರಯಾಣಿಕರ ಬಹುದಿನಗಳ ಬೇಡಿಕೆ ಈಗ ಈಡೇರಿದಂತಾಗಿದೆ.
ರೈಲು ವೇಳಾಪಟ್ಟಿ ಪರಿಷ್ಕರಣೆ
ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಏ.1ರಿಂದ ಅನ್ವಯವಾಗುವಂತೆ ಪರಿಷ್ಕರಿಸಿ ನೈಋತ್ಯ ರೈಲ್ವೆಯು ಅಧಿಸೂಚನೆ ಹೊರಡಿಸಿದೆ. ಆ ಪ್ರಕಾರ, ರೈಲು ವಿಜಯಪುರದಿಂದ ಮಧ್ಯಾಹ್ನ 3.30ಕ್ಕೆ ಹೊರಟು ಮರುದಿನ ಬೆಳಗ್ಗೆ 9.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ. ನಂತರ ವಾಪಾಸ್ ಮಂಗಳೂರು ಜಂಕ್ಷನ್ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ.
ಈಗಿರುವ ವೇಳಾಪಟ್ಟಿಯಲ್ಲಿ ರೈಲು ವಿಜಯಪುರದಿಂದ ಸಂಜೆ 6.35ಕ್ಕೆ ಹೊರಟು ಮರುದಿನ ಮಧ್ಯಾಹ್ನ 12.40ಕ್ಕೆ ತಲುಪುತ್ತಿದೆ. ಹಾಗೆಯೇ, ಮಂಗಳೂರು ಜಂಕ್ಷನ್ನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪುತ್ತದೆ. ಆದರೆ ಈ ಸಮಯವು ಎರಡೂ ಭಾಗದ ಜನರಿಗೆ ಅನುಕೂಲಕರವಾಗಿಲ್ಲ. ಅಂದರೆ, ಈ ರೈಲು ಮಂಗಳೂರಿಗೆ ಮಧ್ಯಾಹ್ನ ಬಂದು ತಲುಪುವ ಕಾರಣ ಉತ್ತರ ಕರ್ನಾಟಕದಿಂದ ಈ ಭಾಗಕ್ಕೆ ಬರುವ ಜನರಿಗೆ ಅದೇದಿನ ತಮ್ಮ ಕೆಲಸಗಳನ್ನು ಮುಗಿಸಿಕೊಂಡು ವಾಪಾಸ್ ಹೋಗುವುದಕ್ಕೆ ಅಸಾಧ್ಯವಾಗುತ್ತಿದೆ.