ಕುಂದಾಪುರ: ಪೆಟ್ರೋಲ್ ಬಂಕಿಗೆ ನುಗ್ಗಿದ ಕಳ್ಳರು!
– ಹಣದ ಬ್ಯಾಗ್ ಕದ್ದು ಪರಾರಿಯಾಗುವಾಗ ಇದ್ದ ಸೇಲ್ಸ್ ಮ್ಯಾನ್
ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ!
– ಆನೆ ಕಂಡು ಗಾಬರಿಕೊಂಡ ಚಾಲಕ: ನಿಯಂತ್ರಣ ಕಳೆದುಕೊಂಡ ಜೀಪ್ ಚರಂಡಿಗೆ
NAMMUR EXPRESS NEWS
ಕುಂದಾಪುರ: ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಳ್ಳರು ನಗದು ತುಂಬಿದ್ದ ಬ್ಯಾಗ್, ಮೊಬೈಲ್ ಸಮೇತ ಪರಾರಿಯಾಗಲು ಯತ್ನಿಸಿದ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಿರಿಮಂಜೇಶ್ವರ ಬಳಿಯ ಕನಕ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಬಂಕ್ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದು ಧೈರ್ಯ ಪ್ರದರ್ಶಿಸಿದ ಹಿನ್ನಲೆ ಕಳ್ಳರ ಪಾಲಾಗಲಿದ್ದ ನಗದು ರಕ್ಷಿಸಿದ್ದಾರೆ.
ಶನಿವಾರ ತಡರಾತ್ರಿ ಕನಕ ಪೆಟ್ರೋಲ್ ಬಂಕ್ ನಲ್ಲಿ ರಾತ್ರಿ 11:00 ವರೆಗೆ ಕಾರ್ಯನಿರ್ವಹಿಸಿದ ಸೇಲ್ಸ್ ಮ್ಯಾನ್ ಬಳಿಕ ಊಟ ಮಾಡಿ ಮೊಬೈಲುಗಳೆರಡನ್ನು ಮತ್ತು ಕ್ಯಾಶ್ಬನ್ ಬ್ಯಾಗನ್ನು ಪೆಟ್ರೋಲ್ ಬಂಕಿನ ಒಳಗೆ ಇಟ್ಟು ಬೀಗ ಹಾಕಿ ಹೊರಗಡೆ ಮಲಗಿದ್ದರು. ರಾತ್ರಿ ಸುಮಾರು 12 ಗಂಟೆಯ ಬಳಿಕ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ಡೂಪ್ಲಿಕೇಟ್ ಕೀ ಬಳಸಿ ಪೆಟ್ರೋಲ್ ಬಂಕ್ ಕಚೇರಿ ಒಳಗೆ ನುಗ್ಗಿದ್ದಾರೆ. ಪೆಟ್ರೋಲ್ ಬಂಕಿನ ಒಳಗೆ ಇಡಲಾಗಿದ್ದ ಎರಡು ಮೊಬೈಲ್ ಹಾಗೂ ಕ್ಯಾಶ್ ಬ್ಯಾಗ್ ನ್ನು ಹಿಡಿದು ಬೈಕ್ ನಲ್ಲಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ.
ಈ ವೇಳೆ ಎಚ್ಚರಗೊಂಡ ಸೇಲ್ಸ್ ಮ್ಯಾನ್ ಕೂಗಿಕೊಂಡು ಕಳ್ಳರನ್ನು ಅಟ್ಟಿಸಿಕೊಂಡು ಹೋಗಿ ಅಡ್ಡಗಟ್ಟಿದ್ದಾರೆ. ಈ ಸಂದರ್ಭ ಓರ್ವ ಕಳ್ಳ ಬೈಕ್ ನಿಂದ ಕೆಳಕ್ಕೆ ಬಿದ್ದಿದ್ದಾನೆ. ಅವನ ರಕ್ಷಣೆಗೆ ಮತ್ತೊಬ್ಬ ಓಡಿ ಬಂದಿದ್ದು, ಸೇಲ್ಸ್ ಮ್ಯಾನ್ ಹಾಗೂ ಕಳ್ಳರ ನಡುವೆ ಬ್ಯಾಗ್ ಗಾಗಿ ಜಟಾಪಟಿ ನಡೆದಿದೆ. ಕಳ್ಳರ ಕೈಯಲ್ಲಿದ್ದ ಕ್ಯಾಶ್ ಬ್ಯಾಗನ್ನು ಕಿತ್ತುಕೊಳ್ಳುವಲ್ಲಿ ಸೇಲ್ಸ್ ಮ್ಯಾನ್ ಯಶಸ್ವಿಯಾಗಿದ್ದಾನೆ. ಆದರೆ ಎರಡು ಮೊಬೈಲ್ ಗಳನ್ಬು ಕಳ್ಳರು ಕದ್ದೊಯ್ದಿದ್ದಾರೆ . ಬೈಕಿನಲ್ಲಿ ಬಂದ ಇಬ್ಬರ ಪೈಕಿ ಒಬ್ಬ ಹೆಲ್ಮೆಟ್ ಹಾಕಿಕೊಂಡಿದ್ದು, ಮತ್ತೊಬ್ಬ ಮಾಸ್ಕ್ ಧರಿಸಿದ್ದ ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ
ಆನೆ ಕಂಡು ಗಾಬರಿಕೊಂಡ ಚಾಲಕ: ನಿಯಂತ್ರಣ ಕಳೆದುಕೊಂಡ ಜೀಪ್ ಚರಂಡಿಗೆ
ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷವಾಗಿದೆ. ಕಳೆದೊಂದು ವಾರದ ಹಿಂದೆ ಒಂಟಿ ಸಲಗ ಚಾರ್ಮಾಡಿ ಘಾಟ್ ನಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿತ್ತು. ಇದೀಗ ಮೇ.12 ರಂದು ರಾತ್ರಿ ಚಾರ್ಮಾಡಿ ಘಾಟ್ ನ ೮ ಮತ್ತು ೯ ನೇ ತಿರುವಿನ ಮಧ್ಯೆ ಒಂಟಿ ಸಲಗ ಮತ್ತೆ ರಸ್ತೆಯಲ್ಲಿ ಪ್ರತ್ಯಕ್ಷವಾಗಿದೆ. ರಾತ್ರಿ ೮ ರ ಸುಮಾರಿಗೆ ಕಾಡಾನೆ ರಸ್ತೆಯ ತೀರ ಬದಿಯಲ್ಲಿ ಇದ್ದು ಕೊಂಚ ಹೊತ್ತು ವಾಹನ ಸವಾರರು ಎರಡು ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿದ್ದರು. ಆನೆ ಕಾಡಿನತ್ತ ತಿರುಗುತ್ತಿದ್ದಂತೆ ವಾಹನಗಳು ಒಡಾಟ ನಡೆಸಿದವು. ಕಳೆದ ಕೆಲ ದಿನಗಳ ಹಿಂದೆ ಘಾಟಿ ಪ್ರದೇಶದಲ್ಲಿ ಹಗಲು ಹಾಗೂ ರಾತ್ರಿ ಕಾಡಾನೆ ಕಂಡುಬಂದು ಆತಂಕ ಮೂಡಿಸಿತ್ತು. ಕೆಲವು ಸಮಯ ಹಿಂದೆ ಇದೇ ರೀತಿ ಕಾಡಾನೆ ರಸ್ತೆಗೆ ಇಳಿದಾಗ ವಾಹನ ಚಾಲಕರು ಹಾರ್ನ್ ಮಾಡಿದಾಗ ಕಿರಿಕಿರಿಗೊಂಡ ಆನೆ ರಾದ್ದಾಂತ ಮಾಡಿತ್ತು.
ಆನೆ ಕಂಡು ಗಾಬರಿಕೊಂಡ ಚಾಲಕ: ನಿಯಂತ್ರಣ ಕಳೆದುಕೊಂಡ ಜೀಪ್ ಚರಂಡಿಗೆ
ಚಿಕ್ಕಮಗಳೂರಿನಿಂದ ಮಂಗಳೂರು ಕಡೆ ಹೋಗುತ್ತಿದ್ದ ಏರ್ ಟೆಲ್ ಕಂಪನಿಯ ಬೊಲೇರೊ ವಾಹನ ಚಾಲಕ ಮಾಝ್ ಒಂಟಿ ಸಲಗವನ್ನು ನೋಡಿ ಗಾಬರಿಕೊಂಡಿದ್ದಾರೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ವಾಹನ ಚರಂಡಿಗೆ ಬಿದ್ದಿದೆ. ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ಬಂದು ವಾಹನವನ್ನು ಮೇಲಕ್ಕೆತ್ತಿದ್ದಾರೆ. ಘಾಟ್ ಸೆಕ್ಷನ್ ನಲ್ಲಿ ಭಾನುವಾರದಿಂದ ಮಳೆಯಾಗುತ್ತಿದ್ದು, ಮಂಜು ಕವಿದ ವಾತಾವರಣವಿದೆ. ಹೀಗಾಗಿ ಆನೆ ಇರುವುದು ತೀರಾ ಸಮೀಪಕ್ಕೆ ಬಂದ ಮೇಲೆಯಷ್ಟೇ ವಾಹನ ಸವಾರರಿಗೆ ತಿಳಿಯುತ್ತಿತ್ತು.