ಟಾಪ್ 4 ನ್ಯೂಸ್ ಕರಾವಳಿ
ಬಂಟ್ವಾಳ: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ
– ಚಾಲಕ ಮೃತ್ಯು ಸಹಸವಾರ ಗಂಭೀರ ಗಾಯ
ಬಂಟ್ವಾಳ: ವ್ಯಕ್ತಿಯ ಸಾವಿನಲ್ಲಿ ಅನುಮಾನ
– ಸಿನಿಮೀಯ ರೀತಿಯಲ್ಲಿ ಶವ ಮೇಲಕ್ಕೆತ್ತಿ ಮರು ತನಿಖೆ.!!!
– ಬೆಳ್ತಂಗಡಿ: ಮನೆಗಳಿಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಕಳವು.!
– ಪಣಂಬೂರು: ಫಿನಾಯಿಲ್ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ
NAMMUR EXPRESS NEWS
ಬಂಟ್ವಾಳ: ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಚಾಲಕ ಮೃತಪಟ್ಟು,ಸಹಸವಾರ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಅಲ್ಲಿಪಾದೆ ಎಂಬಲ್ಲಿ ರಾತ್ರಿ ವೇಳೆ ನಡೆದಿದೆ. ನಾವೂರ ಸಮೀಪದ ಪರಾರಿ ಜಯಪೂಜಾರಿ ( 55) ಮೃತಪಟ್ಟ ವ್ಯಕ್ತಿಯಾಗಿದ್ದು,ಇವರ ಮಗ ರಕ್ಷಿತ್ ಸಹಸವಾರನಾಗಿದ್ದು,ಈತನಿಗೆ ಗಾಯವಾಗಿದ್ದು,ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಕೂಟರ್ ನಲ್ಲಿ ತಂದೆ ಮಗ ಸಂಚಾರ ಮಾಡುತ್ತಿರುವ ವೇಳೆ ಲಾರಿ ಡಿಕ್ಕಿಯಾಗಿದೆ ಎಂದು ಹೇಳಲಾಗಿದೆ. ಅತೀವೇಗ ಮತ್ತು ನಿರ್ಲಕ್ಷ್ಯ ತನದ ಚಾಲನೆಯೇ ಅಪಘಾತಕ್ಕೆ ಕಾರಣವೆನ್ನಲಾಗಿದೆ
ಬಂಟ್ವಾಳ: ವ್ಯಕ್ತಿಯ ಸಾವಿನಲ್ಲಿ ಅನುಮಾನ
– ಸಿನಿಮೀಯ ರೀತಿಯಲ್ಲಿ ಶವ ಮೇಲಕ್ಕೆತ್ತಿ ಮರು ತನಿಖೆ.!!!
ವಿಟ್ಲ : 18 ದಿನಗಳ ಹಿಂದೆ ಗತಿಸಿದ ವ್ಯಕ್ತಿಯ ಸಾವಿನಲ್ಲಿ ನಿಗೂಢತೆ ಇರುವುದಾಗಿ ಆರೋಪಿಸಿ ಮೃತರ ಸಹೋದರ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ದಫನ ಮಾಡಿದ ಮೃತದೇಹವನ್ನು ಮೇಲಕ್ಕೆತ್ತಿ ಮರು ತನಿಖೆ ಮಾಡುವ ಕಾರ್ಯಕ್ಕೆ ಮಂಜೇಶ್ವರ ಹಾಗೂ ವಿಟ್ಲ ಪೊಲೀಸರು ಮುಂದಾಗಿದ್ದಾರೆ. ಕನ್ಯಾನ ಬಳಿಯ ಸುಂಕದಕಟ್ಟೆ ಮಜೀರ್ಪಳ್ಳ ನಿವಾಸಿ ಅಶ್ರಫ್ (44) ಮೃತಪಟ್ಟವರು. ಕನ್ಯಾನ ಬಂಡಿತ್ತಡ್ಕದ ರಹ್ಮಾನಿಯಾ ಜುಮ್ಮಾ ಮಸೀದಿಯಲ್ಲಿ ದಫನ ನಡೆಸಲಾಗಿತ್ತು. ಇವರ ಸಾವಿನಲ್ಲಿ ಅನುಮಾನವಿದೆ ಅದೊಂದು ಸಹಜ ಸಾವಲ್ಲ ಎಂದು ಆರೋಪಿಸಿ ಮೃತರ ಸಹೋದರ ಇಬ್ರಾಹಿಂ ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು, ಧಪನಗೊಂಡ ದೇಹವನ್ನು ಮೇಲಕ್ಕೆತ್ತಿ ಶವ ಪರೀಕ್ಷೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯಾಲಯದ ಆದೇಶ ಪಡೆದು ಮಂಜೇಶ್ವರ ಪೊಲೀಸರು ರಹ್ಮಾನಿಯಾ ಜುಮ್ಮಾ ಮಸೀದಿಗೆ ಗುರುವಾರ ಬೆಳಿಗ್ಗೆ ಆಗಮಿಸಿದ್ದಾರೆ.
ಮಂಗಳೂರಿನ ಯೆನೋಪಯ ಆಸ್ಪತ್ರೆಯ ಫಾರೆನ್ಸಿಕ್ ವಿಭಾಗದ ಸಿಬ್ಬಂದಿಗಳು, ಕಾಸರಗೋಡು ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ತನಿಖೆಗೆ ನೆರವು ನೀಡಲಿದ್ದಾರೆ. ಬಂಟ್ವಾಳ ತಹಶೀಲ್ದಾರ್ ಸ್ಥಳದಲ್ಲಿ ಉಪಸ್ಥಿತರಿದ್ದಾರೆ. ಸ್ಥಳದಲ್ಲಿ ಕುತೂಹಲಿಗಳು ಬೀಡು ಬಿಟ್ಟಿದ್ದಾರೆ. ಮೃತ ಅಶ್ರಫ್ ನವರು ತಮ್ಮವಾಸದ ಮನೆ ಸಮೀಪ ಗೂಡಂಗಡಿ ನಡೆಸುತ್ತಿದ್ದು, ಮೇ 5 ರಂದು ರಾತ್ರಿ ಗೂಡಂಗಡಿ ಮುಚ್ಚಿದ ಬಳಿಕ, ಆಹಾರ ಸೇವಿಸಿ ನಿದ್ರಿಸಿದ್ದರು. ಆದರೇ ಮರು ದಿನ ಬೆಳಗ್ಗೆ 6 ಗಂಟೆಗೆ ಅವರನ್ನು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿತ್ತು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪತ್ನಿ ಇತರರಿಗೆ ಮಾಹಿತಿ ನೀಡಿದ್ದಳು. ಅಶ್ರಫ್ ಸಾವನ್ನಪ್ಪುವ ಸಂದರ್ಭ ಸಹೋದರ ಇಬ್ರಾಹಿಂ ಪುಣೆಯಲ್ಲಿದ್ದರು. ಸಾವಿನಲ್ಲಿ ನಿಗೂಢತೆ ಇರುವುದಾಗಿ ಸೂಚಿಸಿ ಇಬ್ರಾಹಿಂ ಪೊಲೀಸರಿಗೆ ದೂರು ನೀಡಿದ್ದಾರೆ. ಕೇಸು ದಾಖಲಿಸಿಕೊಂಡ ಮಂಜೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ: ಮನೆಗಳಿಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಕಳವು.!
ಬೆಳ್ತಂಗಡಿ : ಮನೆಯ ಬಾಗಿಲು ಮುರಿದು, ಎರಡು ಮನೆಗಳಲ್ಲಿ ಕಳ್ಳತನ ನಡೆಸಿರುವ ಘಟನೆ ಮೇ. 22 ರಂದು ತೆಂಕಕಾರಂದೂರು ಗ್ರಾಮದ ಪಲ್ಕೆ ಎಂಬಲ್ಲಿ ನಡೆದಿದೆ. ತೆಂಕಕಾರಂದೂರು ಗ್ರಾಮದ ಪಲ್ಕೆ ನಿವಾಸಿ ಪ್ರೇಮ ಶೆಟ್ಟಿ ಹಾಗೂ ಮುಂಡೆಲ್ ವಿಶ್ವನಾಥ ಶೆಟ್ಟಿ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ವೃದ್ಧೆ ಪ್ರೇಮ ಶೆಟ್ಟಿ ತಮ್ಮ ಮನೆಯಲ್ಲಿ ಮಗನೊಂದಿಗೆ ಇದ್ದಾಗ ತಡರಾತ್ರಿ ಹಿಂಬದಿ ಬಾಗಿಲು ಒಡೆದು ರೂಮ್ ನಲ್ಲಿರುವ ಕಪಾಟು ಹೊಡೆದು ಸುಮಾರು 20 ಪವನ್ ಚಿನ್ನ, ಇತರ ದಾಖಲೆಗಳ ಬ್ಯಾಗನ್ನೇ ಎಗರಿಸಿ ಪರಾರಿಯಾಗಿದ್ದಾರೆ. ಕಪಾಟಿನ ಸಮೀಪವೇ ಮನೆಮಂದಿ ಮಲಗಿದ್ದರೂ ಕಳ್ಳರು ಚಾಣಾಕ್ಷತನದಿಂದ ಕದ್ದಿದ್ದು, ಮನೆಮಂದಿಗೆ ಎಚ್ಚರವಾಗಿರಲಿಲ್ಲ. ಪ್ರೇಮಾ ಅವರ ಮನೆಯಿಂದ ಕೇವಲ 200 ಮೀಟರ್ ಸಮೀಪದಲ್ಲಿರುವ ಕರಂಬಾರು ಗ್ರಾಮದ ಮುಂಡೆಲ್ ವಿಶ್ವನಾಥ ಶೆಟ್ಟಿಯವರ ಮನೆಯಲ್ಲೂ ಕಳ್ಳತನ ನಡೆಸಲಾಗಿದೆ. ಮನೆಯವರ ಸಂಬಂಧಿಕರ ಮನೆಯಲ್ಲಿ ಕೋಲ ಇರುವ ಕಾರಣ ಸಂಜೆ ತೆರಳಿದ್ದು ಮನೆಯ ಬಾಗಿಲು ಒಡೆದು 4 ಪವನ್ ಚಿನ್ನ ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ವೇಣೂರು ಠಾಣೆ ಉಪನಿರೀಕ್ಷಕ ಶ್ರೀಶೈಲ ಅವರ ತಂಡ ಆಗಮಿಸಿ ತನಿಖೆ ಮುಂದುವರೆಸಿದೆ.
– ಪಣಂಬೂರು: ಫಿನಾಯಿಲ್ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ
ಪಣಂಬೂರು: ನವಮಂಗಳೂರು ಬಂದರಿನ ಒಳಗೆ ಖಾಸಗಿ ಕಂಪನಿಯಲ್ಲಿ 6 ವರ್ಷಗಳಿಂದ ಲಾರಿಗಳಿಗೆ ಟರ್ಪಾಲ್ ಅಳವಡಿಸುವ ಕೆಲಸ ಮಾಡುತ್ತಿದ್ದ 42 ಕಾರ್ಮಿಕರನ್ನು ದಿಢೀರ್ ಕೆಲಸದಿಂದ ತೆಗೆದು ಹಾಕಿದ್ದು, ಹತಾಶೆಗೊಂಡ ಇಬ್ಬರು ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಂಭವಿಸಿದೆ. ಕಾರ್ಮಿಕರು ಹಾಗೂ ಅವರ ಕುಟುಂಬ ಹಾಗೂ ಮಕ್ಕಳು ಬಂದರಿನ ಕೆ.ಕೆ. ಗೇಟ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರು. ಮೂರ್ನಾಲ್ಕು ತಾಸಾದರೂ ಸಂಬಂಧಿತ ಕಂಪನಿಯ ಅಧಿಕಾರಿಗಳು ಬಾರದೇ ಇದ್ದಾಗ ಹತಾಶೆಗೊಂಡ ಇಬ್ಬರು ಫಿನಾಯಿಲ್ ಸೇವಿಸಿದರು. ತಕ್ಷಣ ಮಾಜಿ ಮನಪಾ ಸದಸ್ಯ ರಘುವೀರ್ ಪಣಂಬೂರು, ಬಿಜೆಪಿ ಮುಖಂಡ ರಣ್ದೀಪ್ ಕಾಂಚನ್ ಮತ್ತಿತರರು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸಹಕರಿಸಿದರು. ಕನ್ನಡಿಗರಿಗೆ ಅನ್ಯಾಯ: ಈ ಸಂದರ್ಭ ರಣ್ದೀಪ್ ಕಾಂಚನ್ ಮಾತನಾಡಿ, ದಿನಕ್ಕೆ 500-600 ರೂ. ದುಡಿಯುವ ಕಾರ್ಮಿಕರನ್ನು ಏಕಾಏಕಿ ಕೆಲಸಕ್ಕೆ ಬೇಕಾದ ಪಾಸ್ ನೀಡದೆ ಬಂದರು ಒಳಗೆ ಹೋಗಲು ಬಿಡಲಿಲ್ಲ. ಅವರೆಲ್ಲ ಕನ್ನಡಿಗರಾಗಿದ್ದು ಇವರ ಬದಲಿಗೆ ಹಿಂದಿ ಭಾಷಿಕರನ್ನು ನಿಯೋಜಿಸಿದ್ದಾರೆ. ಇದು ರಾಜ್ಯದ ಮಂದಿಗೆ ಮಾಡಿರುವ ಅನ್ಯಾಯವಾಗಿದೆ ಎಂದರು.