ಕರಾವಳಿ ಟಾಪ್ 5 ನ್ಯೂಸ್..!
– ವಿವಿ ಹಾಸ್ಟೆಲ್ನಲ್ಲಿ ಕಳಪೆ ಗುಣಮಟ್ಟದ ಆಹಾರ: ವಿದ್ಯಾರ್ಥಿಗಳ ಪ್ರತಿಭಟನೆ!
– ಎಂಡಿಎಂಎ ಮಾರಾಟ – ಇಬ್ಬರು ಅರೆಸ್ಟ್.!
– ಹಿಮ್ಮುಖ ಚಲಿಸಿದ ಟಿಪ್ಪರ್; ಸ್ಕೂಟರ್ ಜಖಂ!
– ಕಾರ್ಕಳ: ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ.!
– ಹಿರ್ಗಾನ: ಕೀಟನಾಶಕ ಸೇವಿಸಿ ವ್ಯಕ್ತಿ ಸಾವು!
NAMMUR EXPRESS NEWS
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಹಾಸ್ಟೆಲ್ನಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬುಧವಾರ ರಾತ್ರಿ ಉಪಕುಲಪತಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಿದರು.
ವಿಸಿ ನಿವಾಸದ ಮುಂದೆ ಹಳಸಿದ ಅಕ್ಕಿ ಇರುವ ಪಾತ್ರೆಗಳನ್ನು ಇಟ್ಟು ಪ್ರತಿಭಟನೆ ನಡೆಸಿದರು.ಕೆಲ ಸಮಯದಿಂದ ಆಹಾರದ ಗುಣಮಟ್ಟ ಕಳಪೆಯಾಗಿದ್ದು, ಅಡುಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಬೆಂಗಳೂರಿಗೆ ಬಂದಿದ್ದ ವಿಸಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಎಂಡಿಎಂಎ ಮಾರಾಟ – ಇಬ್ಬರು ಅರೆಸ್ಟ್.!
ಮಂಗಳೂರು : ನಿಷೇಧಿತ ಎಂಡಿಎಂಎ ಡ್ರಗ್ಸ್ ಮಾರಾಟಕ್ಕೆ ಯತ್ನಿಸಿದ್ದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ ಅರೆಸ್ಟ್ ಮಾಡಲಾಗಿದೆ. ಬಂಧಿತರನ್ನು ಮೊಹಮ್ಮದ್ ಇಶಾನ್ (35), ಜಾಫರ್ ಸಾಧಿಕ್ (35) ಎಂದು ಗುರುತಿಸಲಾಗಿದೆ. ಆರೋಪಿಗಳು ದಿನಾಂಕ 01-05-2024 ರಂದು ಮಂಗಳೂರು ನಗರದ ಕೋಟೆಕಾರ್ ಬೀರಿ ಬಳಿಯ ಮನೆಯೊಂದರಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ಬೃಹತ್ ಪ್ರಮಾಣದಲ್ಲಿ ಅಕ್ರಮವಾಗಿ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿದ ಮಂಗಳೂರು ಸಿಸಿಬಿ ಪೊಲೀಸರು ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ. ಆರೋಪಿತರು ಬೆಂಗಳೂರಿನಿಂದ ಮಾದಕ ವಸ್ತುವನ್ನು ಖರೀದಿಸಿ ತಂದು ಮಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದನೆ ಮಾಡಲು ಪ್ರಯತ್ನಿಸುತ್ತಿದ್ದರು. ಆರೋಪಿತರಿಂದ 9,00,000/- ರೂ ಮೌಲ್ಯದ 407 ಗ್ರಾಂ ನಿಷೇಧಿತ ಎಂಡಿಎಂಎ ಮಾದಕ ವಸ್ತು, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿರುತ್ತಾರೆ.
ಹಿಮ್ಮುಖ ಚಲಿಸಿದ ಟಿಪ್ಪರ್; ಸ್ಕೂಟರ್ ಜಖಂ!
ಕಾರ್ಕಳ: ಟಿಪ್ಪರ್ ಚಾಲಕ ಟಿಪ್ಪರನ್ನು ಮುನ್ಸೂಚನೆ ನೀಡದೆ ಹಿಮ್ಮುಖವಾಗಿ ಚಲಾಯಿಸಿದ ಪರಿಣಾಮ ಟಿಪ್ಪರ್ ಸ್ಕೂಟರ್ ಮೇಲೆ ಚಲಿಸಿ ಸ್ಕೂಟರ್ ಜಖಂಗೊಂಡ ಘಟನೆ ಮುಲ್ಲಡ್ಕ ಗ್ರಾಮದಲ್ಲಿ ನಡೆದಿದೆ. ಸೋಮನಾಥ ಮುಂಡ್ಕೂರು ಅವರು ಸ್ಕೂಟರ್ ಅನ್ನು ಸಂಕಲಕರಿಯ ಕಡೆಯಿಂದ ಮುಲ್ಲಡ್ಕದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದರು. ಅದೇ ದಾರಿಯಲ್ಲಿ ಮುಂಡ್ಕೂರಿನಿಂದ ಮುಲ್ಲಡ್ಕ ಕಡೆಗೆ ಟಿಪ್ಪರ್ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಸವಾರ ಅಪಾಯದಿಂದ ಪಾರಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ.!
ಕಾರ್ಕಳ: ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಆರೋಪದಲ್ಲಿ ನಿಟ್ಟೆ ಸೆವೆರಿನ್ ಡಿ ಸೋಜಾ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫ್ಲೋರಿನ್ ಸಲ್ದಾನ ಅವರು ತಮ್ಮ ಮನೆಯ ಶೌಚಾಲಯ ಗುಂಡಿಯನ್ನು ಜೆಸಿಬಿ ಮೂಲಕ ಮುಚ್ಚುತಿದ್ದಾಗ ಸೆವೆರಿನ್ ಡಿ ಸೋಜಾ ಅಕ್ರಮವಾಗಿ ಪ್ರವೇಶಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂದರ್ಭ ನಡೆದಿರುವ ಹಲ್ಲೆಯಿಂದ ಫ್ಲೋರಿನ್ ಸಲ್ದಾನ ಗಾಯಗೊಂಡಿದ್ದು, ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಹಿರ್ಗಾನ: ಕೀಟನಾಶಕ ಸೇವಿಸಿ ಸಾವು!
ಕಾರ್ಕಳ: ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಹಿರ್ಗಾನ ನಿವಾಸಿ ಧರ್ಣಪ್ಪ (61) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಎರಡು ವರ್ಷಗಳ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಿಂದ ಅವರ ಕೈಗೆ ಗಾಯವಾಗಿತ್ತು. ಆಗಾಗ್ಗೆ ನೋವು ಬರುತ್ತಿದ್ದುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇದೇ ಕಾರಣದಿಂದ ನೊಂದು ಅವರು ಎ.24ರಂದು ಕೀಟನಾಶಕ ಸೇವಿಸಿದ್ದರು. ಬಳಿಕ ಅವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಎ.28ರಂದು ಮೃತಪಟ್ಟರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.