ಟಾಪ್ ನ್ಯೂಸ್ ಕರಾವಳಿ
ಕರಾವಳಿಯಲ್ಲಿ ಏನೇನಾಗಿದೆ… ಇಲ್ಲಿದೆ ನ್ಯೂಸ್!
– ಸುಳ್ಯ: ಹೋಟೆಲಿಗೆ ಡಿಕ್ಕಿ ಹೊಡೆದ ಕಾರು!
– ಬೈಂದೂರು: ಅಪಘಾತಕ್ಕೆ ಓರ್ವ ಬಲಿ
– ಅಜೆಕಾರು: ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು
– ಬಂಟ್ವಾಳ: ರಸ್ತೆಗೆ ಅಡ್ಡ ಬಂದ ನಾಯಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರಿಗೆ ಗಾಯ
– ಬಂಟ್ವಾಳ: ಕೂಲಿ ಕೇಳಿದ್ದಕ್ಕೆ ಕಾರ್ಮಿಕಗೆ ಜಾತಿನಿಂದನೆಗೈದು ಹಲ್ಲೆ
– ಮಂಗಳೂರು: ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ
NAMMUR EXPRESS NEWS
ಸುಳ್ಯ: ಪುತ್ತೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್ವೊಂದಕ್ಕೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ದಂಪತಿಗೆ ಗಂಭೀರ ಗಾಯಗೊಂಡು, ಸುಳ್ಯದ ಆಸ್ಪತ್ರೆಗೆ ದಾಖಲಾದ ಘಟನೆ ದ.ಕ. ಸಂಪಾಜೆ ಎಂಬಲ್ಲಿ ಮೇ.3ರ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ವಿಟ್ಲದ ಅಡ್ಯನಡ್ಕದ ದಂಪತಿಗಳು ಕಾರಿನಲ್ಲಿ ಮಡಿಕೇರಿ ಕಡೆಗೆ ಹೋಗುತ್ತಿದ್ದ ವೇಳೆ ಸಂಪಾಜೆಯ ಹೈವೆ ಹೋಟೆಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೋಟೆಲಿನ ಮುಂಭಾಗದ ಗೋಡೆಗೆ ಢಿಕ್ಕಿ ಹೊಡೆದಿದೆ. ಈ ಪರಿಣಾಮ ಕಾರು ಚಾಲಕ ಹಾಗೂ ಮುಂಭಾಗದಲ್ಲಿ ಕುಳಿತಿದ್ದ ಅವರ ಪತ್ನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯರು ಸೇರಿ ಅಂಬ್ಯುಲೆನ್ಸ್ ಮೂಲಕ ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
– ಟೆರೇಸಿನಿಂದ ಬಿದ್ದ ಮುಖ್ಯ ಶಿಕ್ಷಕ ಸಾವು
ಅಜೆಕಾರು: ತೀವ್ರ ಸೆಖೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸಿನಲ್ಲಿ ಮಲಗಿದ್ದ ಎಣ್ಣೆಹೊಳೆ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ. ಅಜೆಕಾರು ಬೊಂಡುಕುಮೇರಿ ಆಶ್ರಯ ನಗರ ನಿವಾಸಿ ಸುಂದರ್ ನಾಯ್ಕ (55) ಮೃತ ಶಿಕ್ಷಕ. ಅವರು ಮೇ 1ರಂದು ರಾತ್ರಿ ಸುಮಾರು 10.30ರ ವೇಳೆಗೆ ಟೆರೇಸಿನಲ್ಲಿ ಮಲಗಿದ್ದರು. ಬೆಳಗ್ಗೆ 6.30ರ ವೇಳೆಗೆ ಮನೆಯವರು ನೋಡುವಾಗ ಕೆಳಗೆ ಬಿದ್ದು ಮೃತಪಟ್ಟಿರುವುದು ಗಮನಕ್ಕೆ ಬಂದಿದೆ. ಗಾಢಾ ನಿದ್ರೆಯಲ್ಲಿ ಆಯ ತಪ್ಪಿ ಕೆಳಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೃತರು ಪತ್ನಿ, ಪುತ್ರಿಯರನ್ನು ಅಗಲಿದ್ದಾರೆ
– ಬೈಂದೂರು: ಅಪಘಾತಕ್ಕೆ ಓರ್ವ ಬಲಿ
ಬೈಂದೂರು: ಬೈಂದೂರು ಸಮೀಪ ಬೊಲೇರೊ
ವಾಹನ ರಸ್ತೆಯ ಡಿವೈಡರ್ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವಿಗೀಡಾಗಿದ್ದು, ಇತರ ಐವರು ಗಾಯಗೊಂಡಿದ್ದು ಓರ್ವ ಸಾವನ್ನಪ್ಪಿದ ಘಟನೆ ಕಿರಿಮಂಜೇಶ್ವರ ರಾ.ಹೆದ್ದಾರಿಯಲ್ಲಿ ನಡೆದಿದೆ . ರಾಮಣ್ಣ ಮೃತಪಟ್ಟ ವ್ಯಕ್ತಿ. ಬಾಗಲಕೋಟೆ ಜಿಲ್ಲೆಯ ಹನಮಂತ ಹಾಗೂ ಮನೆಯವರು ಉಡುಪಿಯಿಂದ ಬೊಲೇರೋ ವಾಹನದಲ್ಲಿ ಅವರ ಮಾವನ ಮಗನ ಮದುವೆಯ ಹಿನ್ನೆಲೆಯಲ್ಲಿ ಬಾದಾಮಿಗೆ ಹೋಗಿ ಬೆಳಗ್ಗಿನ ಜಾವ 4.30ರ ವೇಳೆ ಕಿರಿಮಂಜೇಶ್ವರ ತಲುಪಿದಾಗ ಅಪಘಾತ ನಡೆದಿದೆ. ಡಿವೈಡರ್ಗೆ ಢಿಕ್ಕಿಯಾಗಿ ವಾಹನ 50 ಅಡಿ ದೂರ ಸಾಗಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ ನಿಂತಿತು. ರಾಮಣ್ಣ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಕುಂದಾಪುರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಪರೀಕ್ಷಿಸಿ ಮೃತರಾಗಿರುವುದಾಗಿ ತಿಳಿಸಿದರು. ಚಾಲಕ ನಿರಂಜನ,ಶಿವಕ್ಕ ರೇಷ್ಮಾ ಕಾವ್ಯ ಪ್ರಜ್ವಲ್ ಗಾಯಗೊಂಡವರು.ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
– ಬಂಟ್ವಾಳ: ರಸ್ತೆಗೆ ಅಡ್ಡ ಬಂದ ನಾಯಿ ಬೈಕ್ ಸ್ಕಿಡ್ ಆಗಿ ಸವಾರರಿಬ್ಬರಿಗೆ ಗಾಯ
ಬಂಟ್ವಾಳ : ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರರಿಬ್ಬರು ಗಾಯಗೊಂಡ ಘಟನೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ಸಂಭವಿಸಿದೆ. ಗಾಯಾಳು ಬೈಕ್ ಸವಾರರನ್ನು ಮುಸ್ತಫಾ ಹಾಗೂ ಆತನ ಸಂಬಂಧಿ ಸಂಶುದ್ದೀನ್ ಎಂದು ಹೆಸರಿಸಲಾಗಿದೆ. ಮುಸ್ತಾಫ್ ಅವರು ಸಂಶುದ್ದೀನ್ ಅವರನ್ನು ಹಿಂಬದಿ ಸವಾರನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿರುವ ವೇಳೆ ಪುಣಚ ಗ್ರಾಮದ ಅಜ್ಜಿನಡ್ಕ ಎಂಬಲ್ಲಿ ನಾಯಿಯೊಂದು ರಸ್ತೆಗೆ ಅಡ್ಡ ಬಂದು ಚಾಲಕನ ನಿಯಂತ್ರಣ ಮೀರಿದ ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಬೈಕ್ ಸವಾರ ಮುಸ್ತಫಾಗೆ ತರಚಿದ ಗಾಯಗಳಾಗಿದ್ದು, ತೀವ್ರ ಗಾಯಗೊಂಡ ಸಹಸವಾರ ಸಂಶುದ್ದೀನ್ ಅವರನ್ನು ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ.
– ಬಂಟ್ವಾಳ: ಕೂಲಿ ಕೇಳಿದಕ್ಕೆ ಹಲ್ಲೆ?
ಬಂಟ್ವಾಳ: ಮರಳು ಲೋಡ್ ಮಾಡಿದ ಬಗ್ಗೆ ಕೂಲಿ ಹಣ ಕೇಳಿದ್ದಕ್ಕೆ ಇಬ್ಬರು ಸೇರಿ ಕಾರ್ಮಿಕಗೆ ಜಾತಿ ನಿಂದನೆಗೈದು ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಕೂಲಿ ಕಾರ್ಮಿಕನನ್ನು ನಾವೂರು ನಿವಾಸಿ ಧನಂಜಯ (24) ಎಂದು ಹೆಸರಿಸಲಾಗಿದ್ದು, ಆರೋಪಿಗಳನ್ನು ನಿಸಾರ್ ಹಾಗೂ ಸುನಿಲ್ ಎಂದು ಹೆಸರಿಸಲಾಗಿದೆ. ಧನಂಜಯ ಅವರು ಕೂಲಿ ಕಾರ್ಮಿಕನಾಗಿದ್ದು, ಎ 27 ರಂದು ಆರೋಪಿ ನಿಸಾರ್ ಸೂಚಿಸಿದಂತೆ ಮರಳು ಲೋಡು ಕೆಲಸ ಮಾಡಿದ್ದು, ಸದ್ರಿ ಕೆಲಸದ ಬಗ್ಗೆ ನಿಸಾರ್ ಕೂಲಿ ಹಣ ನೀಡದಿದ್ದು, ಈ ಬಗ್ಗೆ ಎ 30 ರಂದು ರಾತ್ರಿ ಕರೆ ಮಾಡಿ ಕೂಲಿ ನಿಸಾರನಲ್ಲಿ ಹಣವನ್ನು ಕೇಳಿರುತ್ತಾರೆ.
ಈ ವೇಳೆ ಆರೋಪಿ ಧನಂಜಯ ಅವರನ್ನುದ್ದೇಶಿಸಿ ಅವ್ಯಾಚವಾಗಿ ಬೈದಿರುತ್ತಾನೆ. ಮುಂದುವರಿದಂತೆ ಮೇ 1 ರಂದು ಮದ್ಯಾಹ್ನ ಧನಂಜಯ ಅವರು ನಾವೂರು ಶಾಲೆಯ ಬಳಿ ನಿಂತಿದ್ದಾಗ ಮತ್ತೋರ್ವ ಆರೋಪಿ ಸುನೀಲ್ ಎಂಬಾತ ಬಂದು ಆರೋಪಿತ ನಿಸಾರ್ ಬಳಿ ಕೂಲಿ ಹಣವನ್ನು ಕೇಳಿರುವ ಬಗ್ಗೆ ತಕರಾರು ತೆಗೆದು ಧನಂಜಯ ಅವರಿಗೆ ಹಲ್ಲೆ ನಡೆಸಿ ಹೋಗಿರುತ್ತಾನೆ. ನಂತರ ಸ್ವಲ್ಪ ಸಮಯದ ಬಳಿಕ ಧನಂಜಯ ಅವರು ನಾವೂರು ಆಸ್ಪತ್ರೆಯ ಬಸ್ ತಂಗುದಾಣದ ಬಳಿಯಿದ್ದಾಗ ಆರೋಪಿಗಳಾದ ಸುನೀಲ್ ಹಾಗೂ ನಿಸಾರ್ ಇಬ್ಬರೂ ಬಂದು ಅವ್ಯಾಚವಾಗಿ ಬೈದು, ಜಾತಿ ನಿಂದನೆ ಮಾಡಿರುವುದಲ್ಲದೆ ಜೀವ ಬೆದರಿಕೆ ಒಡ್ಡಿ ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
– ಪಾಣೆಮಂಗಳೂರು: ನೇತ್ರಾವತಿ ಸೇತುವೆ ಮೇಲೆ ಟಿಪ್ಪರ್-ಸ್ಕೂಟರ್ ಅಪಘಾತ
ಪಾಣೆಮಂಗಳೂರು : ಹೊಸ ನೇತ್ರಾವತಿ ಸೇತುವೆಯ ಮೇಲೆ ಟಿಪ್ಪರ್ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಭವಿಸಿದೆ. ಮೃತ ಸ್ಕೂಟರ್ ಸವಾರನನ್ನು ನರಿಕೊಂಬು ಗ್ರಾಮದ ಪೊಯಿತಾಜೆ ನಿವಾಸಿ ಸುಬ್ಬು ಭಂಡಾರಿ (68) ಎಂದು ಹೆಸರಿಸಲಾಗಿದೆ. ಭಂಡಾರಿ ಅವರು ಸ್ಕೂಟರಿನಲ್ಲಿ ಬರುತ್ತಿದ್ದ ವೇಳೆ ನೇತ್ರಾವತಿ ಸೇತುವೆ ಮೇಲೆ ಬದ್ರುಲ್ ಮುನೀರ್ ಎಂಬವರು ಚಲಾಯಿಸಿಕೊಂಡು ಬಂದ ಟಿಪ್ಪರ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸುಬ್ಬ ಭಂಡಾರಿ ಅವರನ್ನು ತಕ್ಷಣ ಬಿ ಸಿ ರೋಡಿನ ಸೋಮಯಾಜಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಸ್ಥಳಕ್ಕಾಗಮಿಸಿದ ಬಂಟ್ವಾಳ ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡರು. ಮೃತರ ಸಂಬಂಧಿ ರಂಜಿತ್ ಕುಮಾರ್ ಎಂಬವರು ನೀಡಿದ ದೂರಿನಂತೆ ಈ ಬಗ್ಗೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.