ಕರಾವಳಿ ಟಾಪ್ ನ್ಯೂಸ್
ಬೆಳ್ತಂಗಡಿಯಲ್ಲಿ ಬಾಲಕಿ ರೇಪ್: ಮೂವರು ಅರೆಸ್ಟ್!
– ಗರ್ಭವತಿ ಆಗಿದ್ದರಿಂದ ಪ್ರಕರಣ ಗೊತ್ತಾಯ್ತು
– ಕುಂದಾಪುರ: ಕರಾವಳಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿ ರೇಪ್ ಕೇಸ್
– ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಮಾಡುತ್ತಿದ್ದ ಕಾಮುಕ!
– ಕೋಟ: ಬೈಕ್-ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
NAMMUR EXPRESS NEWS
ಬೆಳ್ತಂಗಡಿ: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಮೂವರು ಯುವಕರು ಬಲಾತ್ಕಾರದಿಂದ ಅತ್ಯಾಚಾರ ಮಾಡಿ ಆಕೆ ಆರು ತಿಂಗಳ ಗರ್ಭವತಿಯಾಗಲು ಕಾರಣವಾಗಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪ ತಡವಾಗಿ ಬೆಳಕಿಗೆ ಬಂದಿದೆ. ನೊಂದ ಬಾಲಕಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೇ 31ರಂದು ನೀಡಿದ ದೂರಿನ ಮೇರೆಗೆ ಅಪ್ರಾಪ್ತ ವಯಸ್ಸಿನ ಬಾಲಕ ಸೇರಿ ಮೂವರ ವಿರುದ್ಧ ಗ್ಯಾಂಗ್ ರೇಪ್ ಮತ್ತು ಪೋಕೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂಡುಬಿದಿರೆ ನಿವಾಸಿಗಳಾದ ಮಹಮ್ಮದ್ ಇಟ್ಬಾಲ್ (26), ಫಾರೂಕ್ (19) ಹಾಗೂ 18 ವರ್ಷ ತುಂಬದ ಬಾಲಕನನ್ನು ಜೂ. 1ರಂದು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಬಾಲಕನನ್ನು ಮಂಗಳೂರು ಬಾಲ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ರಿಮ್ಯಾಂಡ್ ಹೊಂಗೆ ಸೇರಿಸಲಾಗಿದೆ. ಅತ್ಯಾಚಾರಕ್ಕೆ ಒಳಗಾದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಂದಾಪುರ: ಕರಾವಳಿಯಲ್ಲಿ ಪ್ರಜ್ವಲ್ ರೇವಣ್ಣ ಮಾದರಿ ರೇಪ್ ಕೇಸ್
ಉಡುಪಿ : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣ ಇಡೀ ದೇಶದಲ್ಲಿ ಭಾರಿ ಸದ್ದು ಮಾಡುತ್ತಿದೆ. ಈಗ ಇದೇ ಮಾದರಿ ಎನ್ನಲಾದ ಮತ್ತೊಂದು ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಪ್ರಕರಣವು ಪ್ರಜ್ವಲ್ ರೇವಣ್ಣ ಪ್ರಕರಣದ ಮಾದರಿಯನ್ನು ಹೋಲುತ್ತಿದೆ. ಈ ಪ್ರಕರಣದಲ್ಲಿ ಉದ್ಯಮಿಯಾಗಿರುವ ಶ್ರೇಯಸ್ ನಾಯ್ಕ (25) ಎಂಬ ಆರೋಪಿ ತನ್ನ ಪ್ರಭಾವ ಬಳಸಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಉಡುಪಿಯ ಕುಂದಾಪುರ ತಾಲೂಕಿನ ಅಮಾವಾಸ್ಯೆಬೈಲು ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದಾನೆ.
ಕೋಟ: ಬೈಕ್ ಗೆ KSRTC ಬಸ್ ಡಿಕ್ಕಿ: ಬೈಕ್ ಸವಾರ ಸ್ಥಳದಲ್ಲೇ ಸಾವು
ಕೋಟ : ಕೆಎಸ್ಆರ್ ಟಿಸಿ ಬಸ್ಸೊಂದು ಬೈಕ್ ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಸರ್ಕಲ್ ನಲ್ಲಿ ನಡೆದಿದೆ. ಮೃತಪಟ್ಟ ಬೈಕ್ ಸವಾರ ಕೋಟತಟ್ಟು ಕಲ್ಮಾಡಿ ರಸ್ತೆಯ ಪಾತ್ರಿ ಮಂಜುನಾಥ್ ಗಾಣಿಗರವರ ಪುತ್ರ ವಾಸುದೇವ ಗಾಣಿಗ (33) ಎಂದು ಗುರುತಿಸಲಾಗಿದೆ. ವಾಸುದೇವ ಗಾಣಿಗರು ರಾತ್ರಿ ಸುಮಾರು 12 ಗಂಟೆಗೆ ತೆಕ್ಕಟ್ಟೆ ಸಾಯಿಗ್ರಾಂಡ್ ಹೋಟೆಲ್ ನಲ್ಲಿ ಕೆಲಸ ಮುಗಿಸಿ ಮನೆಗೆ ಹೋಗಲು ಕೋಟ ಸರ್ಕಲ್ ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಮಂಗಳೂರಿನಿಂದ ಶಿರಸಿ ಕಡೆ ಹೋಗುವ ಕೆಎಸ್ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿರುತ್ತದೆ. ಅಪಘಾತದಲ್ಲಿ ಬೈಕ್ ಸವಾರನಿಗೆ ತೆಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ ಎಂದು ತಿಳಿದು ಬಂದಿದೆ. ಕೋಟ ಠಾಣೆಯ ಎಎಸ್ಐ ಜಯಪ್ರಕಾಶ್ ಹಾಗೂ ಸಿಬ್ಬಂದಿ ಅಶೋಕ್ ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಕೋಟ ಶವಗಾರಕ್ಕೆ ಸಾಗಿಸಿರುತ್ತಾರೆ.
ಕಾಪು : ದರೋಡೆಗೆ ಸಂಚು: 6 ಮಂದಿ ಬಂಧನ
ಕಾಪು: ದರೋಡೆಗೆ ಹೊಂಚು ಹಾಕಿ, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕಾರ್ಫಿಯೋ ಕಾರಿನಲ್ಲಿ ಸಂಚರಿಸುತ್ತಿದ್ದ ತಂಡವೊಂದನ್ನು ಕಾಪು ಪೊಲೀಸರು ಬಂದಿಸಿದ್ದಾರೆ. ರಾ.ಹೆ.66ರ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರಿಗೆ ತಡೆಯೊಡ್ಡಿದ ಪೊಲೀಸರು ಆರೋಪಿಗಳಾದ ಅಮಿತ್ ರಾಜ್, ಪ್ರಕಾಶ್ ಸುರತ್ಕಲ್, ವರುಣ್ ನೀರುಮಾರ್ಗ, ಕಾರ್ತಿಕ್ ಶೆಟ್ಟಿ ಸುರತ್ಕಲ್, ಅಭಿಷೇಕ್, ಶ್ರೀಕಾಂತ್ ಶ್ರೀಪತಿ ಪರಂಗಿಪೇಟೆ ಎಂಬವರನ್ನು ಬಂದಿಸಿದ್ದಾರೆ. ಇವರಲ್ಲಿ ಕೆಲವರು ಬೇರೆ ಬೇರೆ ಠಾಣೆಗಳಲ್ಲಿ ರೌಡಿ ಶೀಟರ್ ಹೊಂದಿದವರಾಗಿದ್ದಾರೆ. ಉಡುಪಿಯಿಂದ ಕಾಪು ಕಡೆಗೆ ಬರುತ್ತಿದ್ದ ಕಾಪು ಸಿಐ ಜಯಶ್ರೀ ಮಾನೆ ಅವರು ಉದ್ಯಾವರ ಸೇತುವೆ ಮೇಲೆ ಅನುಮಾನಾಸ್ಪದ ರೀತಿಯಲ್ಲಿ ಸ್ಕಾರ್ಪಿಯೋ ಕಾರೊಂದು ನಿಂತಿರುವುದನ್ನು ಗಮನಿಸಿದ್ದರು. ಕೂಡಲೇ ಸ್ಕಾರ್ಪಿಯೋ ಬಳಿಗೆ ಬಂದು ನಿಲ್ಲಿಸಲು ಯತ್ನಿಸಿದಾಗ ಆರೋಪಿಗಳು ಕಾರನ್ನು ಪ್ರಾಣಕ್ಕೆ ಮಾರಕವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಕಾಪು ಕಡೆಗೆ ತೆರಳಿದ್ದರು. ಅವರು ತತ್ ಕ್ಷಣ ಈ ಬಗ್ಗೆ ಕಾಪು ಮತ್ತು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಕಾಪು ಎಸ್ಸೈ ಅಬ್ದುಲ್ ಖಾದರ್ ನೇತೃತ್ವದ ತಂಡ ಕೋತಲಕಟ್ಟೆ ಬಳಿ ಸ್ಕಾರ್ಪಿಯೋ ಕಾರನ್ನು ತಡೆಯುವಲ್ಲಿ ಯಶಸ್ವಿಯಾಗಿದೆ.