ಟಾಪ್ ನ್ಯೂಸ್ ಕರಾವಳಿ
ಬಾವಿಗೆ ಬಿದ್ದ ನಾಯಿ ರಕ್ಷಿಸಿದರು!
– ಬಂಟ್ವಾಳ ಅಗ್ನಿಶಾಮಕ ತಂಡದ ಮಾನವೀಯ. ಸೇವೆಗೆ ಮೆಚ್ಚುಗೆ
– ಮಂಗಳೂರು: ಕೈದಿ ವೆನ್ಲಾಕ್ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣು!
NAMMUR EXPRESS NEWS
ಬಂಟ್ವಾಳ: ಪಾಳು ಬಾವಿಗೆ ಬಿದ್ದ ನಾಯಿಯೊಂದನ್ನು ಬಂಟ್ವಾಳ ಅಗ್ನಿಶಾಮಕ ದಳದವರು ರಕ್ಷಿಸಿದ ಘಟನೆ ಮಂಗಳವಾರ ಬೆಳಗ್ಗೆ ಮೊಡಂಕಾಪಿನ ಗಾಂದೋಡಿ ಬಳಿ ನಡೆದಿದೆ. ಸ್ಥಳೀಯರ ಮಾಹಿತಿ ಪ್ರಕಾರ ನಾಯಿಯು ಕಳೆದ ಮೂರು ದಿನಗಳ ಹಿಂದೆ ಬಾವಿಗೆ ಬಿದ್ದಿದ್ದು, ಬಾವಿಯನ್ನು ಯಾರೂ ಉಪಯೋಗಿಸದ ಹಿನ್ನೆಲೆಯಲ್ಲಿ ನಾಯಿ ಬಿದ್ದಿರುವುದು ಗಮನಕ್ಕೆ ಬಂದಿರಲಿಲ್ಲ. ಆದರೆ ಇಂದು ನಾಯಿ ಬಾವಿಯಲ್ಲಿರುವುದು ಗೊತ್ತಾಗಿದ್ದು, ಗಾಂದೋಡಿ ನಿವಾಸಿ ವಿಶ್ವನಾಥ ಶೆಟ್ಟಿ ಅವರು ಪೊಲೀಸ್ 100 ಸಂಖ್ಯೆಗೆ ಕರೆ ಮಾಡಿದ್ದು, ಅವರು ಬಳಿಕ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಸಿಬಂದಿಯೊಬ್ಬರು ಹಗ್ಗದ ಸಹಾಯದಿಂದ ಬಾವಿಗೆ ಇಳಿದು ನಾಯಿಗೆ ಹಗ್ಗವನ್ನು ಕಟ್ಟಿದ್ದಾರೆ. ಅವರು ಮೇಲೆ ಬಂದ ಬಳಿಕ ನಾಯಿಯನ್ನು ಸುರಕ್ಷಿತವಾಗಿ ಮೇಲಕ್ಕೆ ಎಳೆಯಲಾಗಿದೆ. ಕಾಡು ಹಂದಿ ಸ್ಥಳದಲ್ಲಿ ಸಾವು: ರಸ್ತೆ ದಾಟುವ ವೇಳೆ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತಕ್ಕೆ ಒಳಗಾಗಿ ಕಾಡಹಂದಿಯೊಂದು ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೈದಿ ವೆನ್ಲಾಕ್ ಆಸ್ಪತ್ರೆಯಲ್ಲೇ ಆತ್ಮಹತ್ಯೆಗೆ ಶರಣು!
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರಣಾಧೀನ ಕೈದಿ ಮಂಜೇಶ್ವರ ಬಳಿಯ ಬಂದ್ಯೋಡು ನಿವಾಸಿ ಮಹಮ್ಮದ್ ನೌಫಾಲ್ (24) ಆಸ್ಪತ್ರೆಯ ಕೊಠಡಿಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ನೌಫಾಲ್ 2022ರ ಡಿಸೆಂಬರ್ನಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಕೊಣಾಜೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ. ನಂತರದಲ್ಲಿ ಮಂಗಳೂರಿನ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಆತನಿಗೆ ಜಾಮೀನು ಕೊಡಿಸುವುದಕ್ಕೂ ಯಾರು ಬಂದಿರಲಿಲ್ಲ.
ಅತಿಯಾದ ಡ್ರಗ್ಸ್ ಸೇವನೆ ಮಾಡಿಕೊಂಡಿದ್ದ ಆತನಿಗೆ ಮಾದಕ ವಸ್ತು ಸಿಗದೆ ಇದ್ದಾಗ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ. ಈ ಕಾರಣದಿಂದ ಜೈಲಿನವರು ನೌಫಾಲ್ನನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಏ.26ರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈತ ಮೇ 6ರಂದು ಮುಂಜಾನೆ 4 ಗಂಟೆಗೆ ಬೆಡ್ಶೀಟ್ ಅನ್ನೇ ಕಿಟಕಿಗೆ ಕಟ್ಟಿಕೊಂಡು ನೇಣುಬಿಗಿದು ಪ್ರಾಣ ಕಳೆದುಕೊಂಡಿದ್ದಾನೆ.
ಆಸ್ಪತ್ರೆಯ ಅದೇ ಕೊಠಡಿಯಲ್ಲಿಇತರೆ ನಾಲ್ವರು ಕೈದಿಗಳು ಚಿಕಿತ್ಸೆ ಪಡೆಯುತ್ತಿದ್ದರೂ ಇದು ಅವರ ಗಮನಕ್ಕೆ ಬಂದಿರಲಿಲ್ಲ. ಹೊರಗಡೆ ಕಾವಲು ಕಾಯುತ್ತಿದ್ದ ಪೊಲೀಸರಿಗೂ ಈ ವಿಚಾರ ಗೊತ್ತಾಗಿರಲಿಲ್ಲ. ಪಾಂಡೇಶ್ವರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.