ಬ್ರಹ್ಮಾವರ: ಬಾವಿ ಸ್ವಚ್ಛತೆಗಿಳಿದ ಇಬ್ಬರ ಪೈಕಿ ಓರ್ವ ಸಾವು!
– ಮತ್ತೋರ್ವನ ರಕ್ಷಣೆ: ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಘಟನೆ
– ಮಂಗಳೂರು: ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ ನೇಣಿಗೆ ಶರಣು!
– ಮಲ್ಪೆ : ಜೀವರಕ್ಷಕನ ಮೇಲೆ ಹಲ್ಲೆ ನಡೆಸಿದ ಪ್ರವಾಸಿಗರ ತಂಡ
– ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ಇಬ್ಬರು ಬಚಾವ್
NAMMUR EXPRESS NEWS
ಉಡುಪಿ: ಹೂಳು ತೆಗೆಯಲು ಹೋಗಿ ಓರ್ವ ಜೀವ ಕಳೆದುಕೊಂಡು,ಮತ್ತೊಬ್ಬನನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಬುಧವಾರ ಸಂಜೆ ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ದೇವಾಡಿಗರ ಬೆಟ್ಟುವಿನಲ್ಲಿ ನಡೆದಿದೆ. ಮೂಲತಃ ಕೊಪ್ಪಳದ ನಿವಾಸಿ, ಸ್ಥಳೀಯವಾಗಿ ನೆಲೆಸಿದ್ದ ದುರ್ಗೇಶ್ (34) ಮೃತಪಟ್ಟವರು. ಕೊಪ್ಪಳದ ಅಡಿವೆಪ್ಪ ಕುರಿ (50) ರಕ್ಷಣೆಗೊಳಗಾದವರು. ಇವರಿಬ್ಬರೂ ಬ್ರಹ್ಮಾವರದ ಸಾಲಿಕೆರೆಯಲ್ಲಿ ವಾಸಮಾಡಿಕೊಂಡು ಕೂಲಿ ಕೆಲಸ ಮಾಡುತ್ತಿದ್ದರು. 35 ಅಡಿ ಆಳದ ಬಾವಿಯಲ್ಲಿ ಹೂಳು ತುಂಬಿದ್ದ ಕಾರಣ ಬಾವಿಯೊಳಗೆ ಬ್ಲೀಚಿಂಗ್ ಪೌಡರ್ ಹಾಕಿ ಕ್ಲೀನ್ ಮಾಡುತ್ತಿದ್ದರು. ಈ ವೇಳೇ ದುರ್ಘಟನೆ ಸಂಭವಿಸಿದೆ. ಆಮ್ಲಜನಕ ಕೊರತೆಯಾಗಿರುವುದೇ ಸಾವಿಗೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ : ಜೀವರಕ್ಷಕನ ಮೇಲೆ ಹಲ್ಲೆ ನಡೆಸಿದ ಪ್ರವಾಸಿಗರ ತಂಡ
ಆರು ಮಂದಿ ಪ್ರವಾಸಿಗರ ತಂಡವೊಂದು ಮಲ್ಪೆ ಬೀಚ್ನಲ್ಲಿ ಮಲ್ಪೆಯ ಸಮುದ್ರತಟದಲ್ಲಿದ್ದ ಲೈಫ್ ಗಾರ್ಡ್ ಮೇಲೆ ಹಲ್ಲೆ ನಡೆಸಿದ ಘಟನೆ ಮೇ 08 ರ ಬುಧವಾರ ಸಂಜೆ ನಡೆದಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಕಾರಣ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಲೈಫ್ ಗಾರ್ಡ್ ಎಚ್ಚರಿಸುತ್ತಿದ್ದರು. ಇದೇ ವೇಳೆ ಅಲ್ಲಿದ್ದ ಆರು ಮಂದಿ ಪ್ರವಾಸಿಗರ ತಂಡಕ್ಕೆ ಆರು ಮಂದಿ ಪ್ರವಾಸಿಗರ ತಂಡಕ್ಕೆ ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದರು. ಎಚ್ಚರಿಕೆಯ ನಂತರವೂ ಈ ತಂಡ ಸುರಕ್ಷಿತ ಈಜು ಗಡಿಗಳನ್ನು ದಾಟಿ ಈಜುವುದನ್ನು ಮುಂದುವರಿಸಿತ್ತು. ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ ಲೈಫ್ ಗಾರ್ಡ್ ತೇಜ್ ಕೋಟ್ಯಾನ್ ಮಧ್ಯಪ್ರವೇಶಿಸಿದರು, ಆದರೆ ಈ ವೇಳೆ ಅವರ ಎಚ್ಚರಿಕೆಯನ್ನು ಗಣನೆಗೆ ತೆಗೆದುಕೊಳ್ಳದೇ ಎಚ್ಚರಿಕೆ ನೀಡಿದ ಜೀವರಕ್ಷಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯ ನಂತರ, ಸ್ಥಳದಲ್ಲಿದ್ದ ಇತರ ಜೀವರಕ್ಷಕರು ಮತ್ತು ಹೋಮ್ಗಾರ್ಡ್ಗಳು ಲೈಸೆನ್ಸ್ ಪ್ಲೇಟ್ ಸಂಖ್ಯೆ KAO4 AD8286 ರ ಸ್ವಿಫ್ಟ್ ಮಾರುತಿ ಕಾರಿನಲ್ಲಿ ಹಲ್ಲೆನಡೆಸಿದ ಆರೋಪಿಗಳನ್ನು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಜೀವರಕ್ಷಕರು!
ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ಇಬ್ಬರನ್ನು ರಕ್ಷಿಸಿರುವ ಘಟನೆ ಮಲ್ಪೆಯ ತೊಟ್ಟಂ ಬೀಚ್ ನಲ್ಲಿ ಮೇ.8 ರ ಬೆಳಗ್ಗೆ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಆರು ಮಂದಿಯ ಯುವಕರ ಗುಂಪು ಸಮುದ್ರ ತೀರಕ್ಕೆ ಬಂದಿದ್ದರು. ಮುಂಜಾನೆ 6:45 ರ ವೇಳೆಗೆ ತೊಟ್ಟಂ ಬೀಚ್ ನಲ್ಲಿ ಈಜುತ್ತಿದ್ದಾಗ ಭಾರಿ ಅಲೆಯೊಂದು ತೀರಕ್ಕೆ ಅಪ್ಪಳಿಸಿದೆ. ಈ ವೇಳೆ ತಂಡ ಇಬ್ಬರು ಸದಸ್ಯರು ಅಲೆಗಳ ಹೊಡೆತಕ್ಕೆ ಸಿಲುಕಿಕೊಂಡಿದ್ದಾರೆ. ಅಲೆಗಳ ಅಬ್ಬರದಲ್ಲಿ ಮುಳುಗುತ್ತಿದ್ದ ಗೋಪಿನಾಥ್ (25) ರಂಗನಾಥ (26) ಅವರನ್ನು ತಕ್ಷಣವೇ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಜೀವರಕ್ಷಕರು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಇತ್ತೀಚಿನ ಹವಾಮಾನ ಪರಿಸ್ಥಿತಿಗಳು ಮತ್ತು ಅಮಾವಾಸ್ಯೆ ದಿನದ ಪರಿಣಾಮದಿಂದ ಸಮುದ್ರದ ಬೃಹತ್ ಅಲೆಗಳು ಮೇಲೆಳುತ್ತಿವೆ. ಆದರೆ ಇದರ ಅರಿವು ಪ್ರವಾಸಿಗರಿಗೆ ಇರುವುದಿಲ್ಲ. ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಂಗಳೂರು: ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿ ನೇಣಿಗೆ ಶರಣು!
ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಜಿನಿಯರಿಂಗ್ ಪದವಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಟೇಟ್ಬ್ಯಾಂಕ್ ಬಳಿಯ ಬೀಬಿ ಅಲಾಬಿ ರಸ್ತೆಯ ಸರ್ಕಾರಿ ಹಿಂದುಳಿದ ವರ್ಗದ ಹಾಸ್ಟೆಲ್ನಲ್ಲಿ ನೆಲೆಸಿದ್ದ ಉಡುಪಿ ಜಿಲ್ಲೆಯ ಉಪ್ಪೂರು ಮೂಲದ ನಿತೇಶ್ ರಾವ್(20) ಮೃತ ವಿದ್ಯಾರ್ಥಿ. ಬಿಇ ಓದುತ್ತಿದ್ದ ನಿತೇಶ್ ಇತ್ತೀಚೆಗೆ ನಡೆದಿದ್ದ ಪರೀಕ್ಷೆಗಳ ಎರಡು ವಿಷಯಗಳಲ್ಲಿ ಫೇಲ್ ಆಗಿದ್ದ. ಇದರಿಂದ ಸ್ವಲ್ಪ ಮಟ್ಟಿಗೆ ಖಿನ್ನತೆಗೆ ಜಾರಿದ್ದು, ಬೇರೆ ವಿದ್ಯಾರ್ಥಿಗಳೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಹೀಗೆ ಒಬ್ಬಂಟಿಯಾಗಿ ಓಡಾಡುತ್ತಿದ್ದ ನಿತೇಶ್ ಇಂದು ಬೆಳಗ್ಗೆ ಯಾರು ಇಲ್ಲದ ಸಮಯ ನೋಡಿಕೊಂಡು ಕೋಣೆಯಲ್ಲಿ ಫ್ಯಾನ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿತೇಶ್ ತನ್ನ ಓದುವಿಗಾಗಿ ಎರಡು ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿದ್ದ. ಐದು ವರ್ಷಗಳ ಹಿಂದೆ ತಂದೆಯನ್ನು ಕೂಡ ಕಳೆದುಕೊಂಡಿದ್ದಾನೆ. ಈಗ ನಿತೇಶ್ ತಾಯಿ ಹಾಗೂ ತಂಗಿಯನ್ನು ಅಗಲಿದ್ದಾನೆ. ಇನ್ನು ನಿತೇಶ್ ಆತ್ಮಹತ್ಯೆ ಮಾಡಿರುವುದಕ್ಕೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಇದಕ್ಕಾಗಿ ಪೊಲೀಸರು ಆತನ ಮೊಬೈಲ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಗೆಯೇ ತಾಯಿ ನೀಡಿದ ದೂರಿನಂತೆ ಬಂದರು ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.