ಕರಾವಳಿ ಟಾಪ್ ನ್ಯೂಸ್
ಹಿಂದೂ ಸಂಘಟನೆಯ ಮುಖಂಡನಿಗೆ ಚೂರಿ ಇರಿತ!
– ಬಂಟ್ವಾಳದಲ್ಲಿ ನಡೆದ ಘಟನೆ: ಏನಿದು ಘಟನೆ
– ಸಿಗಡಿ ಮೀನು ಹಿಡಿಯಲು ಹೋಗಿ ಮಹಿಳೆ ಸಾವು
– ಕುಂದಾಪುರ ಕೋಣಿ ಗ್ರಾಮದಲ್ಲಿ ನಡೆದ ಘಟನೆ
– ಮೋದಿ ರೋಡ್ ಶೋ ಬಳಿಕ ಯುವಕನೋರ್ವನಿಗೆ ಧರ್ಮದೇಟು.!
– ಮಂಗಳೂರು: ಮಹಿಳೆಯೊಬ್ಬಳಿಗೆ ಯುವಕನೋರ್ವ ಚೀಟಿಯಲ್ಲಿ ಮೊಬೈಲ್ ನಂಬರ್ ಕೊಟ್ಟಿದ್ದಕ್ಕೆ ಪೆಟ್ಟು!
NAMMUR EXPRESS NEWS
ಹಿಂದೂ ಸಂಘಟನೆಯ ಮುಖಂಡನಿಗೆ ಆತನ ಸ್ನೇಹಿತನೇ ಚೂರಿಯಿಂದ ಇರಿದ ಘಟನೆ ಬಂಟ್ವಾಳದಲ್ಲಿ ಏ.15ರ ಭಾನುವಾರ ರಾತ್ರಿ ನಡೆದಿದೆ. ಹಿಂದೂ ಯುವಸೇನೆಯ ಮುಖಂಡ ಉದ್ಯಮಿಯಾಗಿರುವ ಪುಷ್ಪರಾಜ್ ಎಂಬವರಿಗೆ ಜಕ್ರಿಬೆಟ್ಟು ಎಂಬಲ್ಲಿ ಚೂರಿ ಇರಿತವಾಗಿದೆ. ಇರಿತಕ್ಕೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ರಿಕ್ಷಾದಲ್ಲಿ ಜತೆಯಾಗಿ ತೆರಳುತ್ತಿದ್ದಾಗಲೇ ಸ್ನೇಹಿತ ರವಿ ಎಂಬಾತ ಚೂರಿಯಿಂದ ಕುತ್ತಿಗೆಗೆ ಇರಿದಿದ್ದಾನೆ ಎಂದು ಹೇಳಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಪುಷ್ಪರಾಜ್ ರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಆರೋಪಿ ರವಿ ಚೂರಿ ಇರಿದು ಪರಾರಿಯಾಗಿದ್ದಾನೆ.
ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಚೂರಿ ಇರಿತಕ್ಕೊಳಗಾಗಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿರುವ ಪುಷ್ಪರಾಜ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿ, ಮುಂದಿನ ಚಿಕಿತ್ಸೆಯ ಬಗ್ಗೆ ವೈದ್ಯರುಗಳೊಂದಿಗೆ ಮಾಹಿತಿ ಪಡೆದರು. ಬಂಟ್ವಾಳ ನಗರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಗಡಿ ಮೀನು ಹಿಡಿಯಲು ಹೋಗಿ ಮಹಿಳೆ ಸಾವು
ಸಿಗಡಿ ಮೀನು ಹಿಡಿಯಲು ಹೊಳೆಗೆ ಹೋಗಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುಂದಾಪುರ ಕೋಣಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕುಂದಾಪುರ ಕೋಣಿ ಗ್ರಾಮದ ವನಜ ಮೃತ ದುರ್ದೈವಿ. ವನಜ ಅವರು ಸಿಗಡಿ ಮೀನು ತೆಗೆಯುವ ಕೆಲಸವನ್ನು ಮಾಡಿಕೊಂಡಿದ್ದು, ಎಂದಿನಂತೆ ಅವರು ಸಿಗಡಿ ಮೀನು ತೆಗೆಯಲು ಕೋಣಿಯ ಮಲ್ಲನಬೆಟ್ಟು ಹೊಳೆಗೆ ಹೋಗಿದ್ದಾರೆ. ಈ ವೇಳೆ ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿದ್ದಾರೆ. ಬಳಿಕ ಅಸ್ವಸ್ಥಗೊಂಡ ವನಜಾ ಅವರ ಪತಿ ವಾಸು ಹಾಗೂ ಸ್ಥಳೀಯರು ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅದಾಗಲೇ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೋದಿ ರೋಡ್ ಶೋ ಬಳಿಕ ಯುವಕನೋರ್ವನಿಗೆ ಧರ್ಮದೇಟು.!
ಮಂಗಳೂರಿನಲ್ಲಿ ಭಾನುವಾರ ರಾತ್ರಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್ ಶೋ ಮುಗಿದ ಬಳಿಕ ಯುವಕನೋರ್ವನಿಗೆ ಧರ್ಮದೇಟು ಬಿದ್ದ ಘಟನೆ ನಡೆದಿದೆ. ಮೋದಿ ರೋಡ್ ಶೋ ವೀಕ್ಷಿಸಲು ಬಂದಿದ್ದ ಮಹಿಳೆಯೊಬ್ಬಳಿಗೆ ಯುವಕನೋರ್ವ ಚೀಟಿಯಲ್ಲಿ ಮೊಬೈಲ್ ನಂಬರ್ ನೀಡಿದ್ದು ಗಲಾಟೆಗೆ ಕಾರಣ ಎನ್ನಲಾಗಿದೆ. ಬಂಟ್ಸ್ ಹಾಸ್ಟೆಲ್ ಬಳಿ ಮಹಿಳೆಗೆ ಯುವಕನೋರ್ವ ಚೀಟಿಯಲ್ಲಿ ತನ್ನ ಮೊಬೈಲ್ ನಂಬರ್ ಬರೆದು ನೀಡಿದ್ದ. ಈ ವಿಷಯ ಗೊತ್ತಾಗಿ ಆರೋಪಿ ಯುವಕನನ್ನು ಹಿಡಿದ ಮಹಿಳೆಯ ಪತಿ ಆತನ ಮೊಬೈಲ್ ಕಿತ್ತುಕೊಂಡು ಗೂಸಾ ಕೊಟ್ಟಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಯುವಕರ ತಂಡವೂ ಆರೋಪಿ ಯುವಕನಿಗೆ ಥಳಿಸಿದೆ. ಬಳಿಕ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಗಲಾಟೆ ಪರಿಸ್ಥಿತಿ ತಿಳಿಗೊಳಿಸಿದ್ದಾರೆ