ಹಿಟ್ ಆಂಡ್ ರನ್ ನಡೆಸಿದ ಸ್ಕೂಟರ್ ಸವಾರ, ಬೈಕ್ ಸವಾರ ಆಸ್ಪತ್ರೆಗೆ ದಾಖಲು
– ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕನಿಗೆ ಗಾಯ
– ಆಲ್ಟೊ ಕಾರು ಡಿಕ್ಕಿ ಹೊಡೆದು ಬೈಕ್ ಸವಾರಗೆ ಗಾಯ
– ಮನೆಗೆ ನುಗ್ಗಿ 15 ಮಂದಿಯ ಮನೆಯಲ್ಲಿದ್ದ ವ್ಯಕ್ತಿಗೆ ಜೀವ ಬೆದರಿಕೆ
NAMMUR EXPRESS NEWS
ಬಂಟ್ವಾಳ : ಬೈಕಿಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಾಯಗೊಂಡಿದ್ದು, ಅಪಘಾತಪಡಿಸಿದ ಸ್ಕೂಟರ್ ಸವಾರ ನಿಲ್ಲಿಸದೆ ಪರಾರಿಯಾದ ಘಟನೆ ನರಿಕೊಂಬು ಗ್ರಾಮದ ನೇತ್ರಾವತಿ ಸೇತುವೆ ಬಳಿ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರರನ್ನು ಚರಣ್ ಎಂದು ಹೆಸರಿಸಲಾಗಿದೆ. ಇವರು ತನ್ನ ಬೈಕಿನಲ್ಲಿ ಸಂಚರಿಸುತ್ತಿದ್ದ ವೇಳೆ ಆಕ್ಟಿವಾ ಸ್ಕೂಟರ್ ಸವಾರ ದುಡುಕುತನ ಹಾಗೂ ನಿರ್ಲಕ್ಷ್ಯದಿಂದ ಧಾವಿಸಿ ಬಂದು ಬೈಕಿಗೆ ಡಿಕ್ಕಿ ಹೊಡೆದು ಬಳಿಕ ನಿಲ್ಲಿಸದೆ ಪರಾರಿಯಾಗಿದ್ದಾನೆ. ಬೈಕ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡ ಚರಣ್ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು- ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಚರಣ್ ಅವರ ಸ್ನೇಹಿತ ವಿಜಯಕುಮಾರ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದು ಕಾರು ಚಾಲಕನಿಗೆ ಗಾಯ
ಬಂಟ್ವಾಳ : ಕೆ ಎಸ್ ಆರ್ ಟಿ ಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾವಳಪಡೂರು ಗ್ರಾಮದ ಬಾಂಬಿಲ ಎಂಬಲ್ಲಿ ಸಂಭವಿಸಿದೆ. ಗಾಯಾಳು ಕಾರು ಚಾಲಕನನ್ನು ಕಾವಳಪಡೂರು ಗ್ರಾಮದ ನಿವಾಸಿ ಸಿರಿಲ್ ಡಿ’ಸೋಜ (60) ಎಂದು ಗುರುತಿಸಲಾಗಿದೆ. ಇವರು ತನ್ನ ಕಾರಿನಲ್ಲಿ ಮದ್ವ ಕಡೆಯಿಂದ ವಗ್ಗ ಕಡೆಗೆ ಕಡೂರು-ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವೇಳೆ ಬಾಂಬಿಲ ಎಂಬಲ್ಲಿ ಬಸವರಾಜ್ ಎಂಬವರು ಚಲಾಯಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ಸು ಎದುರಿನಿಂದ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದಿಂದ ಗಾಯಗೊಂಡ ಕಾರು ಚಾಲಕನನ್ನು ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಆಲ್ಟೊ ಕಾರು ಡಿಕ್ಕಿ ಹೊಡೆದು ಬೈಕ್ ಸವಾರಗೆ ಗಾಯ
ಬಂಟ್ವಾಳ : ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಗಾಯಗೊಂಡ ಘಟನೆ ವಿಟ್ಲ ಕಸಬಾ ಗ್ರಾಮದ ಬದನಾಜೆ ಎಂಬಲ್ಲಿ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರನನ್ನು ಹರಿಣಾಕ್ಷ ಎಂದು ಹೆಸರಿಸಲಾಗಿದೆ. ಹರಿಣಾಕ್ಷ ಅವರು ಬೈಕಿನಲ್ಲಿ ಬರುತ್ತಿದ್ದ ವೇಳೆ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಧಾವಿಸಿ ಬಂದ ಆಲ್ಟೊ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಗಾಯಾಳು ಹರಿಣಾಕ್ಷ ಅವರನ್ನು ಪುತ್ತೂರು ಪ್ರಗತಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಮನೆಗೆ ನುಗ್ಗಿ 15 ಮಂದಿಯ ಮನೆಯಲ್ಲಿದ್ದ ವ್ಯಕ್ತಿಗೆ ಜೀವ ಬೆದರಿಕೆ
ಪುತ್ತೂರು : ಮನೆಯಲ್ಲಿದ್ದ ವ್ಯಕ್ತಿಗೆ ಸುಮಾರು 15 ಮಂದಿಯ ತಂಡ ಅಕ್ರಮವಾಗಿ ಮನೆಗೆ ಪ್ರವೇಶ ಮಾಡಿ ಬೈದು ಜೀವಬೆದರಿಕೆ ಒಡ್ಡಿದ ಘಟನೆ ಚಿಕ್ಕಮುನ್ನೂರು ಗ್ರಾಮದ ತಾರಿಗುಡ್ಡೆ ಎಂಬಲ್ಲಿ ಇಲ್ಲಿನ ನಿವಾಸಿ ಜಯಾನಂದ ಕೆ (41) ಎಂಬವರು ತನ್ನ ಮನೆಯಲ್ಲಿದ್ದ ವೇಳೆ ಏಕಾಏಕಿಯಾಗಿ ಆರೋಪಿಗಳಾದ ಪ್ರಜ್ವಲ್ ರೈ, ಸನತ್ ರೈ ಮತ್ತು ಇತರ ಸುಮಾರು 15 ಜನರು ಮನೆಯೊಳಗೆ ಅಕ್ರಮ ಪ್ರವೇಶ ಮಾಡಿ ಜಯಾನಂದ ಹಾಗೂ ಅವರ ಮನೆ ಮಂದಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆಯೊಡ್ಡಿರುವುದಾಗಿ ದೂರಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 23/2023 0 448, 143, 147, 504, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.