ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಮೊಹಮ್ಮದ್ ಜಬೀರ್ಗೆ ಜಾಮೀನು ನಿರಾಕರಣೆ
– ಸಾಲ ತೀರಿಸಲಾಗದೇ ಮನನೊಂದು ತಾಯಿ ಮಕ್ಕಳು ಆತ್ಮಹತ್ಯೆ
– ಅನಾರೋಗ್ಯಕ್ಕೆ ಬಲಿಯಾದ ಎರಡನೇ ತರಗತಿ ಬಾಲಕಿ.!
– ಪ್ರತ್ಯೇಕ ಅಕ್ರಮ ಮದ್ಯ ಮಾರಾಟ ಪ್ರಕರಣ ದಾಖಲೆ
NAMMUR EXPRESS NEWS
ಪುತ್ತೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಜಬೀರ್ ಅವರ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ. ಪುತ್ತೂರು ನಿವಾಸಿಯಾದ ಮೊಹಮ್ಮದ್ ಜಬೀರ್ ಅವರು ತಮ್ಮ ಕಸ್ಟಡಿ ವಿಸ್ತರಣೆ ಮಾಡಿ ಡಿಫಾಲ್ಟ್ ಜಾಮೀನು ತಿರಸ್ಕರಿಸಿ ವಿಶೇಷ ಎನ್ಐಎ ಕೋರ್ಟ್ 2023ರ ಫೆ. 9ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆರೋಪಿ ಜಬೀರ್ ಅವರು 21ನೇ ಆರೋಪಿಯಾಗಿದ್ದು, ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302, ಶಸ್ತ್ರಾಸ್ತ್ರ ಕಾಯಿದೆ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಸೆಕ್ಷನ್ಗಳಾದ 16, 18, 19 ಮತ್ತು 20ರ ಅಡಿ ಪ್ರಕರಣ ದಾಖಲಿಸಲಾಗಿದೆ. 2022ರ ನವೆಂಬರ್’ನಲ್ಲಿ ಜಬೀರ್ ಬಂಧನವಾಗಿದ್ದು, ನವೆಂಬರ್ ೮ ರಂದು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
2023ರನವರಿ ೨೦ ರಂದು, 20 ಆರೋಪಿಗಳ ವಿರುದ್ಧ ಎನ್ಐಎ ಆರೋಪ ಪಟ್ಟಿ ಸಲ್ಲಿಸಿ, ಹೆಚ್ಚುವರಿ ತನಿಖೆಗೆ ಮನವಿ ಮಾಡಿತ್ತು. ಆದರೆ, ಜಬೀರ್ ಅವರ ವಿರುದ್ಧ ಯಾವುದೇ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ಜಬೀರ್ ಅವರ 90 ದಿನಗಳ ಬಂಧನ ಅವಧಿ ಮುಗಿದಿದ್ದರೂ ಎನ್ಐಎ ಆರೋಪ ಪಟ್ಟಿ ಸಲ್ಲಿಸಿರಲಿಲ್ಲ. ೨೦೨೩ರ ಪೆಬ್ರವರಿಯಲ್ಲಿ ಪ್ರಕರಣದ ವಿಚಾರಣೆಯ ದಿನ ಜಬೀರ್ ಅವರು ಜಾಮೀನು ಕೋರಿರಲಿಲ್ಲ. ಎನ್ಐಎ ಕಸ್ಟಡಿ ವಿಸ್ತರಣೆಯನ್ನೂ ಕೋರಿರಲಿಲ್ಲ. 08.02.2023ರಂದು ಎನ್ಐಎ ಕಸ್ಟಡಿ ವಿಸ್ತರಣೆ ಕೋರಿದ್ದು, ಅದೇ ದಿನ ಅರ್ಜಿದಾರರು ಡೀಫಾಲ್ಟ್ ಜಾಮೀನು ಕೋರಿದ್ದರು. ಇದನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿತ್ತು. ಆ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ.
– ಸಾಲ ತೀರಿಸಲಾಗದೇ ಮನನೊಂದು ತಾಯಿ ಮಕ್ಕಳು ಆತ್ಮಹತ್ಯೆ
ಉಡುಪಿ : ಉಡುಪಿಯಿಂದ ಕಳೆದ 14 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಕುಟುಂಬ ಕಳೆದ ಐದು ವರ್ಷಗಳ ಹಿಂದೆ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿತ್ತು. ಆದರೆ, ಫ್ಯಾಕ್ಟರಿ ಚೇತರಿಕೆ ಕಾಣುವ ಅವಧಿಯಲ್ಲೇ ಬರಸಿಡಿಲಿನಂತೆ ಬಂದ ಕೋವಿಡ್ ಅವಧಿಯಲ್ಲಿ ನಷ್ಟವಾಗಿ, ಲಕ್ಷಾಂತರ ರೂ. ಸಾಲ ಬೆಳೆಯಿತು. ಈಗ ಸಾಲ ತೀರಿಸಲಾಗದೇ ಕುಟುಂಬದ ಇಬ್ಬರು ದುಡಿಯುವ ಮಕ್ಕಳು ಹಾಗೂ ತಾಯಿ ಮೂವರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿಯಿಂದ ಬಂದು ಕಷ್ಟಪಟ್ಟು ದುಡಿದು ಕೋವಿಡ್ಗಿಂತ ಮುಂಚೆ ಆರಂಭಿಸಿದ್ದ ವುಡ್ ಡೈ ಮೇಕಿಂಗ್ ಫ್ಯಾಕ್ಟರಿ ಆರಂಭಿಸಿದ್ದರು. ಆದರೆ, ಲಕ್ಷಾಂತರ ರೂ. ಸಾಲ ಮಾಡಿ ಆರಂಭಿಸಿದ್ದ ಫ್ಯಾಕ್ಟರಿ ಕೋವಿಡ್ ವೇಳೆ ನಷ್ಟ ಅನುಭವಿಸಿತು. ಆದರೆ, ಫ್ಯಾಕ್ಟರಿ ಮುಚ್ಚಿ ಸಾಲ ತೀರಿಸಲು ಇಡೀ ಮನೆ ಮಂದಿಯೆಲ್ಲಾ ದುಡಿದರೂ ಸಾಲ ತೀರಿಸಲು ಸಾಧ್ಯವಾಗಲಿಲ್ಲ.
ಆದ್ದರಿಂದ ಬ್ಯಾಂಕ್ನವರು ಸಾಲ ವಸೂಲಿ ಮಾಡುವುದಕ್ಕೆ ನಿನ್ನೆ ಮನೆಯ ಬಳಿಗೆ ಬಂದಿದ್ದರು. ಆದರೆ, ಕೈಯಲ್ಲಿ ಹಣವಿಲ್ಲದೇ ಜೀವನ ಮಾಡುವುದಕ್ಕೂ ಕಷ್ಟ ಪಡುತ್ತಿದ್ದ ಕುಟುಂಬದಲ್ಲಿ ಇಬ್ಬರು ಮಕ್ಕಳನ್ನು ಒಳಗೊಂಡ0ತೆ ತಾಯಿಯೂ ಸೇರಿ ಒಟ್ಟಿಗೆ ಮೂವರು ಬಾಡಿಗೆ ಮನೆಯಲ್ಲಿಯೇ ಸಾವಿನ ಹಾದಿಯನ್ನು ಹಿಡಿದಿದ್ದಾರೆ. ತಾಯಿ ಸುಕನ್ಯಾ (58), ಮಕ್ಕಳಾದ ನಿಶ್ಚಿತ್ ಹಾಗೂ ನಿಕಿತ್ ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿಗಳಾಗಿದ್ದಾರೆ. ತಂದೆ ಜಯಾನಂದ್ ಅವರು ಮನೆಯಲ್ಲಿ ಇಲ್ಲದ ಹಿನ್ನೆಲೆಯಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಇಬ್ಬರು ಮಕ್ಕಳಲ್ಲಿ ಓರ್ವ ಮಗ ನಿಶ್ಚಿತ್ ಅಂಗವಿಕಲ ಆಗಿದ್ದನು. ಆದರೆ, ಚೆನ್ನಾಗಿ ಓದಿಕೊಂಡಿದ್ದು, ಕಡಿಮೆ ಸಂಬಳಕ್ಕೆ ಮನೆಯಲ್ಲಿಯೇ ವರ್ಕ್ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದನು. ಇನ್ನೊಬ್ಬ ಮಗ ನಿಖಿತ್ ಕೂಡ ಬಿಸಿನೆಸ್ ಲಾಸ್ ಆಗಿದ್ದರಿಂದ ಮನನೊಂದಿದ್ದನು.
ಅಪ್ಪನ ಲಾಸ್ ಭರ್ತಿ ಮಾಡುವುದಕ್ಕೆ ತಾನು ಮಾಡುತ್ತಿದ್ದ ಕೆಲಸವನ್ನೂ ಬಿಟ್ಟು ಏನಾದರೂ ಮತ್ತೊಂದು ಬಿಸಿನೆಸ್ ಮಾಡೋಣ ಎಂದು ಮನೆಯಲ್ಲಿಯೇ ಕುಳಿತಿದ್ದನು. ಫ್ಯಾಕ್ಟರಿ ನಷ್ಟವಾಗಿ ಮುಚ್ಚಿದ್ದರಿಂದ ಲಕ್ಷಾಂತರ ರೂ. ಸಾಲವಿತ್ತು. ಮೈತುಂಬಾ ಸಾಲ ತೀರಿಸುವುದು ಒಂದೆಡೆಯಿರಲಿ, ಜೀವನ ನಡೆಸುವುದೇ ದೊಡ್ಡ ಸವಾಲಾಗಿತ್ತು. ತಂದೆ ಬೇರೆಡೆ ಕೆಲಸ ಮಾಡುತ್ತಿದ್ದರೆ, ತಾಯಿ ತಮ್ಮ ಏರಿಯಾದಲ್ಲಿನ ಮಕ್ಕಳಿಗೆ ಟ್ಯೂಷನ್ ಮಾಡಿ ಮನೆಯನ್ನು ನಿಭಾಯಿಸಲು ಹಣ ಸಂಪಾದನೆ ಮಾಡುತ್ತಿದ್ದಳು. ಎಲ್ಲರೂ ವಿದ್ಯುತ್ ತಂತಿಯನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
– ಅನಾರೋಗ್ಯಕ್ಕೆ ಬಲಿಯಾದ ಎರಡನೇ ತರಗತಿ ಬಾಲಕಿ.!
ಬಿ.ಸಿ.ರೋಡ್ : ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳ ತೌಹೀದ್ ಶಾಲಾ 2ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್, ತಲಪಾಡಿಯ ಸಫೀರ್ ಅಹ್ಮದ್ ಎಂಬವರ ಪುತ್ರಿ ಆಯಿಷಾ ಶಹಿಮ (7) ಮೃತಪಟ್ಟ ವಿದ್ಯಾರ್ಥಿನಿ. ಶಹಿಮಾ ಅವರು ಮೂರು ವಾರಗಳ ಹಿಂದೆ ಮನೆಯಲ್ಲಿ ಕುಸಿದುಬಿದ್ದಿದ್ದರು. ತಕ್ಷಣ ಇವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎರಡು ಮೂರು ದಿನ ಕೋಮದಲ್ಲಿದ್ದರು. ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
– ಪ್ರತ್ಯೇಕ ಅಕ್ರಮ ಮದ್ಯ ಮಾರಾಟ ಪ್ರಕರಣ
ಬೆಳ್ತಂಗಡಿ : ಅಕ್ರಮ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ವೇಣೂರು ಪೊಲೀಸರು ಮದ್ಯವನ್ನು ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕು, ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಹೊಸಂಗಡಿ ಗ್ರಾಮದ ಕುರ್ಲೊಟ್ಟು ಎಂಬಲ್ಲಿ, ಸ್ಥಳೀಯ ನಿವಾಸಿ ಸತೀಶ್ (40) ಎಂಬಾತ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ವೇಣೂರು ಪೊಲೀಸ್ ಠಾಣಾ ಪಿಎಸ್ಸೆ ಶ್ರೀಶೈಲ ಡಿ ಮುರಗೋಡ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿತನ ವಶದಲ್ಲಿದ್ದ 90 ಎಂ.ಎಲ್. ಮದ್ಯ ತುಂಬಿದ 32 ಸ್ಯಾಚೆಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮದ್ಯದ ಒಟ್ಟು ಪ್ರಮಾಣ 2.880 ಲೀಟರ್ ಆಗಿದ್ದು, ಅಂದಾಜು ಮೌಲ್ಯ ರೂ 1,312/- ರೂಪಾಯಿ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಇನ್ನೊಂದು ಪ್ರಕರಣದಲ್ಲಿ ದಾಳಿ ನಡೆಸಿದ ಪೂಂಜಾಲಕಟ್ಟೆ ಪೊಲೀಸರು ಅಕ್ರಮ ಮದ್ಯ ಮಾರಾಟ ಪ್ರಕರಣ ಬೇಧಿಸಿ ಆರೋಪಿ ಸಹಿತ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕು ತಣ್ಣೀರುಪಂಥ ಗ್ರಾಮದ ಅಳಕೆ-ಮಡ್ಕೊಟ್ಟು ಎಂಬಲ್ಲಿ ಆರೋಪಿ ಬಿರ್ಮಣ್ಣ ಗೌಡ ಎಂಬಾತ ಕುಂಟಪ್ಪ ಮೂಲ್ಯ ಎಂಬವರ ವಾಣಿಜ್ಯ ಸಂಕೀರ್ಣದ ಬದಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೂಂಜಾಲಕಟ್ಟೆ ಪಿಎಸ್ಸೆ ಉದಯ ರವಿ ಎಂ ವೈ ನೇತೃತ್ವದ ಪೊಲೀಸರು ಈ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಯನ್ನು ವಶಕ್ಕೆ ಪಡೆದು, ಆರೋಪಿ ಮಾರಾಟ ಮಾಡುತ್ತಿದ್ದ 180 ಎಂ ಎಲ್ ನ 17 ಸ್ಯಾಚೆಟ್ ಒಟ್ಟು 3.06 ಲೀಟರ್ ಮದ್ಯವನ್ನು ಸ್ವಾದೀನಪಡಿಸಿಕೊಂಡಿದ್ದಾರೆ. ಸ್ವಾದೀನಪಡಿಸಿಕೊಂಡ ಮದ್ಯದ ಒಟ್ಟು ಮೌಲ್ಯ 2,074/- ರೂಪಾಯಿ ಆಗಬಹುದು. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಪ್ರಕರಣ ದಾಖಲಾಗಿದೆ.