ಟಾಪ್ ನ್ಯೂಸ್ ಕರಾವಳಿ
ಉಪ್ಪಿನಂಗಡಿ : ಕಾಡು ಪ್ರಾಣಿಗಳ ಬೇಟೆ
– ಮೂವರು ಬೇಟೆಗಾರರ ಬಂಧನ
– ಕಾಪು: ವಾಟ್ಸಾಪ್ ಲಿಂಕ್ಗೆ ಕ್ಲಿಕ್, ಬ್ಯಾಕ್ ಖಾತೆಯಿಂದ 82,200 ರೂಪಾಯಿ ಮಾಯ
– ಬಂಟ್ವಾಳ: ಆಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಆಸ್ಪತ್ರೆಗೆ ದಾಖಲು
– ಪುತ್ತೂರು: ಮನೆ ಮಂದಿ ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗದು ದೋಚಿದ ಕಳ್ಳರು
– ಉಡುಪಿ : ಕಾರು- ಮೀನಿನ ಲಾರಿ ಮಧ್ಯೆ ಭೀಕರ ಅಪಘಾತ ಹಲವು ಮಂದಿಗೆ ಗಾಯ
– ಕೋಟ: ಯುವಕ ನಾಪತ್ತೆ ದೂರು ದಾಖಲು!
NAMMUR EXPRESS NEWS
ಪುತ್ತೂರು: ಅರಣ್ಯ ಇಲಾಖೆಗೆ ಸೇರಿದ ಕಾಡಿನಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಯತ್ನಿಸುತ್ತಿದ್ದ ಮೂವರನ್ನು ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿದೆ. ಈ ವೇಳೆ ಆರೋಪಿಗಳಿಂದ ಒಂದು ಸಿಂಗಲ್ ಬ್ಯಾರೆಲ್ ಬಂದೂಕು, ಕಾರು ವಶಕ್ಕೆ ಪಡೆಯಲಾಗಿದೆ. ಶಿಬಾಜೆ ಗ್ರಾಮದ ಕುರುಂಬು ಎಂಬಲ್ಲಿನ ಹರೀಶ್, ಸಕಲೇಶಪುರದ ಕೌಡಳ್ಳಿಯ ಶಿವಕುಮಾರ್, ಶಿಬಾಜೆಯ ಪದ್ಮನಾಭ ಬಂಧಿತರು. ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಗೆ ಸೇರಿದ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ- ಕಲ್ಲಾಜೆ ರಸ್ತೆಯ ಪತ್ತಿಮಾರ್ ಎಂಬಲ್ಲಿ ಮೀಸಲು ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಬೇಟೆಗೆ ಯತ್ನಿಸುತ್ತಿದ್ದಾಗ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ತಂಡ ಆರೋಪಿಗಳನ್ನು ದಸ್ತಗಿರಿ ಮಾಡಿರುವುದಾಗಿ ವರದಿಯಾಗಿದೆ. ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್ ಕೆ.ಕೆ. ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ರಾಜೇಶ್, ಅವಿನಾಶ್, ಶಿವಕುಮಾರ್ ಹೊಸ್ಮನಿ, ರವೀಂದ್ರ, ಬೀಟ್ ಫಾರೆಸ್ಟರ್ ನಿಂಗಪ್ಪ ಅವರಿ ಮತ್ತು ಚಾಲಕ ಕಿಶೋರ್ ಪಾಲ್ಗೊಂಡಿದ್ದರು.
– ಕಾಪು : ವಾಟ್ಸಾಪ್ ಲಿಂಕ್ಗೆ ಕ್ಲಿಕ್, ಬ್ಯಾಕ್ ಖಾತೆಯಿಂದ 82,200 ರೂಪಾಯಿ ಮಾಯ
ಕಾಪು: ಐದು ಬ್ಯಾಂಕ್ಗಳಲ್ಲಿ ಖಾತೆ ಹೊಂದಿರುವ ಭಾಸ್ಕರ್ ಎಂಬವರರು ತಮ್ಮ ಮೊಬೈಲ್ಗೆ ಬಂದ ಲಿಂಕ್ನ್ನು ಕ್ಲಿಕ್ ಮಾಡಿ 82,200 ರೂಪಾಯಿ ವಂಚನೆಗೊಳಗಾದ ಘಟನೆ ಕಾಪುವಿನಲ್ಲಿ ನಡೆದಿದೆ. ಭಾಸ್ಕರ್ ಅವರ ಮೊಬೈಲ್ಗೆ ಮೇ 22ರಂದು ಕೆನರಾ ಬ್ಯಾಂಕ್ ಹೆಸರಿನಲ್ಲಿ ಬಂದಿದ್ದ ಲಿಂಕ್ನ್ನು ಕ್ಲಿಕ್ ಮಾಡಿದ ಪರಿಣಾಮ ಕೆನರಾ ಬ್ಯಾಂಕ್ನ 5 ಖಾತೆಗಳಲ್ಲಿದ್ದ 82,200 ರೂಪಾಯಿ ಕಡಿತವಾದ ಬಗ್ಗೆ ಮೆಸೇಜ್ ಬಂದಿತ್ತು. ಬಳಿಕ ಬ್ಯಾಂಕ್ಗೆ ಹೋಗಿ ವಿಚಾರಿಸಿದಾಗ ಖಾತೆಯಲ್ಲಿ ಹಣ ಕಡಿತವಾಗಿರುವ ಬಗ್ಗೆ ಮಾಹಿತಿ ಖಚಿತವಾಗಿದ್ದು ಯಾರೋ ಸೈಬರ್ ವಂಚಕರು ವಾಟ್ಸಾಪ್ಗೆ ನಕಲಿ ಲಿಂಕ್ ಕಳುಹಿಸಿ ಈ ಕೃತ್ಯ ವೆಸಗಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ವಂಚನೆಗೊಳಗಾದ ಭಾಸ್ಕರ್ ಅವರು 1930 ಗೆ ಕರೆ ಮಾಡಿ ದೂರು ನೀಡಿದ್ದು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಬಂಟ್ವಾಳ: ಆಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿ ಆಸ್ಪತ್ರೆಗೆ ದಾಖಲು
ಬಂಟ್ವಾಳ : ಆಟೋ ರಿಕ್ಷಾ ಹಿಂದಿನಿಂದ ಡಿಕ್ಕಿ ಹೊಡೆದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಿ ಸಿ ರೋಡು ಲಯನ್ಸ್ ಸೇವಾ ಮಂದಿರದ ಮುಂಭಾಗ ಸಂಭವಿಸಿದೆ. ಗಾಯಾಳು ಪಾದಚಾರಿ ವ್ಯಕ್ತಿಯನ್ನು ಗೂಡಿನಬಳಿ- ಎಂ ಕೆ ರೋಡು ನಿವಾಸಿ ಸಫ್ಘಾನ್ (28) ಎಂದು ಹೆಸರಿಸಲಾಗಿದೆ. ಇವರು ಕೆಲಸದ ನಿಮಿತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಅಬ್ದುಲ್ ಬಶೀರ್ ಎಂಬವರು ಚಲಾಯಿಸಿಕೊಂಡು ಬಂದ ಅಟೋ ರಿಕ್ಷಾ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ರಸ್ತೆಗೆ ಬಿದ್ದ ಸಫ್ಘಾನ್ ಅವರು ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಗಾಯಾಳು ಸಫ್ಘಾನ್ ಅವರ ಸಂಬಂಧಿ ಮೊಹಮ್ಮದ್ ತೌಸೀಫ್ ಎಂಬವರು ನೀಡಿದ ದೂರಿನ ಮೇರೆಗೆ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಪುತ್ತೂರು: ಮನೆ ಮಂದಿ ಇಲ್ಲದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ನಗದು ದೋಚಿದ ಕಳ್ಳರು
ಪುತ್ತೂರು : ಮನೆ ಮಂದಿ ಇಲ್ಲದ ವೇಳೆ ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ಆಭರಣಗಳು ಮತ್ತು ನಗದು ಹಣ ದೋಚಿದ ಘಟನೆ ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಪಡೀಲ್- ವಿಜಯನಗರ ಬಡಾವನೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಶ್ರಿಮತಿ ವಿಜಯಶ್ರೀ ಐ ಭಟ್ (53) ಎಂಬವರ ಮನೆಯಲ್ಲಿ ಈ ಕಳವು ಕೃತ್ಯ ನಡೆದಿದೆ. ವಿಜಯಶ್ರೀ ಭಟ್ (53) ಅವರು ಮೇ 10 ರಂದು ತನ್ನ ಮಗಳು ಹಾಗೂ ಗಂಡನೊಂದಿಗೆ, ಮಗನ ಮನೆಗೆ ಹೋಗಿ, ಅಲ್ಲಿಂದ ಮರುದಿನ ಮೈಸೂರಿಗೆ ತೆರಳಿರುತ್ತಾರೆ. ಇವರ ಮಗನ ಬಳಿ ಮನೆಯ ಇನ್ನೊಂದು ಕೀ ಇದ್ದು, ಆತ ಮೇ 17 ರಂದು ಮನೆಗೆ ಬಂದು ವಾಸವಿದ್ದು, ಮರುದಿನ ಅಂದರೆ ಮೇ 18 ರಂದು ಬೆಳಿಗ್ಗೆ ಮನೆಗೆ ಮತ್ತು ಗೇಟಿಗೆ ಬೀಗ ಹಾಕಿ ತೆರಳಿದ್ದಾನೆ.
ಮೇ 23 ರಂದು ಬೆಳಿಗ್ಗೆ ನೆರೆಮನೆ ಮಹಿಳೆ ಕರೆಮಾಡಿ ಮನೆಯ ಬಾಗಿಲು ತೆರೆದುಕೊಂಡಿರುದಾಗಿ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಮನೆಗೆ ಬಂದು ಪರಿಶೀಲಿಸಿದಾಗ, ಮನೆಯ ಮುಖ್ಯದ್ವಾರದ ಲಾಕ್ ಅನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಬಲಾತ್ಕಾರವಾಗಿ ಮೀಟಿ ಮುರಿದು ಮನೆಯ ಒಳಪ್ರವೇಶಿಸಿರುವಂತೆ ಕಂಡುಬಂದಿದೆ. ಮನೆಯೊಳಗಿದ್ದ 62,700/- ರೂಪಾಯಿ ಮೌಲ್ಯದ ಬೆಳ್ಳಿಯ ಆಭರಣಗಳು ಹಾಗೂ 3,17,400/- ರೂಪಾಯಿ ಮೌಲ್ಯದ ಚಿನ್ನದ ಆಭರಣಗಳು ಹಾಗೂ 8 ಸಾವಿರ ರೂಪಾಯಿ ನಗದು ಹಣ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾದ ಸೊತ್ತುಗಳ ಒಟ್ಟು ಮೌಲ್ಯ 3,88,100/- ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
– ಉಡುಪಿ : ಕಾರು- ಮೀನಿನ ಲಾರಿ ಮಧ್ಯೆ ಭೀಕರ ಅಪಘಾತ ಹಲವು ಮಂದಿಗೆ ಗಾಯ
ಉಡುಪಿ : ಕಾರು ಮತ್ತು ಮೀನು ಲಾರಿ ನಡುವೆ ಮುಖಾಮುಖಿ ಢಿಕ್ಕಿಯಾದ ಪರಿಣಾಮ ಹಲವು ಮಂದಿ ಗಾಯಗೊಂಡ ಘಟನೆ ಉಡುಪಿ ಅಂಬಲಪಾಡಿ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ. ಮೀನಿನ ಲಾರಿ ಕೇರಳದ ಕಡೆಗೆ ಸಾಗುತ್ತಿತ್ತು. ಅಂಬಲಪಾಡಿ ಬಳಿ ಸರ್ವಿಸ್ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ಡಿವೈಡರ್ ಹತ್ತಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೀನಿನ ಲಾರಿ ಕೂಡ ರಸ್ತೆಗೆ ಉರುಳಿಬಿದ್ದಿದ್ದು, ಅದರ ಮುಂಭಾಗಕ್ಕೂ ಹಾನಿಯಾಗಿದೆ. ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಮೀನುಗಳನ್ನು ಬೇರೆ ವಾಹನಕ್ಕೆ ಸ್ಥಳಾಂತರ ಮಾಡಲಾಯಿತು. ಸುದ್ದಿ ತಿಳಿದ ತಕ್ಷಣ ಉಡುಪಿ ಸಂಚಾರಿ ಪೊಲೀಸರು ಸ್ಥಳಕ್ಕಾಗಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.
– ಕೋಟ: ಯುವಕ ನಾಪತ್ತೆ ದೂರು ದಾಖಲು!
ಕೋಟ : ಕೋಟತಟ್ಟು ಗ್ರಾ. ಪಂ. ವ್ಯಾಪ್ತಿಯ ಗೊಬ್ಬರಬೆಟ್ಟು ನಿವಾಸಿ ಅಕ್ಷಯ್ (32) ಇವರು ಮೇ. 21 ರಿಂದ ಕಾಣೆಯಾಗಿರುವ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅಕ್ಷಯರವರು ಕೋಟದ ಖಾಸಗಿ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಮೇ. 21ರಂದು ರಜೆ ಮಾಡಿ ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಹೋದವರು ಮಧ್ಯಾಹ್ನ 1 ಗಂಟೆಗೆ ಅವರ ಪತ್ನಿಗೆ ಕೋಟದಲ್ಲಿ ಕಾಣಸಿಕ್ಕಿದ್ದು ಸ್ವಲ್ಪ ಕೆಲಸ ಇದೆ ಆಮೇಲೆ ಬರುತ್ತೇನೆ ಎಂದು ಹೇಳಿ ಹೋದವರು ಈ ವರೆಗೂ ಸಹ ಮನೆಗೆ ಬಾರದೇ ಇರುವುದರಿಂದ ಎಲ್ಲಾ ಭಾಗಗಳಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬುಧವಾರ ಮೊಬೈಲ್ ಪತ್ತೆ: ಪೊಲೀಸರು ಅಕ್ಷಯ್ ಅವರ ಮೊಬೈಲ್ ಟವರ್ ಲೊಕೇಶನ್ ಪರಿಶೀಲಿಸಿದಾಗ ಕುಂದಾಪುರ ತಾಲೂಕಿನ ಕೊರವಡಿ ಬಳಿ ತೋರಿಸಿದ್ದು ಹಾಗೆ ಪೊಲೀಸರು ಹುಡುಕಾಡಿದಾಗ ಕೊರವಡಿ ಬಳಿ ಮುಳ್ಳಿನ ಪೊದೆಯಲ್ಲಿ ಮೊಬೈಲ್ ಪತ್ತೆಯಾಗಿದೆ. ಕೋಟ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.