ಮೀನು ಹಿಡಿಯಲು ಹೋದ ಯುವಕರು ನೀರುಪಾಲು.!
– ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ
– ದಾಖಲೆಗಳಿಲ್ಲದೆ ಬೃಹತ್ ಮೊತ್ತದ ನಗದು ಚುನಾವಣಾ ಅಧಿಕಾರಿಗಳ ವಶಕ್ಕೆ
– ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು
– ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ.!!
– ಮೂಡುಬಿದಿರೆ: ಇನ್ನೂ ಬಂಧನವಾಗದ ಕಾಮುಕ ಶಿಕ್ಷಕ
NAMMUR EXPRESS NEWS
ಬ್ರಹ್ಮಾವರ : ದೋಣಿಯಲ್ಲಿ ಮೀನು ಹಿಡಿಯಲು ಹೋದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಹೊಸಾಳ ಗ್ರಾಮದ ಸೀತಾನದಿಯಲ್ಲಿ ಮಾ.೨೬ರಂದು ಬೆಳಗ್ಗೆ 9.30ರ ಸುಮಾರಿಗೆ ನಡೆದಿದೆ. ಮೃತರನ್ನು ಹೊಸಾಳ ಗ್ರಾಮದ ಶ್ರೀಶ(21) ಹಾಗೂ ಪ್ರಶಾಂತ್ ಪೂಜಾರಿ (30) ಎಂದು ಗುರುತಿಸಲಾಗಿದೆ. ಇವರಿಬ್ಬರು ಮೀನು ಹಿಡಿಯಲೆಂದು ನಾಗರಮಠದ ಸೀತಾನದಿಗೆ ದೋಣಿಯಲ್ಲಿ ತೆರಳಿದ್ದರು. ಅಲ್ಲಿ ಇವರು ಮೀನಿಗೆ ಬಲೆ ಹಾಕುವಾಗ ನೀರಿನ ಸೆಳೆತಕ್ಕೆ ಸಿಲುಕಿ ನೀರಿಗೆ ಬಿದ್ದರೆನ್ನಲಾಗಿದೆ. ಕೂಡಲೇ ಸ್ಥಳೀಯರು ಮುಳುಗುತ್ತಿರುವ ಇವರ ರಕ್ಷಣೆಗೆ ಧಾವಿಸಿದರು. ಆದರೆ ನೀರಿನ ಸೆಳೆತದಿಂದಾಗಿ ರಕ್ಷಣೆ ಮಾಡಲು ಸಾಧ್ಯವಾಗಲಿಲ್ಲ. ಬಳಿಕ ಅಗ್ನಿಶಾಮಕ ದಳ, ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಸ್ಥಳೀಯರ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ
ಉಡುಪಿ: 6 ಮಂದಿಯ ತಂಡವೊಂದು ಯುವಕನನ್ನು ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ಮಣಿಪಾಲ ಸರಳೆಬೆಟ್ಟು ಪ್ರದೇಶದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಪಟ್ಟಂತೆ ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕುರಿತು ಉಡುಪಿ ಎಸ್ಪಿ ಡಾ.ಅರುಣ್ ಕೆ ಮಾತನಾಡಿ, ಘಟನೆಯಲ್ಲಿ ಭಾಗಿಯಾಗಿರುವ ಎಲ್ಲ ಆರು ಮಂದಿಯನ್ನು ಬಂಧಿಸಲಾಗಿದೆ. ಅವರಲ್ಲಿ ಐವರು ವಯಸ್ಕರು ಮತ್ತು ಒಬ್ಬರು ಅಪ್ರಾಪ್ತರಾಗಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ತನಿಖೆ ನಡೆಸಲಾಗುವುದು ಎಂದರು.
ದೂರುದಾರ ಅರುಷ್ ಕುಮಾರ್, ಮಣಿಪಾಲದ ಬಾರ್ ಅಂಡ್ ರೆಸ್ಟೋರೆಂಟ್ಗೆ ಪ್ರವೇಶಿಸಲು ಸರದಿ ಸಾಲಿನಲ್ಲಿ ನಿಂತಿದ್ದರು. ಆ ಕ್ಷಣದಲ್ಲಿ ಇತರ ಕೆಲವು ಯುವಕರು ಮೊದಲು ರೆಸ್ಟೋರೆಂಟ್ಗೆ ಪ್ರವೇಶಿಸುವುದಾಗಿ ಹೇಳಿ ಕಿಡಿಕಾರಿದರು. ಘಟನೆಯ ನಂತರ ಅರುಷ್ ತನ್ನ ಮನೆಗೆ ಆಟೋದಲ್ಲಿ ಹೋದನು. ನಂತರ ಆತನನ್ನು ಹಿಂಬಾಲಿಸಿ ಆರು ಸದಸ್ಯರು ಥಳಿಸಿದರು. ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಟ್ಲ: ದಾಖಲೆಗಳಿಲ್ಲದೆ ಬೃಹತ್ ಮೊತ್ತದ ನಗದು ಚುನಾವಣಾ ಅಧಿಕಾರಿಗಳ ವಶಕ್ಕೆ
ವಿಟ್ಲ: ಅಧಿಕೃತ ದಾಖಲೆಗಳಿಲ್ಲದೆ ವ್ಯಕ್ತಿಯೋರ್ವ ದ್ವಿಚಕ್ರ ವಾಹನದಲ್ಲಿ ಕೊಂಡುಹೋಗುತ್ತಿದ್ದ ಬೃಹತ್ ಮೊತ್ತದ ನಗದನ್ನು ವಿಟ್ಲ ಸಮೀಪದ ನೆಲ್ಲಿಕಟ್ಟೆ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಕೇರಳ ಮೂಲದ ನಿತ್ಯನಿಧಿ ಸಂಗ್ರಾಹಕ ಧನಂಜಯ ಎಂಬವರು ನಗದು ಕೊಂಡು ಹೋಗುತ್ತಿದ್ದ ವೇಳೆ ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ಗೋಳ್ತಮಜಲು ಗ್ರಾಮಪಂಚಾಯತ್ ಪಿಡಿಒ , ಎಸ್.ಎಸ್.ಟಿ.ತಂಡದ ಮುಖ್ಯಸ್ಥ ವಿಜಯಶಂಕರ್ ಆಳ್ವ ಅವರ ತಂಡ ತನಿಖೆ ನಡೆಸಿ, ಸೂಕ್ತವಾದ ದಾಖಲೆಗಳಿಲ್ಲದ 99 ಸಾವಿರದ 800 ರೂ. ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧನಂಜಯ ಅವರು ದ್ವಿಚಕ್ರ ವಾಹನದಲ್ಲಿ ದಾಖಲೆಗಳಿಲ್ಲದ ನಗದನ್ನು ಕೊಂಡುಹೋಗುತ್ತಿದ್ದರು.
ಧನಂಜಯ ಅವರು ಕೇರಳದಲ್ಲಿ ನಿತ್ಯನಿಧಿ ಸಂಗ್ರಾಹಕರಾಗಿದ್ದು, ನಿತ್ಯನಿಧಿಯ ಹಣ ಹಾಗೂ ಕರ್ನಾಟಕದ ರಾಜ್ಯದ ವಿಟ್ಲದ ಕನ್ಯಾನದಲ್ಲಿರುವ ಆಶ್ರಮಕ್ಕೆ ಬಂದು ಅಲ್ಲಿರುವ ಇಬ್ಬರು ಹಿರಿಯ ನಾಗರಿಕರ ಪಿಂಚಣಿಯ ಹಣವನ್ನು ನೀಡಿ ವಾಪಾಸು ಕೇರಳಕ್ಕೆ ಹೋಗುವು ವೇಳೆ ಹಣ ಸಿಕ್ಕಿದೆ ಎಂದು ಹೇಳಲಾಗಿದೆ. ಇವರ ಜೊತೆಯಲ್ಲಿ ಇದ್ದ ಸಾವಿರಾರು ರೂ. ಗಳಿಗೆ ಸೂಕ್ತವಾದ ದಾಖಲೆಗಳಿದ್ದರೆ ಹತ್ತು ದಿನಗಳೊಳಗೆ ಜಿ.ಪಂ.ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಮುಖ್ಯಸ್ಥರಾಗಿರುವ ಸಿ.ಎಸ್.ಆರ್.ಕಮಿಟಿಗೆ ದಾಖಲೆಯನ್ನು ಸಲ್ಲಿಸಿ ಹಣವನ್ನು ಪಡೆಯಲು ಅವಕಾಶವಿದೆ ಎಂದು ಬಂಟ್ವಾಳ ಸಹಾಯಕ ಚುನಾವಣಾಧಿಕಾರಿ ಡಾ| ಉದಯ ಶೆಟ್ಟಿ ಮಾಹಿತಿ ನೀಡಿದ್ದಾರೆ.
ಕಾರ್ಕಳ: ಮನೆಮಂದಿ ಮಲಗಿದ್ದಾಗ ಮನೆಗೆ ನುಗ್ಗಿದ ಕಳ್ಳರು
ಕಾರ್ಕಳ : ಮನೆಮಂದಿ ಮಲಗಿದ್ದ ವೇಳೆ ಕಳ್ಳರು ಕಿಟಕಿಯ ಬಾಗಿಲ ಚಿಲಕ ಮುರಿದು ಮನೆಯ ಒಳನುಗ್ಗಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2.25 ಲಕ್ಷ ನಗದು ದೋಚಿದ ಘಟನೆ ಕುಕ್ಕುಂದೂರು ನಲ್ಲಿ ನಡೆದಿದೆ. ಇಲ್ಲಿನ ಜೋಡುರಸ್ತೆ ನಿವಾಸಿ ಜಗದೀಶ್ ಬಿ.ಎ. ಅವರ ಮನೆಯಲ್ಲಿ ಕಳ್ಳತನವಾಗಿದ್ದು, ರಾತ್ರಿ ಮನೆಯ ಬಾಗಿಲು ಹಾಕಿ ಭದ್ರಪಡಿಸಿ ಮಲಗಿದ್ದರು. ಆದರೆ ಬೆಳಗ್ಗಿನ ಜಾವ 3: 40 ಗಂಟೆಗೆ ಜಗದೀಶ್ ರವರು ಮಲಗಿದ್ದ ಕೋಣೆಯು ತೆರೆದ ಶಬ್ದ ಕೇಳಿ ಎದ್ದು ನೋಡಿದಾಗ ಮನೆಯ ಮುಂದಿನ ಬಾಗಿಲು ಅರ್ಧ ತೆರೆದಿದ್ದು, ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿರುವುದು ಕಂಡುಬಂದಿದೆ.
ಮನೆಯೊಳಗೆ ಪರಿಶೀಲಿಸಿ ನೋಡಿದಾಗ ಯಾರೋ ಕಳ್ಳರು ಮನೆಯ ಮುಖ್ಯದ್ವಾರದ ಪಕ್ಕದಲ್ಲಿದ್ದ ಕಿಟಕಿಯ ಚಿಲಕವನ್ನು ತುಂಡರಿಸಿ ಬಾಗಿಲಿನ ಚಿಲಕವನ್ನು ಕಿಟಿಕಿಯ ಮೂಲಕ ತೆರೆದು ಮನೆಯೊಳಗೆ ಪ್ರವೇಶಿಸಿ ಮನೆಯ ಇನ್ನೊಂದು ಕೋಣೆಯೊಳಗೆ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಿ ಹುಡುಕಾಡಿ ಕೋಣೆಯಲ್ಲಿ ಕಪಾಟಿನಲ್ಲಿ ಇಟ್ಟಿದ್ದ 2,25,000 ರೂ. ನಗದು ಎಗರಿಸಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಕಡಬ: ಕೃಷಿಗಾಗಿ ಮಾಡಿದ್ದ ಸಾಲ ತೀರಿಸಲಾಗದೆ ಕೃಷಿಕ ಆತ್ಮಹತ್ಯೆ.!!
ಕಡಬ : ಕೃಷಿಗಾಗಿ ಮಾಡಿಕೊಂಡ ಸಾಲ ಮರುಪಾವತಿಸಲು ಸಾಧ್ಯವಾಗದೆ ಹತಾಶೆಗೊಂಡ ಕೃಷಿಕ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ. ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದ ಬುಡಲೂರು ಎಂಬಲ್ಲಿ ಈ ಘಟನೆ ನಡೆದಿದ್ದು ಬೂಡಲೂರು ನಿವಾಸಿ ಶಿವಣ್ಣ ಗೌಡ(61)ಆತ್ಮಹತ್ಯೆ ಮಾಡಿಕೊಂಡ ಕೃಷಿಕರಾಗಿದ್ದಾರೆ. ತಮ್ಮ ಮನೆಯಿಂದ ಅನತಿ ದೂರದ ಗುಡ್ಡೆಯೊಂದರಲ್ಲಿ ಶಿವಣ್ಣ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿವಣ್ಣ ಗೌಡ ಅವರು ಸ್ಥಳೀಯ ಸಹಕಾರಿ ಕೃಷಿ ಪತ್ತಿನ ಸಹಕಾರಿ ಸಂಘ, ಪುತ್ತೂರು ಭೂ ಅಭಿವೃದ್ಧಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗಾಗಿ ರೂ.10 ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದರು ಎನ್ನಲಾಗಿದೆ. ಸಾಲ ಮರುಪಾವತಿಸಲು ಸಾಧ್ಯವಾಗುವುದಿಲ್ಲ ಎನ್ನುವ ಕೊರಗಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಪುತ್ರ ಹೇಮಂತ್ ಅವರು ಕಡಬ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂಡುಬಿದಿರೆ: ಇನ್ನೂ ಬಂಧನವಾಗದ ಕಾಮುಕ ಶಿಕ್ಷಕ
ಮೂಡುಬಿದಿರೆ: ಕಲ್ಲಮುಂಡ್ಕೂರು ಸರಕಾರಿ ಶಾಲೆಯಲ್ಲಿ ನಡೆದಿದ್ದ ಪೋಕ್ಸೊ ಪ್ರಕರಣದಲ್ಲಿ ಇನ್ನೂ ಆರೋಪಿಯ ಬಂಧನವಾಗದಿರುವ ಕುರಿತು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಫೆ.28ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ನಿವಾಸಿ ಅಧ್ಯಾಪಕ ಗುರುವ ಮೊಗೇರಾ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕುರುಕುಳ ನೀಡಿರುವ ಬಗ್ಗೆ ಮಾ.13ರಂದು ಶಾಲೆಯ ಮುಖ್ಯೋಪಾಧ್ಯಾಯರು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಮಾ.14ರಂದು ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣವೂ ದಾಖಲಾಗಿತ್ತು.
ಈ ನಡುವೆ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮತ್ತು ಮಹಿಳಾ ಠಾಣೆಯ ಪೊಲೀಸರು ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಅಧ್ಯಾಪಕ ಗುರುವ ಮೊಗೇರ ಲೈಂಗಿಕ ಕಿರುಕುಳ ನೀಡಿರುವುದನ್ನು ವಿದ್ಯಾರ್ಥಿನಿಯರು ಬರವಣಿಗೆಯಲ್ಲಿ ನೀಡಿದ್ದರು ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯದ ಪರಿಣಾಮವಾಗಿ ಆರೋಪಿಯ ಬಂಧನವಾಗುತ್ತಿಲ್ಲ. ಈ ಪ್ತಕರಣದಲ್ಲಿ ಸ್ಥಳೀಯರೂ ಮುಂದೆ ಹೋಗಲು ಹೆದರುತ್ತಿದ್ದಾರೆ. ಆರೋಪಿಯ ಸ್ವಜಾತಿಯವರು ಆತನ ಜೊತೆ ನಿಂತಿದ್ದಾರೆ ಎಂಬ ಮಾತುಗಳು ಇವೆ. ದೇವರ ಸಮಾನರಾದ ಮಕ್ಕಳ ಮೇಲೆ ಘೋರ ಕೃತ್ಯ ಎಸಗಿರುವ ಆರೋಪಿಗೆ ಯಾವುದೇ ಸಮುದಾಯ, ಸಂಘಟನೆಗಳು ರಕ್ಷಣೆಗೆ ಮುಂದಾಗಬಾರದು ಎಂದು ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದನಂಜಯ ಅವರು ಹೇಳಿದ್ದಾರೆ.
ಮಾ.14ರಂದು ಪ್ರಕರಣ ದಾಖಲಾಗಿದ್ದ ವೇಳೆ ಆರೋಪಿ ಊರಿನಲ್ಲಿ ಆರಾಮವಾಗಿ ಸುತ್ತಾಡಿಕೊಂಡಿದ್ದ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕ ಪೊಲೀಸ್ ಇಲಾಖೆ ಮತ್ತು ಸಂಬಂಧ ಪಟ್ಟ ಇಲಾಖೆಗಳು ಕಾರ್ಯ ಪ್ರವೃತ್ತರಾದವು. ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆತನನ್ನು ಬಂಧಿಸಲು ಮುಂದಾಗದ ಪೊಲೀಸ್ ಇಲಾಖೆ ಈಗ ಶೋಧ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವುದು ವಿಪರ್ಯಾಸ ಎಂದು ಕಲ್ಲಮುಂಡ್ಕೂರು ಗ್ರಾಮಸ್ಥರು ಹೇಳಿದ್ದಾರೆ.