ಕರಾವಳಿ ಟಾಪ್ ನ್ಯೂಸ್
ಮತ್ತೊಂದು ಲವ್-ಜಿಹಾದ್ ಪ್ರಕರಣದ ಆರೋಪ!
– ಎಂಆರ್ಪಿಎಲ್ನಲ್ಲಿ ಮೇಲಿನಿಂದ ಆಯತಪ್ಪಿ ಬಿದ್ದು ಕಾರ್ಮಿಕ ಸಾವು
– ಮಾವಿನ ಕಾಯಿ ಕೊಯ್ಯಲು ಮರವೇರಿದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು!
– ಬಾವಿಗೆ ಬಿದ್ದ ಕೋಳಿ ರಕ್ಷಿಸಲು ಹೋಗಿ ವ್ಯಕ್ತಿ ಸಾವು!
NAMMUR EXPRESS NEWS
ಎಂಆರ್ಪಿಎಲ್ ಸಂಕೀರ್ಣದೊಳಗೆ ಜೆಸಿ ಎಂಜಿನಿಯರಿಂಗ್ ಕಂಪೆನಿಯಲ್ಲಿ ಫಿಟ್ಟರ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ಕಾರ್ಮಿಕರೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟಿದ್ದಾರೆ. ಮೃತರನ್ನು ರಾಂಚಿಯ ಮಾಂಗ್ರಾ ಓರೋನ್(38) ಎಂದು ಗುರುತಿಸಲಾಗಿದೆ. ಹೈಡ್ರೋಕ್ರಾಕರ್ ಪ್ಲಾಂಟ್ನಲ್ಲಿ ಕೆಲಸ ಮಾಡುತ್ತಿದ್ದಾಗ 3ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾರೆ. ತಕ್ಷಣ ಮುಕ್ಕದ ಶ್ರೀನಿವಾಸ ಆಸ್ಪತ್ರೆಗೆ ಸಾಗಿಸಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಈ ಘಟನೆ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಘಟನೆ ಸಂಬಂಧಿಸಿದಂತೆ ಸುರತ್ಕಲ್ ಠಾಣೆಯಲ್ಲಿ 304 ಎ ಅಡಿಯಲ್ಲಿ ನಿರ್ಲಕ್ಯಷದ ಸಾವು ಎಂದು ಕೇಸ್ ದಾಖಲಿಸಲಾಗಿದೆ. ಜೆಸಿ ಇಂಜಿನಿಯರಿಂಗ್ ಕಂಪೆನಿ, ಎಂಆರ್ಪಿಎಲ್ನ ಭದ್ರತಾ ಅಧಿಕಾರಿ ಹಾಗೂ ಜೆಸಿ ಎಂಜಿನಿಯರಿಂಗ್ ಕಂಪೆನಿಯ ಸುಪರ್ ವೈಸರ್ ಸಾಯಿನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ
ಮಾವಿನ ಕಾಯಿ ಕೊಯ್ಯಲು ಮರವೇರಿದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು!
ಮಾವಿನ ಕಾಯಿ ಕೊಯ್ಯುತ್ತಿದ್ದಾಗ ಅಕಸ್ಮಿಕವಾಗಿ ಕೆಳಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಾಸರಗೋಡಿನ ಮೀಯಪದವುನಲ್ಲಿ ನಡೆದಿದೆ. ಮೀಯಪದವು ಬುಡ್ರಿಯದ ಕೃಷ್ಣ ಮೂಲ್ಯ( 32) ಮೃತಪಟ್ಟವರು. ಅವರು ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಮೇ 16ರಂದು ಸಂಜೆ ಮನೆಯ ಹಿತ್ತಿಲಿನಲ್ಲಿರುವ ಮರದಿಂದ ಮಾವಿನಕಾಯಿ ಕೊಯ್ಯುತ್ತಿದ್ದಾಗ ಕೆಳಬಿದ್ದು ಗಂಭೀರವಾಗಿ ಗಾಯಗೊಂಡು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಕೃಷ್ಣ ಮೂಲ್ಯ ಸೋಮವಾರ ಸಂಜೆ ಮೃತಪಟ್ಟಿದ್ದಾರೆ. ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾವಿಗೆ ಬಿದ್ದ ಕೋಳಿ ರಕ್ಷಿಸಲು ಹೋಗಿ ವ್ಯಕ್ತಿ ಸಾವು!
ಕಾಸರಗೋಡಿನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಬಾವಿಗೆ ಬಿದ್ದ ಕೋಳಿ ಯನ್ನು ರಕ್ಷಿಸಲು ಹೋದ ಯುವಕನೋರ್ವ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ನೆಟ್ಟಣಿಗೆಯಲ್ಲಿ ಸೋಮವಾರ ಸಂಜೆ ನಡೆದಿದೆ. ನೆಟ್ಟಣಿಗೆ ಪಡೈಮೂಲೆಯ ಸತೀಶ(30) ಮೃತಪಟ್ಟ ವ್ಯಕ್ತಿ. ನೆಟ್ಟಣಿಗೆ ಕಲ್ಲಗ ಎಂಬಲ್ಲಿ ವ್ಯಕ್ತಿಯೋರ್ವರ ಮನೆಯ ಬಾವಿಗೆ ಕೋಳಿ ಬಿದ್ದಿದ್ದು , ಅದನ್ನು ಮೇಲಕ್ಕೆತ್ತಲು ಸತೀಶ್ ಹಗ್ಗದ ಮೂಲಕ ಬಾವಿಗೆ ಇಳಿದಿದ್ದರು. ಮೇಲೇರುತ್ತಿದ್ದಾಗ ಆಯ ತಪ್ಪಿ ಬಾವಿಗೆ ಬಿದ್ದಿದ್ದು ಮೃತಪಟ್ಟಿದ್ದಾರೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಮೇಲಕ್ಕೆತ್ತಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲಾಗಲಿಲ್ಲ.
ಪುತ್ತೂರಿನಲ್ಲಿ ಸ್ಥಳೀಯ ಗುಂಪಿನಿಂದ ಕಲ್ಲು ತೂರಾಟ
ಪುತ್ತೂರಿನ ನಗರಿಮೊಗರು ಗ್ರಾಮದ ಮೇಘಾ ಫ್ರೂಟ್ ಪ್ರೊಸೆಸಿಂಗ್ ಕಂಪೆನಿಯಾದ ಬಿಂದುವಿನಲ್ಲಿ ಕೊಳವೆಬಾವಿ ಶುದ್ಧೀಕರಣದ ವೇಳೆ ಸ್ಥಳೀಯ ಕೆಲವು ನಿವಾಸಿಗಳು ಕಲ್ಲುತೂರಾಟ ನಡೆಸಿದ ಘಟನೆ ವರದಿಯಾಗಿದೆ. ಅಲ್ಲದೆ, ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವರದಿಯಾಗಿದೆ. ಮೇ 27ರ ಸಂಜೆ ಸಂಸ್ಥೆಯ ನರಿಮೊಗರು ಫ್ಯಾಕ್ಟರಿ ಆವರಣದಲ್ಲಿ ಕೊಳವೆಬಾವಿಯನ್ನು ಶುದ್ಧೀಕರಿಸುವ ವೇಳೆ ಸ್ಥಳೀಯ ನಿವಾಸಿಗಳಾದ ಸಮದ್ ಮತ್ತು ಸಲೀಂ ಹಾಗೂ ಇತರೆ ಕೆಲವರು ಕಂಪೆನಿಯ ಆವರಣದ ಹೊರಭಾಗದಲ್ಲಿ ನಿಂತು ಕಲ್ಲು ತೂರಾಟ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ.
ಬಿಂದು ಫ್ಯಾಕ್ಟರಿಯ ಆಸುಪಾಸಿನಲ್ಲಿ ಕೆಲವು ಮನೆಗಳಿವೆ. ಆದರೆ, ಫ್ಯಾಕ್ಟರಿಯ ಕೊಳವೆಬಾವಿಯೊಂದರ ಶುದ್ಧೀಕರಣ ಕಾರ್ಯ ನಡೆಯುತ್ತಿತ್ತು ಎನ್ನಲಾಗಿದೆ. ಆದರೆ, ಕಂಪೆನಿಯವರು ಕೊಳವೆ ಬಾವಿ ಕೊರೆಯುತ್ತಿರುವುದಾಗಿ ಆರೋಪಿಸಿ ಅದರ ಶಬ್ದ ಕೇಳಿಸಿಕೊಂಡು ಗಲಾಟೆ ಮಾಡಿದ್ದಾರೆ. ಕಂಪೆನಿಯ ಕೊಳವೆಬಾವಿಯಿಂದಾಗಿ ಸ್ಥಳೀಯರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇದೇ ಆರೋಪದಡಿ ರೊಚ್ಚಿಗೆದ್ದ ಸ್ಥಳೀಯರ ಗುಂಪು ಕಂಪನಿಯವರ ಮೇಲೆ ಕಲ್ಲು ತೂರಾಟ ಮಾಡಿರುವುದಾಗಿ ಹೇಳಲಾಗುತ್ತಿದೆ.
ಇನ್ನು ನಾವು ಸ್ಥಳೀಯ ಆಡಳಿತ ಸಂಸ್ಥೆಯ ಆಯುಕ್ತರ ಅನುಮತಿ ಪಡೆದುಕೊಂಡು ಕೊಳವೆಬಾವಿ ಶುದ್ಧೀಕರಣ ಮಾಡುತ್ತಿದ್ದು, ಯಾವುದೇ ಆಳ ಕೊರೆಯುವ ಕೆಲಸ ಮಾಡಿಲ್ಲ. ಆದರೆ, ಸ್ಥಳೀಯ ಯುವಕರು ಕಲ್ಲು ಎಸೆದಿದ್ದು, ನಮ್ಮ ಆಪರೇಟರ್ಗಳಿಗೆ ಗಾಯವಾಗಿದೆ ಎಂದು ಕಂಪೆನಿಯವರು ತಿಳಿಸಿದ್ದಾರೆ.
ಮತ್ತೊಂದು ಲವ್-ಜಿಹಾದ್ ಪ್ರಕರಣದ ಆರೋಪ!
ಕರ್ನಾಟಕದ ಗಡಿ ಜಿಲ್ಲೆಯಾಗಿರುವ ಕಾಸರಗೋಡಿನ ಬದಿಯಡ್ಕದಲ್ಲಿ ಇದೀಗ ಲವ್ ಜಿಹಾದ್ ಆರೋಪದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿರುವ ಹಿಂದೂ ಯುವತಿಯನ್ನು ಮುಸ್ಲಿಂ ಸಮುದಾಯದ ಯುವಕನೊಬ್ಬ ನೋಂದಣಿ ಕಚೇರಿಯಲ್ಲಿ ಕಾನೂನು ಪ್ರಕಾರ ಮದುವೆ ಮಾಡಿಕೊಂಡಿದ್ದು, ಹಿಂದು ಸಂಘಟನೆಯವರು ಈ ಮದುವೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೇ 23ರಂದು ಬಡಿಯಡ್ಕ ನಿವಾಸಿ ನೇಹಾ ಎಂಬ ಯುವತಿ ಮನೆಯಿಂದ ನಾಪತ್ತೆಯಾಗಿದ್ದರು. ಬಳಿಕ ಮೇ 27ರಂದು ಬದಿಯಡ್ಕ ರಿಜಿಸ್ಟ್ರಾರ್ ಕಚೇರಿಯಲ್ಲಿ ಮಿರ್ಶಾದ್ ಎಂಬ ಯುವಕನೊಂದಿಗೆ ಮದುವೆಯಾಗಿರುವ ಬಗ್ಗೆ ನೋಟಿಸ್ ಹಾಕಲಾಗಿತ್ತು. ಇದಕ್ಕೂ ಮೊದಲು ಯುವತಿ ಮನೆಯವರು ನೇಹಾಳನ್ನು ಮಿರ್ಶಾದ್ ಎಂಬಾತ ಅಪಹರಣ ಮಾಡಿರುವುದಾಗಿ ಬದಿಯಡ್ಕ ಠಾಣೆಗೆ ದೂರು ಕೊಟ್ಟಿದ್ದರು.
ಇನ್ನು ರಿಜಿಸ್ಟ್ರಾರ್ ಮದುವೆಯಾಗಿರುವ ಯುವಕ-ಯುವತಿ ಬದಿಯಡ್ಕ ಠಾಣೆಗೆ ಹಾಜರಾಗಿದ್ದು, ಯುವತಿ ಮಿರ್ಶಾದ್ ಜತೆ ತೆರಳುವುದಾಗಿ ಹೇಳಿರುವ ಕಾರಣ ಪೊಲೀಸರು ಇಬ್ಬರನ್ನು ಕಾಸರಗೋಡಿನ ಕೋರ್ಟ್ಗೆ ಹಾಜರುಪಡಿಸಿ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಈಗ ಈ ಮದುವೆಗೆ ಮುಸ್ಲಿಂ ಲೀಗ್ ನಾಯಕರು ಬೆಂಬಲವಾಗಿ ನಿಂತಿದ್ದು, ಹಿಂದು ಸಂಘಟನೆಗಳನ್ನು ಕೆರಳಿಸಿದೆ. ಅತ್ತ ಪೋಷಕರು ಅಸಹಾಯಕರಾಗಿದ್ದು, ಮಗಳು ತಮ್ಮಿಂದ ದೂರವಾಗಿರುವ ನೋವಿನಲ್ಲಿ ಇದ್ದಾರೆ.