ಕರಾವಳಿಯಲ್ಲಿ ಧಾರಾಕಾರ ಮಳೆ..!
– ಹೆಬ್ರಿ, ಕಾರ್ಕಳ, ಮಣಿಪಾಲ, ಉಡುಪಿಯಲ್ಲಿ ಮಳೆ
– ಸುರಿದ ಮಳೆರಾಯ: ವಾತಾವರಣ ಕೂಲ್ ಕೂಲ್
– ಇನ್ನೊಂದು ವಾರ ಭಾರೀ ಮಳೆ: ಹವಾಮಾನ ವರದಿ
NAMMUR EXPRESS NEWS
ಕರಾವಳಿ: ಬಿಸಿಲಬೆಗೆಗೆ ತತ್ತರಿಸಿದ ಕರಾವಳಿಯಲ್ಲಿ ಇಂದು ಮಧ್ಯಾಹ್ನದಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬಿಸಿಲಿಗೆ ಬಸವಳಿದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಬಿಸಿಲ ಝಳಕ್ಕೆ ಒಣಗಿ ಹೋಗಿದ್ದ ಪ್ರಕೃತಿಯಲ್ಲಿ ಪುಳಕ ಶುರುವಾಗಿದೆ. ಉಡುಪಿ, ಕಾರ್ಕಳ, ಹೆಬ್ರಿ ಸೇರಿದಂತೆ ಸುತ್ತಮುತ್ತಲ ತಾಲೂಕುಗಳಲ್ಲಿ ಗುರುವಾರ ಮಧ್ಯಾಹ್ನ ಬಿರುಸಿನ ಮಳೆಯಾಗಿದೆ. ಬಿಸಿಲಿನ ಬೇಗೆಗೆ ಬಸವಳಿದ ರೈತರು ಹಾಗೂ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಮಳೆ ಇಲ್ಲದೇ ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದ. ಜನ ಈಗ ಬಿದ್ದಿರುವ ಮಳೆಯಿಂದಾಗಿ ನೆಮ್ಮದಿಯಿಂದ ಇರುವಂತಾಗಿದೆ.
ಸಾಮಾನ್ಯವಾಗಿ ಇಷ್ಟರಲ್ಲೇ ಮಳೆ ಸುರಿಯಬೇಕಾಗಿತ್ತು. ಆದರೆ ವರುಣನ ಕೃಪೆಯಿಂದ ಜನವರಿಯಿಂದ ಮೇ ತನಕವೂ ಮಳೆ ಸುರಿದಿರಲಿಲ್ಲ. ಕೆಲವು ಕಡೆ ಮಳೆ ಸುರಿದಿತ್ತಾದರೂ ಅದರಿಂದ ಯಾವುದೇ ಪ್ರಯೋಜನವಾಗಿರಲಿಲ್ಲ. ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಮಳೆ ಸುರಿದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಈ ಬಾರಿ ಮಳೆ ಸುರಿಯದೆ ಬಿಸಿಲ ಧಗೆಯೂ ವಾಡಿಕೆಗಿಂತಲೂ ಜಾಸ್ತಿಯಾಗಿತ್ತು.
ಬಹುತೇಕ ಜಲಮೂಲಗಳು ಬತ್ತಿ ಹೋಗಿದ್ದು, ಜನ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿತ್ತು. ಇಂದು ಮಳೆ ಮಧ್ಯಾಹ್ನದಿಂದ ಸರಿಯುತ್ತಿದೆ. ಕಳೆದ ಕೆಲವು ದಿನಗಳಿಂದಲು ಕೂಡ ಆಗಾಗ್ಗೆ ಸುರಿಯುತ್ತಿರುವ ಮಳೆ ಜನರಿಗೆ ಆಶಾಭಾವನೆ ಮೂಡಿಸಿದೆ.
ಇನ್ನೊಂದು ವಾರ ಭಾರೀ ಮಳೆ.!
ರಾಜ್ಯದಲ್ಲಿ ಈಗಾಗಲೇ ಸಂಜೆ ವೇಳೆ ಭಾರೀ ಮಳೆಯಾಗುತ್ತಿದೆ. ಈ ಮಳೆ ಇನ್ನೂ ಒಂದು ವಾರದ ವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಕಡೆಗಳಲ್ಲಿ ಮಳೆಯಾಗಲಿದೆ. ಅಲ್ಲದೇ ರಾಜ್ಯದಲ್ಲಿ ಮಿಂಚು ಗುಡುಗು ಸಹಿತ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಎಂದಿದೆ.
ಭಾರೀ ಸೆಕೆ: ಕೊಂಚ ಕಡಿಮೆ ಆಯ್ತು
ಕರಾವಳಿಯಲ್ಲಿ ಭಾರೀ ಬಿಸಿಲಿನ ಕಾರಣ ಹೀಟ್ ಸ್ಟ್ರೋಕ್ ಆಗುವ ಎಲ್ಲಾ ಅಪಾಯ ಇತ್ತು. ಇದೀಗ ಮಳೆ ಬಿದ್ದ ಕಾರಣ ಕೊಂಚ ತಂಪಿನ ವಾತಾವರಣ ನಿರ್ಮಾಣವಾಗಿದೆ.
ಸಿಡಿಲು, ಮರ ಬಿದ್ದು ಅನಾಹುತ
ದಕ್ಷಿಣ ಕನ್ನಡದ ಸುಬ್ರಮಣ್ಯ, ಕಡಬ, ಸುಳ್ಯ ಭಾಗದಲ್ಲಿ ಈಗಾಗಲೇ ಸಿಡಿಲಿಗೆ ಮೂವರು ಬಲಿಯಾಗಿದ್ರೆ, ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.