ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರ ಸಾವು
– ಪ್ರವಾಸ ಬಂದಿದ್ದ ವೇಳೆ ನಡೆದ ದುರಂತ
– ಬೇಸಿಗೆ ಹೆಚ್ಚುತ್ತಿದ್ದ ಹಾಗೆ ಹೆಚ್ಚಿದ ಸಾವು
NAMMUR EXPRESS NEWS
ಧರ್ಮಸ್ಥಳ: ಎರಡು ವಾರದ ಹಿಂದೆ ದಾಂಡೇಲಿಯಲ್ಲಿ ಒಂದೇ ಕುಟುಂಬದ ಆರು ಮಂದಿ ಪ್ರವಾಸ ಹೋಗಿದ್ದ ವೇಳೆ ನದಿಗೆ ಇಳಿದು ಪ್ರಾಣ ಕಳೆದುಕೊಂಡ ಘಟನೆ ಬೆನ್ನಲ್ಲೇ ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಇದೇ ಮಾದರಿ ಅನಾಹುತ ಸಂಭವಿಸಿ ಇಬ್ಬರು ಬಾಲಕಿಯರು ಪ್ರಾಣ ಕಳೆದುಕೊಂಡಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಾವೂರು ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ. ಉಳ್ಳಾಲ ನಿವಾಸಿಗಳಾದ ಅನ್ಸಾರ್ ಅವರ ಪುತ್ರಿ ಅಶ್ರಾ(11) ಹಾಗೂ ಇಲಿಯಾಸ್ ಅವರ ಪುತ್ರಿ ಮರಿಯಮ್ ನಾಶೀಯಾ(14) ಮೃತ ಬಾಲಕಿಯರು.
ಮೂಲತಃ ನಾವೂರ ನಿವಾಸಿಗಳಾದ ಇಲಿಯಾಸ್ ಅವರು ಇತ್ತೀಚೆಗೆ ಉಳ್ಳಾಲದಲ್ಲಿ ಮನೆ ಕಟ್ಟಿಸಿದ್ದರು. ನಿನ್ನೆ ನಾವೂರು ಮೈಂದಾಳದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದು, ಸಂಜೆ ಮನೆಯವರ ಜತೆಗೆ ನಾವೂರಿನ ನೀರಕಟ್ಟೆ ಎಂಬಲ್ಲಿ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದರು. ಈ ವೇಳೆ ಇಬ್ಬರು ಮಕ್ಕಳು ಕೂಡ ಏಕಾಏಕಿ ನೀರಲ್ಲಿ ಮುಳುಗಿ ಅಪಾಯಕ್ಕೆ ಸಿಲುಕಿಕೊಂಡಿದ್ದರು. ದುರಂತವೆಂದರೆ ಇಬ್ಬರು ಮಕ್ಕಳು ಕೂಡ ತಮ್ಮ ಕಣ್ಣ ಮುಂದೆಯೇ ನೀರಲ್ಲಿ ಮುಳುಗಿ ಪ್ರಾಣ ರಕ್ಷಣೆಗೆ ಅಂಗಲಾಚುತ್ತಿದ್ದರೂ ಮನೆಯವರಿಗೆ ಈಜು ಬರದಿದ್ದ ಕಾರಣ ಅವರ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.