ತಂದೆ, ಮಗಳ ಎದುರೇ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ!
– ನದಿಗೆ ಹಾರುವಾಗ ಕೈ ಹಿಡಿದರೂ ಪ್ರಯತ್ನ ಫಲ ಕೊಡಲಿಲ್ಲ
– ನೋಡ ನೋಡುತ್ತಲೇ ನೇತ್ರಾವತಿಗೆ ಹಾರಿದಳು!
NAMMUR EXPRESS NEWS
ಬಂಟ್ವಾಳ: ಮಹಿಳೆಯೊಬ್ಬರು ತನ್ನ ತಂದೆ ಹಾಗೂ ಪುತ್ರಿಯ ಮುಂದೆಯೇ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳದ ಫರಂಗಿಪೇಟೆಯಲ್ಲಿ ನಡೆದಿದೆ. ಇಬ್ಬರು ಕೈ ಹಿಡಿದು ಬದುಕಿಸಲು ಪ್ರಯತ್ನ ಪಟ್ಟರೂ ಅವರ ಕೈ ತಪ್ಪಿಸಿಕೊಂಡು ಆಕೆ ನದಿಗೆ ಹಾರಿ ಮೃತಪಟ್ಟಿದ್ದಾಳೆ. ಕುಮ್ಡೇಲು ನಿವಾಸಿ ಉಮೇಶ್ ಬೆಳ್ಚಡರ ಪತ್ನಿ ಯಶೋಧಾ(38) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಘಟನೆಯ ಕುರಿತು ಆಕೆಯ ಪುತ್ರಿ ನೀಡಿದ ದೂರಿನಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಶೋಧ ಅವರು ಮೂರ್ಛೆ ರೋಗದಿಂದ ಬಳಲುತ್ತಿದ್ದು ಕೆಲವೊಂದು ಬಾರಿ ತೀವ್ರ ಕೋಪಕ್ಕೆ ಒಳಗಾಗಿ ಜಗಳ ಮಾಡುತ್ತಿದ್ದರು. ಹೀಗಾಗಿ ಯಶೋಧ ಅವರ ಗಂಡ 10 ವರ್ಷದ ಹಿಂದೆ ಬಿಟ್ಟು ಹೋಗಿದ್ದರು. ಸೋಮವಾರ ರಾತ್ರಿ 09:30 ಗಂಟೆ ಸಮಯಕ್ಕೆ ತಾಯಿಯೊಂದಿಗೆ ಜಗಳವಾಡಿ ಬಳಿಕ ಹೋಗಿ ಮಲಗಿದ್ದರು.
ನೋಡು ನೋಡುತ್ತಲೇ ಸಾವು
ಮಂಗಳವಾರ ಎಂದಿನಂತೆ ಮಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದ ಮಹಿಳೆ, 9 ಗಂಟೆಗೆ ಮನೆಗೆ ಕರೆ ಮಾಡಿ “ನಾನು ಫರಂಗಿಪೇಟೆಯಲ್ಲಿದ್ದೇನೆ. ನನಗೆ ಬದುಕುವುದು ಇಷ್ಟವಿಲ್ಲ. ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿ ಫೋನ್ ಕಟ್ ಮಾಡಿದ್ದಾರೆ. ಕೂಡಲೇ ಪುತ್ರಿ ಹಾಗೂ ತಂದೆ ಬಾಲಕೃಷ್ಣ ರಿಕ್ಷಾದಲ್ಲಿ ಫರಂಗಿಪೇಟೆಗೆ ಬಂದಾಗ ಯಶೋಧಾ ಅವರು ನೇತ್ರಾವತಿ ನದಿ ಕಿನಾರೆಗೆ ವೇಗವಾಗಿ ನಡೆದುಕೊಂಡು ಹೋಗುತ್ತಿದ್ದು, ಓಡಿ ಹೋಗಿ ನದಿ ಕಿನಾರೆ ಬಳಿ ಹಿಡಿದುಕೊಂಡಾಗ ಪುತ್ರಿ ಹಾಗೂ ತಂದೆಯ ಕೈಯನ್ನು ದೂಡಿ ಏಕಾಏಕಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೂಡಲೇ ಅವರನ್ನು ಮೇಲಕ್ಕೆತ್ತಿದ್ದು, ಅದಾಗಲೇ ಮೃತಪಟ್ಟಿದ್ದಾರೆ ಎಂದು ಪುತ್ರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ
ಘಟನೆಯ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.