- ನಿಧಾನಕ್ಕೆ ಚೇತರಿಕೆಯಾಗುತ್ತಿರುವ ಪ್ರವಾಸೋದ್ಯಮ
- ದೇಗುಲಗಳು, ತಾಣಗಳು, ಪಟ್ಟಣಗಳಲ್ಲಿ ಜನ
ಚಿಕ್ಕಮಗಳೂರು/ಶಿವಮೊಗ್ಗ: ದಸರಾ ಅಂಗವಾಗಿ ಸರಣಿ ರಜೆ ಹಿನ್ನೆಲೆ ಮತ್ತು ಕರೋನಾ ಕಂಟಕ ಕೊಂಚ ಕಡಿಮೆಯಾದ ಕಾರಣ ಮಲೆನಾಡಿನ ಪ್ರವಾಸಿ ತಾಣಗಳು ಜನರಿಂದ ತುಂಬಿ ಹೋಗಿದ್ದವು.
ಸೌಂದರ್ಯದ ಬೀಡು, ಧಾರ್ಮಿಕರ ಕ್ಷೇತ್ರಗಳ ತವರೂರಾಗಿರುವ ಕಾಫಿನಾಡಿನಲ್ಲಿ ಸತತ ಮೂರು ದಿನಗಳ ಕಾಲ ಸರಕಾರಿ ರಜೆಯ ಹಿನ್ನೆಲೆಯಲ್ಲಿ ಪ್ರವಾಸಿತಾಣಗಳು ಹಾಗೂ ಧಾರ್ಮಿಕ ಯಾತ್ರಾ ಸ್ಥಳಗಳು ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು, ಭಕ್ತರು ತುಂಬಿ ತುಳುಕುತ್ತಿದ್ದವು. ಮಂಗಳವಾರ ಕೂಡ ಪ್ರವಾಸಿಗರ ಸಂಖ್ಯೆ ಕಂಡು ಬಂತು.
ಶನಿವಾರದಿಂದ ಸೋಮವಾರದವರೆಗೆ ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಾದ್ಯಂತ ಹಬ್ಬದ ಸಡಗರ ಕಂಡುಬರುತ್ತಿದ್ದು, ಸಾಲು ರಜೆಗಳ ಹಿನ್ನೆಲೆಯಲ್ಲಿ ರಾಜ್ಯದ ಮೂಲೆ ಮೂಲೆಗಳ ಪ್ರವಾಸಿಗರು ಆಗಮಿಸಿದ್ದರಿಂದ ಭಾರೀ ಜನಜಂಗುಳಿ, ವಾಹನಗಳ ಸಾಲು ಕಂಡು ಬಂತು.
ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಬಾಬಾಬುಡನ್ಗಿರಿ, ಮೈದಾಡಿ, ಸಿರಿಮನೆ ಫಾಲ್ಸ್, ಸಗೀರ್ ಫಾಲ್ಸ್, ಚಾರ್ಮಾಡಿ ಘಾಟ್, ಕುದುರೆಮುಖ, ಕಳಸ, ಶೃಂಗೇರಿ, ಹೊರನಾಡಿನಂತಹ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸಿಗರ ಆಗಮನ ಹೊಸ ಭರವಸೆ ತಂದಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ, ಸಿಗಂದೂರು, ಹುಂಚ, ಕೊಡಚಾದ್ರಿ, ಜೋಗ, ಕುಂದಾದ್ರಿ, ಕುಪ್ಪಳ್ಳಿ, ಮಂಡಗದ್ದೆ, ಸಕ್ರಬೈಲು, ಅಂಭುತೀರ್ಥ, ಆಗುಂಬೆಯಲ್ಲಿ ಪ್ರವಾಸಿಗರ ಸಂಖ್ಯೆ ಕಂಡು ಬಂತು. ಇದರಿಂದಾಗಿ ಮಲೆನಾಡು ಭಾಗದಲ್ಲಿ ವ್ಯಾಪಾರ, ವಹಿವಾಟುಗಳು ಬಿರುಸಿನಿಂದ ನಡೆದಿದೆ. ಪ್ರವಾಸಿ ತಾಣಗಳ ಅಕ್ಕಪಕ್ಕದ ರೆಸಾರ್ಟ್, ಹೋಮ್ ಸ್ಟೇಗಳ ಆವರಣ ಪ್ರವಾಸಿಗರಿಂದ ತುಂಬಿಕೊಂಡಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ದುಬಾರಿ ಕಾರು, ಬೈಕ್ಗಳ ಆಕರ್ಷಕ ಸದ್ದು, ಬೈಕ್ ರೈಡಿಂಗ್ ನೋಡುಗರ ಮನಸೂರೆಗೊಳ್ಳುತ್ತಿವೆ.