- ಬಂಗಾರಪ್ಪ ಹುಟ್ಟು ಹಬ್ಬದ ನೆನಪಲ್ಲಿ ಹೊಸ ಯೋಜನೆ
- ಬಂಗಾರಪ್ಪ ಸಾಧನೆ ಹಾಡಿ ಹೊಗಳಿದ ಯಡಿಯೂರಪ್ಪ
ಸೊರಬ: ಸಮಾಜಮುಖಿ ಚಿಂತನೆಯ ನಾಯಕ ಎಸ್ ಬಂಗಾರಪ್ಪನವರು ಜಾರಿಗೊಳಿಸಿದ ಜನಪರ ಹಾಗೂ ದೂರದೃಷ್ಟಿಯ ಯೋಜನೆಗಳಿಂದಾಗಿ ಇಂದಿಗೂ ಅವರು ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ 87ನೇ ಜನ್ಮದಿನಾಚರಣೆ ಹಾಗೂ ಸೊರಬ ಪಟ್ಟಣದಲ್ಲಿ 21.15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಉದ್ಯಾನವನವನ್ನು ಆನ್ಲೈನ್ ಸಮಾರಂಭದ ಮೂಲಕ ಶಿವಮೊಗ್ಗದಲ್ಲಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಕಂಡ ಅಪರೂಪದ ರಾಜಕಾರಣಿಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರು ರಾಜ್ಯದಲ್ಲಷ್ಟೇ ಅಲ್ಲದೇ, ದೇಶದಲ್ಲಿಯೇ ತಮ್ಮ ಛಾಪು ಮೂಡಿಸಿದ್ದರು. ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಬಂಗಾರಪ್ಪ ಅವರು ತಂದ ದೂರದೃಷಿ ಯೋಜನೆಯಿಂದಾಗಿ ಅವರು ಜನಮಾನಸದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಸೊರಬ ಪಟ್ಟಣದಲ್ಲಿ ಬಂಗಾರಪ್ಪನವರ ಸ್ಮಾರಕ ನಿರ್ಮಿಸಲು ಈಗಾಗಲೇ 1 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಸೂಚನೆ ನೀಡಲಾಗಿದೆ. ಸೊರಬ ಪಟ್ಟಣದಲ್ಲಿ ಉದ್ಘಾಟಿಸಲಾಗಿರುವ ಉದ್ಯಾನವನ್ನು ಪಟ್ಟಣ ಪಂಚಾಯತ್ ಆಡಳಿತ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಿದರು.