ಕಳಲೆಗೆ ಡಿಮ್ಯಾಂಡ್ ಡಿಮ್ಯಾಂಡ್..!
– ಮಲೆನಾಡು, ಕರಾವಳಿಯ ಮೆಚ್ಚಿನ ಖಾದ್ಯ
– ಉಪ್ಪಿನಕಾಯಿ, ಪಲ್ಯಕ್ಕೆ ಮೆಚ್ಚುಗೆ
NAMMUR EXPRESS NEWS
ಮಳೆಗಾಲದ ತಿನಿಸುಗಳಲ್ಲೊಂದಾದ ಬಿದಿರಿನ ಕಳಲೆಗೆ ಎಲ್ಲೆಡೆ ಡಿಮ್ಯಾಂಡ್ ಸೃಷ್ಟಿಯಾಗಿದೆ. ಮಳೆಗಾಲದ ಅತಿಥಿಯಾಗಿರುವ ಈ ಕಳಲೆ ರುಚಿಗೆ ಮಾರುಹೋಗದವರೇ ಇಲ್ಲ. ನಗರದಲ್ಲೆಲ್ಲಾದರೂ ಕಳಲೆ ಬಂದಿದೆ ಎಂದರೆ ಸಾಕು ಜನ ಸಕ್ಕರೆಗೆ ಇರುವೆ ಮುತ್ತಿಕೊಂಡಂತೆ ಮುತ್ತಿಕೊಳ್ಳುತ್ತಾರೆ. ವ್ಯಾಪಾರಿಗಳು ಕೆ.ಜಿ.ಗಟ್ಟಲೆ ತಂದರೂ ಸಂಜೆಯಾಗುವಷ್ಟರಲ್ಲಿ ಎಲ್ಲಾ ಮುಗಿಸಿ, ಜೇಬು ತುಂಬಿಸಿಕೊಂಡೇ ಹಿಂದಿರುಗುತ್ತಾರೆ.
ಮಳೆಗಾಲ ಬಂತೆಂದರೆ ಬಹುತೇಕ ಮನೆಗಳಲ್ಲಿ ತಿಂಗಳುಗಳ ಕಾಲ ಬಿದಿರಿನ ಕಳಲೆಯದ್ದೇ ಖಾದ್ಯ. ಮಳೆಗಾಲದಲ್ಲೊಮ್ಮೆ ಕಳಲೆ ತಿನ್ನದಿದ್ದರೆ ಅದು ಹುಟ್ಟಿದ್ದೂ ವ್ಯರ್ಥ ಅಂತ ಮಲೆನಾಡ ಮಂದಿ ಮಾತಾಡಿಕೊಳ್ತಾರೆ. ಬೇಬಿಕಾರ್ನ್ ಮಂಚೂರಿ, ಪನ್ನೀರು, ಮಶ್ರೂಮ್ ಎಲ್ಲಾರನ್ನೂ ಮೀರಿಸೋ ಸ್ವಾದ ಇರೋದು ಕಳಲೆಗೆ ಮಾತ್ರ. ದೇಹಕ್ಕೆ ಬಿಸಿ ಬಾಯಿಗೆ ಖುಷಿ ನೀಡುವ ಈ ಕಳಲೆ ಮೃದುವಾಗಿರುವ ಹುಲ್ಲು.
ವ್ಯಾಪಾರಿಗಳಿಗೆ ಕಳಲೆ ಹಬ್ಬ!
ಈ ಕಳಲೆ ಮಳೆಗಾಲದ ಆರಂಭದಲ್ಲಿ ದಟ್ಟ ಅಡವಿಯ ಇಕ್ಕೆಲಗಳಲ್ಲಿ ಬೆಚ್ಚಗೆ ಬೆಳೆಯುತ್ತೆ. ಆ ಕಳಲೆಯನ್ನು ನಸುಕಿನ ಜಾವದಲ್ಲೇ ಕತ್ತರಿಸಿ ತರಲು ಹಳ್ಳಿಯ ಜನರ ದೊಡ್ಡ ಹಿಂಡೇ ಹೊರಡುತ್ತೆ ಈಗಂತೂ ಮಲೆನಾಡಲ್ಲಿ ಕಳಲೆಯ ಹಬ್ಬ. ಕಳಲೆಯನ್ನು ಕತ್ತರಿಸುವುದು, ಕಳಲೆಯ ಖಾದ್ಯ ತಯಾರಿಸುವುದು ಎಲ್ಲವೂ ಒಂದು ವಿಶಿಷ್ಟ ಕಲೆ. ಮಲೆನಾಡನ್ನು ದಾಟಿದರೆ ಹಲವರಿಗೆ ಕಳಲೆಯ ಬಗ್ಗೆ ತಿಳುವಳಿಕೆ ಕಡಿಮೆ. ಬಾಳೆದಿಂಡಿಗಿಂತ ರುಚಿಕಟ್ಟಾದ ಈ ವಿಶೇಷವಾದ ಅಪರೂಪದ ಅತಿಥಿಯನ್ನ ಮಲೆನಾಡಿನ ಮನೆಗಳು ಪಲ್ಯ,ಉಪ್ಪಿನಕಾಯಿ, ಸಾಂಬಾರ್ ಹಾಗೂ ವಡೆ ಮಾಡಿ ಸವಿಯುತ್ತವೆ. ಅದರಲ್ಲೂ ಪಲ್ಯ ಅಂತೂ ಸಿಕ್ಕಾಪಟ್ಟೆ ಪೇಮಸ್ಸು.
ಔಷಧೀಯ ಗುಣವಿದೆ!
ಮಾಂಸಾಹಾರಿಗಳಾಗಿದ್ದರೆ ಚಿಕನ್ ಐಟಂನಲ್ಲಿ, ಸಸ್ಯಾಹಾರಿಗಳಾಗಿದ್ದರೆ ಬಟಾಣಿ ಹಾಗೂ ಅವರೆ ಸಾಂಬಾರಿನಲ್ಲಿ ಕಳಲೆಯನ್ನು ಸೇರಿಸಿ ತಿನ್ನುವುದು ಸರ್ವೇಸಾಮಾನ್ಯ. ಇದೇ ರೀತಿ ಮತ್ತೊಂದು ವಿಷಯ ಏನೆಂದರೆ ಕಳಲೆಯ ಪದಾರ್ಥಗಳು ಔಷಧೀಯವಾಗಿಯೂ ಕೂಡ ಪ್ರಸಿದ್ಧ. ಹೀಗಾಗಿ ಹಿರಿಯರು ಮನೆಯಲ್ಲಿದ್ದರೆ ವರ್ಷಕ್ಕೊಮ್ಮೆಯಾದರೂ ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಕಳಲೆಯ ಪದಾರ್ಥ ತಿನ್ನಿಸುತ್ತಾರೆ.