ಮಾಜಿ ಸಿಎಂಗೆ ತೀರ್ಥಹಳ್ಳಿಯಲ್ಲಿ ಅಂತಿಮ ನಮನ
– ಮಲೆನಾಡ ಅಭಿವೃದ್ಧಿಗೆ ಕೃಷ್ಣ ಕೊಡುಗೆ ಅಪಾರ
– ಅಂತಿಮ ದರ್ಶನ ಪಡೆದ ಕಿಮ್ಮನೆ ರತ್ನಾಕರ್
– ಬೆಂಗಳೂರಿನ ಮಲೆನಾಡು ಸಂಘಟನೆಗಳ ಸಂತಾಪ
NAMMUR EXPRESS NEWS
ಮಲೆನಾಡು: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ, ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರ ಸಾವಿಗೆ ಎಲ್ಲೆಡೆ ಕಂಬನಿ ವ್ಯಕ್ತವಾಗುತ್ತಿದೆ.
ಬೆಂಗಳೂರಿನ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು ಈಗಾಗಲೇ ನಾಡಿನ ಗಣ್ಯರು ಅಂತಿಮ ದರ್ಶನ ಪಡೆದಿದ್ದಾರೆ. ಎಲ್ಲೆಡೆ ಶ್ರದ್ದಾಂಜಲಿ ಸಭೆಗಳು ನಡೆಯುತ್ತಿವೆ. ಬುಧವಾರ ಮದ್ದೂರಿನ ಸೋಮನಹಳ್ಳಿಯಲ್ಲಿ ಸಂಜೆ 4 ಗಂಟೆಗೆ ಒಕ್ಕಲಿಗ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಬುಧವಾರ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ.
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಂತಾಪ ಸಭೆ
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷದ ಕಚೇರಿ ಗಾಂಧಿ ಭವನದಲ್ಲಿ ರಾಜ್ಯ ಮತ್ತು ದೇಶದ ಹಿರಿಯ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ ಕೃಷ್ಣ ಅವರಿಗೆ ಭಾವಪೂರ್ಣ ಶೃದ್ಧಾಂಜಲಿಯನ್ನು ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೆಸ್ತೂರು ಮಂಜುನಾಥ್ , ತಾಲೂಕು ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಶಚ್ಚಿಂದ್ರ ಹೆಗ್ಡೆ , ಹಿರಿಯರಾದ ಶಟಿ.ಎಲ್ ಸುಂದರೇಶ್ ಮತ್ತು ಪಟ್ಟಣ ಪಂಚಾಯತಿ ಅಧ್ಯಕ್ಷ ಅಸಾದಿ, ಉಪಾಧ್ಯಕ್ಷರು ಹಾಗೂ ಸದಸ್ಯರುಗಳು ಮತ್ತು ಚುನಾಯಿತ ಜನಪ್ರತಿನಿಧಿಗಳು ಮತ್ತು ಯುವ ಕಾಂಗ್ರೆಸ್ ಮುಖಂಡರುಗಳು ಮತ್ತು ಪಕ್ಷದ ಎಲ್ಲ ಮುಖಂಡರುಗಳು ಉಪಸ್ಥಿತರಿದ್ದರು.
ಅಂತಿಮ ದರ್ಶನ ಪಡೆದ ಕಿಮ್ಮನೆ ರತ್ನಾಕರ್
ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರ ಅಂತಿಮ ದರ್ಶನದ ವೇಳೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ ಅವರು ಭಾಗವಹಿಸಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳಿದರು.
ಬೆಂಗಳೂರಿನ ಮಲೆನಾಡು ಸಂಘಟನೆಗಳ ಸಂತಾಪ
ಬೆಂಗಳೂರಿನ ಮಲೆನಾಡು ಸಂಘಟನೆಗಳು ಕೃಷ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಿವೆ. ಸಹ್ಯಾದ್ರಿ ಸಂಘ ಸೇರಿದಂತೆ ಅನೇಕ ಸಂಘಟನೆಗಳ ಪದಾಧಿಕಾರಿಗಳು ಭೇಟಿ ನೀಡಿ ಸಂತಾಪ ಅಂತಿಮ ದರ್ಶನ ಪಡೆದಿದ್ದಾರೆ.