ಚಿಕ್ಕಮಗಳೂರು: ಪ್ರತಿಭಟನೆ ವೇಳೆ ಡಿಸಿ ಕಚೇರಿಗೆ ನುಗ್ಗಲು ಯತ್ನ
-ಭದ್ರಾ ನದಿ ದಂಡೆಯ ಮೇಲೆ ಕಾಣಿಸಿಕೊಂಡ ಮೊಸಳೆ
-ಎಳನೀರು, ಬೆಳ್ತಂಗಡಿ ರಸ್ತೆ ಅಭಿವೃದ್ಧಿ ಶಾಸಕರಿಂದ ಸ್ಥಳ ಪರಿಶೀಲನೆ
NAMMUR EXPRESS NEWS
ಚಿಕ್ಕಮಗಳೂರು: ದತ್ತಪೀಠದಲ್ಲಿ ಹೋಮಕ್ಕೆ ಅವಕಾಶ ನೀಡದಿದ್ದಕ್ಕೆ ಡಿಸಿ ಕಚೇರಿ ಬಳಿ ಹೋಮ ಮಾಡಿ, ಮುತ್ತಿಗೆ ಹಾಕಿದ್ದ ಹಿಂದೂ ಕಾರ್ಯಕರ್ತರ ಮೇಲೆ FIR ದಾಖಲಾಗಿದೆ. ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಐಪಿಸಿ ಕಲಂ 353 ಹಾಗೂ 341 ಅಡಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಐವರು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ. ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದತ್ತಪೀಠದ ಹೋಮ ಮಂಟಪದಲ್ಲಿ ರಾಮ ತಾರಕ ಹೋಮ ಹವನ ಮಾಡಲು ಹಿಂದೂ ಸಂಘಟನೆಗಳು ಮುಂದಾಗಿದ್ದವು. ಆದರೆ, ಜಿಲ್ಲಾಡಳಿತ ಇದಕ್ಕೆ ನಿರ್ಬಂಧ ಹೇರಲಾಗಿತ್ತು.
ಇದರಿಂದ ಕೆರೆಳಿದ ಹಿಂದೂ ಕಾರ್ಯಕರ್ತರು ಡಿಸಿ ಕಚೇರಿ ಮುಂದೆಯೇ ಕರ್ಪೂರ ಹಚ್ಚಿ, ಶ್ರೀರಾಮನಿಗೆ ಹೋಮ ಹವನ ಮಾಡಿ, ರಾಮ ನಾಮ ಜಪ ಮಾಡಿದ್ದರು. ಅಷ್ಟೇ ಅಲ್ಲದೆ ಹೋಮಕುಂಡವನ್ನು ತಂದು ಹೋಮ ಮಾಡಲು ಮುಂದಾದಾಗ ಪೊಲೀಸರು ಹೋಮಕುಂಡವನ್ನು ವಶಕ್ಕೆ ಪಡೆದುಕೊಂಡರು. ಇದಾದ ಬಳಿಕ ಡಿಸಿ ಕಚೇರಿಗೆ ನುಗ್ಗಲು ಯತ್ನ ನಡೆದವು. ಈ ವೇಳೆ ಓರ್ವ ಕಾರ್ಯಕರ್ತ ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಮಲಗಿದ್ದರು. ಈ ಘಟನೆ ಸಂಬಂಧ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ FIR ದಾಖಲಾಗಿದೆ.
ಭದ್ರಾ ನದಿ ದಂಡೆಯ ಮೇಲೆ ಕಾಣಿಸಿಕೊಂಡ ಮೊಸಳೆ
ಬಾಳೆಹೊನ್ನೂರು : ಬಾಳೆಹೊನ್ನೂರಿನ ಭದ್ರಾ ನದಿ ಸಮೀಪ ಬಿಸಿಲಿಗೆ ಮೈಯೊಡ್ಡಿ ಮಲಗಿರುವ ಮೊಸಳೆ, ಮೊಸಳೆ ಕಂಡು ಸ್ಥಳೀಯರಿಗೆ ಆಶ್ಚರ್ಯ ಭಯ ಇದರಿಂದ ಸ್ಥಳೀಯರಿಗೆ ತುಂಬಾ ಆಶ್ಚರ್ಯ ಉಂಟಾಯಿತು ಈ ಭದ್ರಾ ನದಿಯಲ್ಲೂ ಕೂಡ ಮೊಸಳೆ ಇದೆ ಎಂಬುದಾಗಿ ಎಲ್ಲರೂ ಕೂಡ ಭಯಪಟ್ಟಿದ್ದಾರೆ ಆದ್ದರಿಂದ ತುಂಬಾ ಜಾಗರೂಕತೆಯಿಂದ ಇರುವುದು ಮುಖ್ಯ.
ಎಳನೀರು, ಬೆಳ್ತಂಗಡಿ ರಸ್ತೆ ಅಭಿವೃದ್ಧಿ ಶಾಸಕರಿಂದ ಸ್ಥಳ ಪರಿಶೀಲನೆ
ಕಳಸ: ಸಂಸೆ-ಎಳನೀರು-ದಿಡುಪೆ ರಸ್ತೆ ಅಭಿವೃದ್ಧಿ ಬಗ್ಗೆ ಮೂಡಿಗೆರೆ ಮತ್ತು ಬೆಳ್ತಂಗಡಿ ಶಾಸಕರು ಮಂಗಳವಾರ ಸ್ಥಳ ಪರಿಶೀಲನೆ ನಡೆಸಿದರು. ಸಂಸೆಯಲ್ಲಿ ನಡೆದ ಜನಸಂಪರ್ಕ ಸಭೆಗೆ ಬಂದಿದ್ದ ಶಾಸಕಿ ನಯನಾ ಮೋಟಮ್ಮ ಅವರು, ಆ ಸಭೆಗೂ ಮುನ್ನ ಎಳನೀರು ರಸ್ತೆ ವೀಕ್ಷಣೆಗೆ ತೆರಳಿದರು. ಆ ವೇಳೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಕೂಡ ಸ್ಥಳಕ್ಕೆ ಬಂದರು. ಉಭಯ ಶಾಸಕರು ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಪಡೆದು ಚರ್ಚೆ ನಡೆಸಿದರು. ಈ ರಸ್ತೆಯ ನಿರ್ಮಾಣದಿಂದ ಕಳಸ-ಬೆಳ್ತಂಗಡಿ ರಸ್ತೆ ಸಂಪರ್ಕವು ಹತ್ತಿರವಾಗುತ್ತದೆ. ನೂರಾರು ಜನರಿಗೆ ಇದರಿಂದ ಅನುಕೂಲವಾಗುತ್ತದೆ ಎಂದು ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್ ಮತ್ತು ಸ್ಥಳೀಯರು ಶಾಸಕರ ಗಮನ ಸೆಳೆದರು.
5 ಕಿ.ಮೀ ಉದ್ದದ ಈ ರಸ್ತೆ ನಿರ್ಮಾಣದ ಅಗತ್ಯತೆ ಮತ್ತು ಮಹತ್ವದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಗಮನ ತಂದು ಅಗತ್ಯ ಕೆಲಸ ಮಾಡುವ ಬಗ್ಗೆ ಎರಡೂ ಶಾಸಕರು ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡರಾದ ಶ್ರೇಣಿಕ, ರಾಜೇಂದ್ರ, ರಫೀಕ್, ವಿಶ್ವನಾಥ್, ವೀರೇಂದ್ರ, ಮಲವಂತಿಗೆ ಪಂಚಾಯಿತಿ ಸದಸ್ಯ ಪ್ರಕಾಶ್ ಎಳನೀರು ಇದ್ದರು. ಸಂಸೆಯಲ್ಲಿ ನಡೆದ ಸಭೆಯಲ್ಲಿ ಕುದುರೆಮುಖ ಪೊಲೀಸ್ ಠಾಣೆಯನ್ನು ಸಂಸೆ ಗ್ರಾಮಕ್ಕೆ ಸ್ಥಳಾಂತರಿಸುವ ಬಗ್ಗೆ ಸ್ಥಳೀಯರು ಪ್ರಸ್ತಾಪ ಮಾಡಿದರು. ಪೊಲೀಸ್ ವರಿಷ್ಠಾಧಿಕಾರಿ ಕೂಡ ಸಂಸೆಯಲ್ಲಿ ಠಾಣೆ ನಿರ್ಮಾಣಕ್ಕೆ ಅಗತ್ಯ ಪ್ರಕ್ರಿಯೆ ಆರಂಭಿಸುವುದಾಗಿ ಹೇಳಿದರು. ರಾಜ್ಯ ರೈತ ಸಂಘದ ಕುದುರೆಮುಖ ಘಟಕದ ಸುರೇಶ್ ಭಟ್ ಮತ್ತಿತರರು ಮನವಿ ಸಲ್ಲಿಸಿ ಕುದುರೆಮುಖ ಠಾಣೆಯನ್ನು ಸಂಸೆಗೆ ಸ್ಥಳಾಂತರ ಮಾಡಬಾರದು ಎಂದು ಒತ್ತಾಯಿಸಿದರು. ಕುದುರೆಮುಖ ಪಟ್ಟಣದ ಆಸುಪಾಸಿನಲ್ಲಿ ಬಹಳಷ್ಟು ಜನವಸತಿ ಪ್ರದೇಶ ಇದ್ದು ಸಂಸೆ ಬಹಳ ದೂರ ಆಗುತ್ತದೆ.ಕುದುರೆಮುಖದಲ್ಲೇ ಠಾಣೆ ಮುಂದುವರೆಸಬೇಕು ಎಂದು ಆಗ್ರಹಿಸಿದರು.