– ಚಿಕ್ಕಮಗಳೂರು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಅರೆಸ್ಟ್
-ರಿಪ್ಪನ್ ಪೇಟೆ : ಬಾಳೂರು ಬಳಿ ಕಾರು ಡಿಕ್ಕಿಯಾಗಿ ಮಹಿಳೆ ಸಾವು
– ಭದ್ರಾವತಿ: ಶಾಸಕ ಸಂಗಮೇಶ್ವರ್ ಅವರ ಆಪ್ತ ಸಹಾಯಕ ರಸ್ತೆ ಅಪಘಾತದಲ್ಲಿ ಸಾವು
-ಸಾಗರ: ಆನಂದಪುರ ಸಮೀಪ ಚಲಿಸುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಲಾರಿ
NAMMUR EXPRESS NEWS
ಚಿಕ್ಕಮಗಳೂರು: ಚಿಕ್ಕಮಗಳೂರು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ. ದರ್ಗಾದಲ್ಲಿ ದತ್ತಜಯಂತಿ ಆಚರಿಸುತ್ತೇವೆ ಎಂದಿದ್ದ ಶ್ರೀರಾಮಸೇನೆ, ಮುಂಜಾಗೃತ ಕ್ರಮವಾಗಿ ಜಿಲ್ಲಾಧ್ಯಕ್ಷನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಗೇನಹಳ್ಳಿಗೆ ತೆರಳಲು ಸಿದ್ದತೆ ನಡೆಸಿದ್ದನ್ನು ಗಮನಿಸಿದ ಪೊಲೀಸರು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ವಿಭಾಗದ ಅಧ್ಯಕ್ಷ ರಂಜಿತ್ ಶೆಟ್ಟಿಯನ್ನು ಚಿಕ್ಕಮಗಳೂರು ನಗರದ ಗುರುನಾಥ ಥಿಯೇಟರ್ ಸಮೀಪದ ಅವರ ಮನೆಯಿಂದ ಅವರನ್ನು ಕರೆದೊಯ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಅಲ್ಲದೇ ಗದಗ ಜಿಲ್ಲೆಯಿಂದ ನಾಗೇನಹಳ್ಳಿ ದರ್ಗಾಕ್ಕೆ ತೆರಳಲು ಆಗಮಿಸಿದ ಶ್ರೀರಾಮಸೇನೆ ನಾಲ್ಕಾರುಷ ಮುಖಂಡರನ್ನು ಸಹಾ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ದತ್ತಜಯಂತಿಯ ಕೊನೆಯ ದಿನವಾದ ಇಂದು ಶ್ರೀರಾಮಸೇನೆ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡುವುದಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ನಾಗೇನಹಳ್ಳಿ ಗ್ರಾಮದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ದರ್ಗಾದ ಸುತ್ತ 200 ಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ.
ರಿಪ್ಪನ್ಪೇಟೆ : ಇಲ್ಲಿನ ಬಾಳೂರು ಗ್ರಾಮದ ಸೇತುವೆ ಬಳಿ ಕಾರು ಡಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ನಿವಾಸಿ ನಾಗಮ್ಮ (46) ಮೃತಪಟ್ಟ ದುರ್ಧೈವಿಯಾಗಿದ್ದಾರೆ.ಇವರು ಬಾಳೂರು ಸೇತುವೆ ಬಳಿಯ ಕ್ಯಾಂಪ್ ನಲ್ಲಿ ವಾಸಿಸುತಿದ್ದರು. ಸೇತುವೆ ಬಳಿಯಲ್ಲಿ ಅಪಘಾತದಲ್ಲಿ ಗಾಯಗೊಂಡಿದ್ದ ಎಮ್ಮೆಗೆ ನೀರುಣಿಸುತಿದ್ದ ಮಹಿಳೆಗೆ ಸಾಗರ ಕಡೆಯಿಂದ ರಿಪ್ಪನ್ಪೇಟೆ ಕಡೆಗೆ ಬರುತಿದ್ದ ಕಾರು ಏಕಾಏಕಿ ಡಿಕ್ಕಿಯಾಗಿದೆ. ಬಾಳೂರು ಗ್ರಾಮದ ಸೇತುವೆ ಬಳಿ ಅಪರಿಚಿತ ವಾಹನವೊಂದು ರಸ್ತೆಯಲ್ಲಿದ್ದ ಎಮ್ಮೆಗೆ ಡಿಕ್ಕಿಯಾಗಿತ್ತು.
ಈ ಹಿನ್ನಲೆಯಲ್ಲಿ ಗಾಯಗೊಂಡಿದ್ದ ಎಮ್ಮೆಗೆ ನೀರು ಕುಡಿಸಲು ಬಂದ ಮಹಿಳೆ ಹಿಂದಿರುಗುವಾಗ ಮತ್ತೊಂದು ಕಾರು ಬಂದು ಮಹಿಳೆಗೆ ಡಿಕ್ಕಿಯಾಗಿದೆ. ತಲೆಗೆ ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ 108 ನಲ್ಲಿ ಕಳಿಸಿಕೊಡಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ಮಹಿಳೆ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪಿಎಸ್ಐ ಪ್ರವೀಣ್ ಎಸ್ ಪಿ ಹಾಗೂ ಸಿಬ್ಬಂದಿಗಳು ತೆರಳಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ರಿಪ್ಪನ್ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಭದ್ರಾವತಿ: ಶಾಸಕ ಬಿ.ಕೆ.ಸಂಗಮೇಶ್ವರ್ ಅವರ ಆಪ್ತ ಸಹಾಯಕ ಈಶ್ವರ್ ರಸ್ತೆ ಅಪಘಾದಲ್ಲಿ ಸಾವನ್ನಪ್ಪಿದ್ದು ಶಾಸಕರ ಕುಟುಂಬಕ್ಕೂ ಆಘಾತ ನೀಡಿದೆ. ಆಪ್ತ ಸಹಾಯಕನ ದಿಡೀರ್ ಸಾವಿನ ದುಃಖವನ್ನು ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಂಡದ್ದಾರೆ. ಈಶ್ವರ್ ಕೂಡ್ಲಿಗೆರೆಯಿಂದ ಭದ್ರಾವತಿಗೆ ಬೈಕ್ ನಲ್ಲಿ ಬರುವಾಗ ಲಾರಿ ಡಿಕ್ಕಿ ಹೊಡೆದಿದೆ. ತಕ್ಷಣವೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾದರೂ ಸಹ ಅವರನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಶ್ವರ್ ಅವರ ಮೃತ ದೇಹ ಭದ್ರಾವತಿಯ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಮರಣೋತ್ತರ ಪರೀಕ್ಷೆಯ ಕೇಂದ್ರದಲ್ಲಿರಿಸಲಾಗಿದೆ. ಆಪ್ತ ಸಹಾಯಕನಾದ ಈಶ್ವರ್ ನ ದುರ್ಮರಣದ ಬಗ್ಗೆ ಶಾಸಕರು ಸಂತಾಪ ಮತ್ತು ದುಃಖವನ್ನ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ಬುಕ್ ಪೇಜ್ ನಲ್ಲಿ, ನನಗೆ ಶಕ್ತಿಯಾಗಿ, ನನ್ನ ಬೆನ್ನಲುಬಾಗಿ ನಿಂತಿದ್ದ ಈಶ್ವರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಪೋಸ್ಟ್ ಮಾಡಿದ್ದಾರೆ.
ಸಾಗರ : ತಾಲೂಕಿನ ಆನಂದಪುರ ಸಮೀಪದ
ಮಲಂದೂರು ಗ್ರಾಮದಲ್ಲಿ ಚಲಿಸುತ್ತಿದ್ದ ಬೈಕ್ ಗೆ ಲಾರಿ ರಿವರ್ಸ್ ತೆಗೆದುಕೊಳ್ಳುವ ವೇಳೆ ಗುದ್ದಿದ ಘಟನೆ ನಡೆದಿದೆ. ಶಿಕಾರಿಪುರ ಭಾಗದಿಂದ ಬೈಕ್ ಸವಾರ ಆನಂದಪುರ ಕಡೆ ತೆರಳುತ್ತಿದ್ದ ವೇಳೆ ಮಲಂದೂರಿನ ಬಳಿ ಲಾರಿ ರಿವರ್ಸ್ ತೆಗೆದುಕೊಳ್ಳುತ್ತಿದ್ದು ಮುಂಭಾಗದಲ್ಲಿ ಮತ್ತೊಂದು ವಾಹನ ಬರುತ್ತಿದ್ದು ಬೈಕ್ ಸವಾರ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಬೈಕ್ ನಿಂದ ಹಾರಿ ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ. ಲಾರಿ ಏಕಾಏಕಿ ರಿವರ್ಸ್ ಬಂದ ಹಿನ್ನೆಲೆ ಬೈಕ್ ಮೇಲೆ ಹತ್ತಿದ್ದು, ಬೈಕ್ ಸಂಪೂರ್ಣವಾಗಿ ಜಖಂಗೊಂಡು ಅಪ್ಪಚ್ಚಿಯಾಗಿದೆ. ಅಪಘಾತದ ರಭಸಕ್ಕೆ ಬೈಕ್ ನ ಟೈರ್ ಹಾಗೂ ಬೈಕ್ ನ ವಿವಿಧ ಭಾಗಗಳು ಬೈಕ್ ನಿಂದ ಬೇರ್ಪಡೆಯಾಗಿವೆ.