ಮೈಸೂರು ಟಾಪ್ 3 ನ್ಯೂಸ್..!
– ಉಳುಮೆ ಟ್ರ್ಯಾಕ್ಟರ್ ಗೆ ಸಿಲುಕಿ ಬಾಲಕ ಮೃತ್ಯು!
– ಕ್ಯಾಂಟೀನ್ ನಡೆಸ್ತಿದ್ದ ದಂಪತಿ ಅನುಮಾನಾಸ್ಪದ ಸಾವು!
– ಅನ್ನಹಾಕಿದ ಮನೆಗೆ ಕಾರ್ಪೆಂಟರ್ ಕನ್ನ: ಮಾಲೀಕನಿಂದ ತಪ್ಪಿಸಿಕೊಳ್ಳಲು ಹೋಗಿ ಮಹಡಿಯಿಂದ ಬಿದ್ದು ಗಾಯ
NAMMUR EXPRESS NEWS
ಮೈಸೂರು : ಅಜ್ಜಿ ಮನೆಗೆ ಬಂದಿದ್ದ ಬಾಲಕ ಟ್ರ್ಯಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇವರಸನಹಳ್ಳಿಯಲ್ಲಿ ನಡೆದಿದೆ. 8 ವರ್ಷದ ಬಾಲಕ ಭವಿಷ್ ಟ್ರ್ಯಾಕ್ಟರ್ ಗೆ ಸಿಲುಕಿ ಸಾವನ್ನಪ್ಪಿದ ಬಾಲಕ. ಟ್ರಕ್ಟರ್ ರೊಟಾವೆಲ್ಟರ್ಗೆ ಬಾಲಕ ಸಿಲುಕಿ ದೇಹ ಛಿದ್ರ ಛಿದ್ರವಾಗಿದೆ. ಚಾಮರಾಜನಗರಕ್ಕೆ ವಿವಾಹವಾಗಿದ್ದ ತಾಯಿ ಮಮತಾ, ಮಕ್ಕಳೊಂದಿಗೆ ದೇವರಸನಹಳ್ಳಿಗೆ ಬಂದಿದ್ದರು. ಈ ವೇಳೆ ಭವಿಷ್ ತನ್ನ ಸೋದರಮಾವನ ಜೊತೆ ಟ್ರ್ಯಾಕ್ಟರ್ ನಲ್ಲಿ ಜಮೀನಿಗೆ ತೆರಳಿದ್ದನು. ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ವೇಳೆ ಭವಿಷ್ ಟ್ರ್ಯಾಕ್ಟರ್ ನಿಂದ ಕೆಳಗೆ ಬಿದ್ದಿದ್ದಾನೆ ಬಳಿಕ ರೊಟಾವೆಲ್ಟರ್ಗೆ ಸಿಲುಕಿ ಅವಘಡ ಸಂಭವಿಸಿದೆ. ಪ್ರಕರಣ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕ್ಯಾಂಟೀನ್ ನಡೆಸ್ತಿದ್ದ ದಂಪತಿ ಅನುಮಾನಾಸ್ಪದ ಸಾವು!
ಮೈಸೂರು: ಜಿಲ್ಲೆಯ ಪಿರಿಯಾಪಟ್ಟಣದ ಗೊಲ್ಲರ ಬೀದಿಯಲ್ಲಿರುವ ಮನೆಯೊಂದರಲ್ಲಿ ದಂಪತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಪ್ರಕಾಶ್(51) ಮತ್ತು ಪತ್ನಿ ಯಶೋಧ(48) ಮೃತರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈವರೆಗೂ ಪತಿ ಹಾಗೂ ಪತ್ನಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ಮೃತದೇಹಗಳ ಮೇಲೆ ಯಾವುದೇ ಗಾಯದ ಗುರುತು ಇಲ್ಲ. ಪತಿ ಪ್ರಕಾಶ್ ರಸ್ತೆ ಬದಿ ಕ್ಯಾಂಟೀನ್ ನಡೆಸುತ್ತಿದ್ದರೆ, ಪ್ರಕಾಶ್ ಪತ್ನಿ ಯಶೋಧ ಫ್ಲೋರ್ ಮಿಲ್ ನಡೆಸುತ್ತಿದ್ದರು. ಈ ಕುರಿತು ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅನ್ನ ಹಾಕಿದ ಮನೆಗೆ ಕಾರ್ಪೆಂಟರ್ ಕನ್ನ : ಮಾಲೀಕನಿಂದ ತಪ್ಪಿಸಿಕೊಳ್ಳಲು ಹೋಗಿ ಮಹಡಿಯಿಂದ ಬಿದ್ದು ಗಾಯ :
ಮೈಸೂರು: ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಅನ್ನ ಹಾಕಿದ ಮನೆಗೆ ಕಾರ್ಪೆಂಟರ್ ಕನ್ನ ಹಾಕಲು ಮುಂದಾಗಿ ರೆಡ್ಹ್ಯಾಂಡ್ ಆಗಿ ಮಾಲೀಕನ ಕೈಗೆ ಸಿಕ್ಕಿಬಿದ್ದಿದ್ದಾನೆ. ಇನ್ನು ಮಾಲೀಕನಿಂದ ತಪ್ಪಿಸಿಕೊಂಡು ಮಹಡಿಯನ್ನು ಜಿಗಿದು ಹೋಗುವಾಗ ಬಿದ್ದು, ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾನೆ. ಈ ಘಟನೆ ಮೈಸೂರಿನ ಮಾನಸಿ ನಗರದಲ್ಲಿ ನಡೆದಿದೆ. ಕಳ್ಳತನಕ್ಕೆ ಬಂದು ಸಿಕ್ಕಿಹಾಕಿಕೊಂಡ ಕಾರ್ಪೆಂಟರ್ ಅನ್ನು ರವಿ ಎಂದು ಗುರುತಿಸಲಾಗಿದೆ. ಮೈಸೂರಿನ ಮಾನಸಿ ನಗರದಲ್ಲಿ ವಾಸವಾಗಿರುವ ಡಾ.ಬಾಲಾಜಿ ಅವರ ಮನೆಯಲ್ಲಿ ರವಿ ಮರ ಗೆಲಸ ಮಾಡಲು ಬಂದಿದ್ದನು.
ದೊಡ್ಡ ಮನೆಯಾಗಿದ್ದರಿಂದ ದೂರದ ಊರಿನಿಂದ ಬಂದು ಕೆಲಸ ಮಾಡಿಕೊಂಡಿದ್ದ ರವಿಗೆ ಬೇರೆಡೆ ಉಳಿದುಕೊಳ್ಳುವುದಕ್ಕಿಂತ ದೊಡ್ಡದಾದ ಮನೆಯಲ್ಲಿ ಒಂದಿಷ್ಟು ಜಾಗ ಕೊಟ್ಟು ಮನೆಯಲ್ಲಿಯೇ ಉಳಿದುಕೊಂಡು ಕೆಲಸ ಮಾಡಲು ವ್ಯವಸ್ಥೆ ಮಾಡಿಕೊಟ್ಟಿದ್ದರು. ಆದರೆ, ಕಳ್ಳನ ಮನಸ್ಸು ಹುಳ್ಳುಳ್ಳಗೆ ಎನ್ನುವಂತೆ ಹಣ ಹಾಗೂ ಆಭರಣ ನೋಡಿದಾಕ್ಷಣ ಅದನ್ನು ಕದಿಯಬೇಕು ಎಂದು ರವಿಗೆ ಅನಿಸಿದೆ. ಹೀಗಾಗಿ, ಡಾ. ಬಾಲಾಜಿ ಅವರ ಮನೆಯಲ್ಲಿ ಈ ಹಿಂದೆಯೂ ಸಣ್ಣ ಪುಟ್ಟ ಹಣವನ್ನು ಕಾರ್ಪೆಂಟರ್ ರವಿ ಮೂರು ಬಾರಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದನು. ಆದರೆ, ನೀನು ಚೆನ್ನಾಗಿ ಕಾರ್ಪೆಂಟರ್ ಕೆಲಸ ಮಾಡುತ್ತೀಯ. ನಿಮ್ಮ ಜೀವನಕ್ಕೆ ದುಡಿದ ಹಣವೇ ಸಾಕು, ಕಳ್ಳತನ ಮಾಡುವುದು ಬಿಟ್ಟುಬಿಡು ಎಂದು ಬುದ್ಧಿ ಮಾತನ್ನು ಹೇಳಿದ್ದರು. ಜೊತೆಗೆ, ಇನ್ನೊಂದು ಬಾರಿ ಕಳ್ಳತನ ಮಾಡಿದರೆ ಪೊಲೀಸರಿಗೆ ಹಿಡಿದು ಕೊಡುವುದಾಗಿ ಹೇಳಿ ಎಚ್ಚರಿಕೆಯನ್ನೂ ಕೊಟ್ಟಿದ್ದರು.
ಆಗ ನಾಟಕ ಮಾಡಿ ಇನ್ನುಮುಂದೆ ಹೀಗೆ ಮಾಡೊಲ್ಲವೆಂದು ನಂಬಿಕೆ ಗಳಿಸಿಕೊಂಡ ರವಿ, ಸ್ವಲ್ಪ ದಿನ ಯಾವುದೇ ಕಳ್ಳತನ ಮಾಡದೇ ಸುಮ್ಮನೇ ಕೆಲಸ ಮಾಡಿಕೊಂಡಿದ್ದನು. ನಂತರ ಮನೆಯವರ ನಂಬಿಕೆಯನ್ನೂ ಗಳಿಸಿಕೊಂಡು ಮನೆಯ ಮುಖ್ಯ ಬಾಗಿಲಿನ ನಕಲಿ ಕೀಯನ್ನು ಕೂಡ ಮಾಡಿಸಿಟ್ಟುಕೊಂಡಿದ್ದನು. ಇನ್ನು ಮನೆಯಲ್ಲಿ ಯಾರು ಇಲ್ಲದ ವೇಳೆ ನಕಲಿ ಬೀಗ ಬಳಸಿ ಕಳ್ಳತನಕ್ಕೆ ಯತ್ನಿಸಿದ್ದಾನೆ. ಈ ವೇಳೆ ಡಾ. ಬಾಲಾಜಿ ಅವರು ದಿಢೀರನೇ ಮನೆಗೆ ಆಗಮಿಸಿದ್ದಾರೆ. ಆಗ ಮನೆಗೆ ಬೀಗ ಹಾಕಿದ್ದರೂ ಹೇಗೆ ಬೀಗ ತೆಗೆದಿದೆ ಎಂದು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಕಳ್ಳ ಮನೆಯಲ್ಲಿಯೇ ಇದ್ದು, ನೀವು ಬಂದರೆ ಸುಲಭವಾಗಿ ಹಿಡಿಯಬಹುದು ಎಂದು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆಗ ಪೊಲೀಸರ ಸಮೇತ ಮನೆಯೊಳಗೆ ಹೋದ ಡಾ. ಬಾಲಾಜಿ ಅವರು ತಮ್ಮ ಕಡೆಗೆ ಬರುವುದನ್ನು ಗಮನಿಸಿದ ಕಳ್ಳ ಕಾರ್ಪೆಂಟರ್ ರವಿ ಮನೆಯ ಮಹಡಿಯಿಂದ ಬೇರೊಂದು ಮಹಡಿಗೆ ಜಿಗಿಯಲು ಮುಂದಾಗಿದ್ದಾನೆ.
ಇನ್ನು ಮಹಡಿಗಳು ದೂರ ಇದ್ದಿದ್ದರಿಂದ ಮನೆಯ ರಗ್ಗು ಬಳಸಿ ಜಿಗಿಯಲು ಮುಂದಾಗಿದ್ದಾರೆ. ಆದರೆ, ಕೈಯಲ್ಲಿದ್ದ ರಗ್ಗು ತಪ್ಪಿದ್ದು ಸೀದಾ ಕೆಳಗೆ ಬಿದ್ದಿದ್ದಾನೆ. ಮನೆಯ ಪಕ್ಕದಲ್ಲಿ ಏನೋ ಬಿದ್ದ ಶಬ್ದ ಉಂಟಾದ ತಕ್ಷಣ ಅಲ್ಲಿಗೆ ತೆರಳಿದ ಪೊಲೀಸರು ಹಾಗೂ ಡಾ. ಬಾಲಾಜಿ ಅವರಿಗೆ ಕಳ್ಳ ರವಿ ಬಿದ್ದು ತಲೆಗೆ ಗಾಯವಾಗಿ ಒದ್ದಾಡುವುದು ಕಂಡುಬಂದಿದೆ. ಇನ್ನು ಪೊಲೀಸರು ಕಳ್ಳನನ್ನು ವಶಕ್ಕೆ ಪಡೆದಿದ್ದಾರೆ. ನಂತರ, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದು, ಚಿಕಿತ್ಸೆಯಾದ ನಂತರ ವಶಕ್ಕೆ ಪಡೆದು ವಿಚಾರಣೆ ಮಾಡಲಿದ್ದಾರೆ. ಅನ್ನ ಹಾಕಿದ ಮನೆಗೆ ಕನ್ನ ಹಾಕಲು ಬಂದು ಸಿಕ್ಕಿಬಿದ್ದ ಕಳ್ಳ ರವಿಯನ್ನು ಮೈಸೂರು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.