ಎನ್. ಆರ್. ಪುರ ಪಟ್ಟಣಕ್ಕೆ ಆನೆಗಳು ನುಗ್ಗುವ ಭಯ!
– ಭದ್ರಾ ಹಿನ್ನೀರು ಬಳಿ ಬೀಡುಬಿಟ್ಟ ಕಾಡಾನೆ ಹಿಂಡು
– ಅಪಾರ ಬೆಳೆ ಹಾನಿ: ಜನರಿಗೆ ಜೀವ ಭಯ.. ಅರಣ್ಯ ಇಲಾಖೆ ಎನ್ ಮಾಡ್ತಿದೆ?
NAMMUR EXPRESS NEWS
ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಗೂ ಇದೀಗ ಕಾಡಾನೆ ಕಂಟಕ ಶುರುವಾಗಿದೆ. ಸುಮಾರು 17ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕು ಭದ್ರಾ ಹಿನ್ನೀರು ದಾಟಿ, ಕಾಡಂಚಿನ ತೋಟಗಳಲ್ಲಿ ಆನೆಗಳು ಬೀಡು ಬಿಟ್ಟಿವೆ. ಇದೀಗ ಈ ಭಾಗದ ಜನ ಆತಂಕದಲ್ಲಿದ್ದಾರೆ. ಆನೆ ಭಯದಿಂದ ಹಳುವಳ್ಳಿ ಎಂಬ ಹಳ್ಳಿಯ ಜನರೇ ಸೇರಿ ಬೇಲಿ ನಿರ್ಮಾಣ ಮಾಡಿಕೊಂಡಿದ್ದಾರೆ. ಭದ್ರಾ ನದಿಯಲ್ಲಿ ನೀರು ಕಡಿಮೆಯಾಗಿರುವ ಕಾರಣ ಆನೆಗಳು ನದಿ ದಾಟಿ ಗ್ರಾಮಗಳತ್ತ ಬರುತ್ತಿವೆ. ನಿತ್ಯವೂ ಒಂದೊಂದು ಹಳ್ಳಿಯಲ್ಲಿ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿದೆ.
ಆನೆಗಳು ಕಾಣಿಸಿಕೊಂಡಿರುವ ಹಳುವಳ್ಳಿಯಿಂದ ಎನ್.ಆರ್.ಪುರ ತಾಲೂಕು ಕೇಂದ್ರಕ್ಕೆ ಒಂದು ಕಿ.ಮೀ. ದೂರವಿದೆ. ಆನೆ ಹಿಂಡು ಪಟ್ಟಣಕ್ಕೆ ಬಂದರೆ ಕಥೆ ಏನು ಎಂಬ ಭಯವೂ ಇದೆ. ಆನೆಗಳು ಈ ಭಾಗದಲ್ಲಿ ನೂರಾರು ಎಕರೆ ಅಡಿಕೆ, ತೆಂಗು, ಬಾಳೆ, ಭತ್ತದ ಕೃಷಿಯನ್ನು ನಾಶ ಮಾಡಿವೆ. ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಕ್ಷಣೆ ಒದಗಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ. ಆನೆಗಳನ್ನು ಓಡಿಸಲು ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.