ಪುನೀತ್ ನೆನಪಿನ ದಿನ: ಮತ್ತೆ ಹುಟ್ಟಿ ಬನ್ನಿ ಅಪ್ಪು..!
– ಪುನೀತ್ ನಿಧನರಾಗಿ ಇಂದಿಗೆ 3 ವರ್ಷ
– ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲಿ ಅಪ್ಪು ಜೀವಂತ
NAMMUR EXPRESS NEWS
ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ, ಹಿನ್ನೆಲೆ ಗಾಯಕ, ಚಲನಚಿತ್ರ ನಿರ್ಮಾಪಕ, ದೂರದರ್ಶನ ನಿರೂಪಕ ಮತ್ತು ಲೋಕೋಪಕಾರಿ, ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರು 2021ರ ಅ. 29ರಂದು ಹೃದಯಾಘಾತದಿಂದ ಮೃತಪಟ್ಟಿದ್ದು ಅವರ ಸೇವಾ ಕಾರ್ಯಗಳು ಇಂದು ನೆನಪಾಗಿ ಉಳಿದಿದೆ. ಸದಾ ಹಸನ್ಮುಖಿಯಾಗಿ ಸಮಾಜಕ್ಕೆ ಒಳಿತು ನೀಡುವ ಚಿತ್ರಗಳ ಸಂದೇಶವನ್ನು ನೀಡುತ್ತಾ ಎಲ್ಲರ ನೆಚ್ಚಿನ ಮನೆಯ ಮಗನಾಗಿ ಹೊರಹೊಮ್ಮಿದ್ದರು. ಆದರೆ ವಿಧಿ ತಮ್ಮ 46ನೇ ವರ್ಷದಲ್ಲಿ ಕರೆದುಕೊಂಡಿತು.
ಸಮಾಜ ಸೇವೆ ಮೂಲಕ ರಿಯಲ್ ಹೀರೋ!
ಕೋಟ್ಯಾಂತರ ಕನ್ನಡಿಗರ ಆಸ್ತಿಯಾಗಿದ್ದ ಕರುನಾಡ ‘ಕಿರುನಗೆ’ ಕಣ್ಮರೆಯಾದರೂ ಅಪ್ಪು ಮೊಗದಲ್ಲಿನ ನಗು ಎಂದಿಗೂ ಶಾಶ್ವತ. ಕರುನಾಡಿಗೆ ಅಪ್ಪು ಇನ್ನಿಲ್ಲ ಎನ್ನುವ ಸುದ್ದಿ , ಕಟು ಸತ್ಯವಾದರು ಜನ ನಂಬಲು ಸಾಧ್ಯವಿರಲಿಲ್ಲ. ಆದರೆ ನಂಬದೇ ಬೇರೆ ವಿಧಿ ಇರಲಿಲ್ಲ. ಕನ್ನಡ ನಾಡಿನ ಹೆಮ್ಮೆಯ ನಾಯಕನಾಗಿ ಸಮಾಜ ಸೇವೆಯನ್ನೇ ತನ್ನ ಉಸಿರಾಗಿಸಿಕೊಂಡು, ತಾನು ಮಾಡಿದ ಕೆಲಸ ಇತರರಿಗೆ ಗೊತ್ತಾಗದಂತೆ ಸಹಾಯ ಹಸ್ತ ಚಾಚುತ್ತಿದ್ದ ಅಪ್ಪಟ ಚಿನ್ನ. ನಮ್ಮನೆಲ್ಲಾ ಅಗಲಿ ಇಂದಿಗೆ 3 ವರ್ಷ. ಯುವರತ್ನ ಡಾ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಮನದಲ್ಲಿ ನಮ್ಮಿಂದ ದೂರಾದರೂ ಅವರ ನೆನಪುಗಳು ಸದಾ ಅಜರಾಮರ. ಪ್ರತಿಯೊಬ್ಬ ಅಭಿಮಾನಿಯ ಎದೆಯಲ್ಲಿ ಅಪ್ಪು ನೆನಪುಗಳು ಜೀವಂತವಾಗಿದೆ. ಇಂದಿಗೂ ಜೀವಂತವಾಗಿದ್ದಾರೆ.
ಅಪ್ಪು ಸಮಾಧಿಗೆ ಕುಟುಂಬದ ಪೂಜೆ
ಮೂರನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ಅಪ್ಪು ಸಮಾಧಿಗೆ ಅವರು ಕುಟುಂಬ ಪೂಜೆ ಸಲ್ಲಿಸಲಿದೆ. ಕಂಠೀರವ ಸ್ಟೂಡಿಯೊದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದು ಸಾವಿರಾರು ಮಂದಿ ಅಭಿಮಾನಿಗಳೂ ಭೇಟಿ ನೀಡಲಿದ್ದಾರೆ.
ಬಾಲ್ಯದಲ್ಲೇ ನಟನೆ: ಬಳಿಕ ಸೂಪರ್ ಸ್ಟಾರ್
ಬಾಲ್ಯದಲ್ಲಿ, ಅವರು ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡು ನಂತರ 32 ಚಿತ್ರಗಳಲ್ಲಿ ನಾಯಕರಾಗಿ ಕಾಣಿಸಿಕೊಂಡರು. ವಸಂತ ಗೀತೆ (1980), ಭಾಗ್ಯವಂತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983), ಭಕ್ತ ಪ್ರಹ್ಲಾದ (1983), ಯಾರಿವನು (1984) ಮತ್ತು ಬೆಟ್ಟದ ಹೂವು (1985) ಚಿತ್ರಗಳಲ್ಲಿ ಬಾಲನಟನಾಗಿ ಅಪ್ಪು ಮಾಡಿದ ಅಭಿನಯ ಪ್ರಶಂಸೆಗೆ ಪಾತ್ರವಾಗಿದೆ.
ಪ್ರಶಸ್ತಿಗಳ ಮಹಾಪೂರ
ಬೆಟ್ಟದ ಹೂವು ಚಿತ್ರದಲ್ಲಿನ ರಾಮು ಪಾತ್ರಕ್ಕಾಗಿ ಅವರು ಅತ್ಯುತ್ತಮ ಬಾಲ ಕಲಾವಿದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದರು . ಅವರು ಚಲಿಸುವ ಮೋಡಗಳು ಮತ್ತು ಎರಡು ನಕ್ಷತ್ರಗಳು ಗಾಗಿ ಕರ್ನಾಟಕ ರಾಜ್ಯ ಅತ್ಯುತ್ತಮ ಬಾಲ ಕಲಾವಿದ ಪ್ರಶಸ್ತಿಯನ್ನು ಗೆದ್ದಿದ್ದಾರೆ . ಪುನೀತ್ ಅವರ ಮೊದಲ ಪ್ರಮುಖ ಪಾತ್ರ 2002 ರ ಅಪ್ಪು . ಮೂರು ದಶಕಗಳ ಕಾಲದ ವೃತ್ತಿಜೀವನದಲ್ಲಿ, ಅವರು ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ , ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು , ಆರು ಫಿಲ್ಮ್ಫೇರ್ ಪ್ರಶಸ್ತಿಗಳು ದಕ್ಷಿಣ ಮತ್ತು ಐದು SIIMA ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಅವರಿಗೆ ಮೈಸೂರು ವಿಶ್ವವಿದ್ಯಾನಿಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ . ಕರ್ನಾಟಕ ಸರ್ಕಾರವು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು 1 ನವೆಂಬರ್ 2022 ರಂದು ಮರಣೋತ್ತರವಾಗಿ ಪುನೀತ್ ರಾಜ್ಕುಮಾರ್ ಅವರಿಗೆ ನೀಡಿದೆ.
ಗಂಧದ ಗುಡಿ ಡಾ. ಪುನೀತ್ ರಾಜಕುಮಾರ್ ಕೊನೆ ಸಿನಿಮಾ
ಗಂಧದ ಗುಡಿ ಡಾ. ಪುನೀತ್ ರಾಜಕುಮಾರ್ ಅವರು ನಟಿಸಿದ ಕೊನೆಯ ಬೆಳ್ಳಿತೆರೆಯ ಡಾಕ್ಯು-ಡ್ರಾಮಾವಾಗಿದೆ.
ಕನ್ನಡದ ಕೋಟ್ಯಾಧಿಪತಿ ಎಂಬ ಗೇಮ್ ಶೋನಲ್ಲಿ ದೂರದರ್ಶನ ನಿರೂಪಕರಾಗಿ ಪಾದಾರ್ಪಣೆ ಮಾಡಿ ಜನ ಮನ ಗೆದ್ದಿದ್ದಾರೆ. ಅವರ ಭಾಷಾ ಶೈಲಿ, ನಿರೂಪಣಾ ಕೌಶಲ್ಯ,ಒಬ್ಬ ನಟನಾಗಿ ಅಭಿನಯದ ಬಗ್ಗೆ ಇರುವ ಆಸಕ್ತಿ ಮತ್ತು ಗೌರವ ಸಮಾಜಕ್ಕೆ ಮಾದರಿ.
ಸಾವಿರಾರು ಅನಾಥ ಮಕ್ಕಳಿಗೆ ನೆರವಾಗಿ, ದಾನ ಧರ್ಮದ ಮೂಲಕ ಹೆಸರಾಗಿ, ನೇತ್ರದಾನಕ್ಕೆ ಪ್ರೇರಣೆಯಾಗಿದ್ದ ಪುನೀತ್ ಹೆಸರಲ್ಲಿ ಇಂದಿಗೂ ಅವರ ಅಭಿಮಾನಿಗಳು ಸೇವೆ ಮಾಡುತ್ತಿದ್ದಾರೆ.ಪ್ರೀತಿಯ ಪರಮಾತ್ಮನನ್ನು ನೆನೆಯದ ದಿನಗಳೇ ಇಲ್ಲ. ಜೊತೆಗಿರದ ಜೀವ ಎಂದೆಂದೂ ಜೀವಂತ. ಅವರು ಮಾಡಿದ ಕೆಲಸಗಳೇ ಇಂದು ಜನರಿಗೆ ಸ್ಫೂರ್ತಿ. ಪುನೀತನಿಲ್ಲದ ದಿನಗಳು ನೆನೆಯಲು ಆಗದೇ ಇದ್ದರೂ, ಸರಳ ವ್ಯಕ್ತಿತ್ವದ ಕಣ್ಮಣಿ ಕಾಣೆಯಾದ ಈ ದಿನ ಎಲ್ಲರ ಕಣ್ಣಂಚಿನಲಿ ನಮಗೆ ಅರಿವಿಲ್ಲದೇ ಕಣ್ಣೀರು ಜಾರುತಲಿದೆ.