ದೇವತಾ ಮನುಷ್ಯ ರತನ್ ಟಾಟಾ ಇನ್ನಿಲ್ಲ!
– ದುಡಿದ ಹಣವನ್ನು ಸಮಾಜಕ್ಕಾಗಿ ದಾನ ಮಾಡಿದ್ದ ಉದ್ಯಮಿ
– ಲಕ್ಷ ಲಕ್ಷ ಕುಟುಂಬಗಳಿಗೆ ಅನ್ನ ನೀಡಿದ ಸಿಂಪಲ್ ವ್ಯಕ್ತಿ
– ವಯೋ ಸಹಜ ಅನಾರೋಗ್ಯದಿಂದ ಸಾವು: ದೇಶದ ಕಣ್ಣೀರು
NAMMUR EXPRRSS NEWS
ದೇಶದ ಮುಂಚೂಣಿ ಉದ್ಯಮಿ, ಮಾನವೀಯತೆಯ ಇನ್ನೊಂದು ಮುಖವಾಗಿದ್ದ ರತನ್ ಟಾಟಾ ಮುಂಬೈನಲ್ಲಿ 86 ನೇ ವಯಸ್ಸಿನಲ್ಲಿ ಬುಧವಾರ ರಾತ್ರಿ ನಿಧನರಾಗಿದ್ದಾರೆ. ಇಡೀ ದೇಶ ಅವರ ಸಾವಿಗೆ ಕಂಬನಿ ಮಿಡಿದಿದೆ.
ಟಾಟಾ ಅವರಿಗೆ ಭಾರತ ಸರ್ಕಾರವು 2008ರಲ್ಲಿ ದೇಶದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣವನ್ನು ನೀಡಿ ಗೌರವಿಸಿತ್ತು. ಕೈಗಾರಿಕೋದ್ಯಮಿ ರತನ್ ಟಾಟಾ ವಿಧಿವಶರಾದ ಸುದ್ದಿ ಕೇಳಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿ ಎಲ್ಲಾ ನಾಯಕರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅವಿವಾಹಿತರಾಗಿದ್ದ ಟಾಟಾ ಸಮೂಹ ಸಂಸ್ಥೆಯ ಮುಖ್ಯಸ್ಥ ರತನ್ ಟಾಟಾ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡ ಹಿನ್ನೆಲೆಯಲ್ಲಿ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಬುಧವಾರ ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದ್ದವು. 28 ಡಿಸೆಂಬರ್ 1937ರಂದು ಜನಿಸಿದ್ದ ರತನ್ ಶಿಕ್ಷಣ, ಆರೋಗ್ಯ,ಸಮಾಜ ಕಲ್ಯಾಣಕ್ಕೆ ಅಪಾರ ಕೊಡುಗೆ ನೀಡಿದ್ದರು.
ಸ್ವತಂತ್ರ ಭಾರತಕ್ಕೆ ರತನ್ ಟಾಟಾ ಕೊಡುಗೆ ಅಪಾರ
ಸ್ವತಂತ್ರ ಭಾರತಕ್ಕೆ, ರತನ್ ಟಾಟಾ ಅವರ ಕೊಡುಗೆಯು ತುಂಬಾ ದೊಡ್ಡದಾಗಿದೆ. ರತನ್ ಟಾಟಾ ಭಾರತದಲ್ಲಿ ಕೇವಲ ಉದ್ಯಮ ಕಟ್ಟಲಿಲ್ಲ, ಅವರು ಲಕ್ಷ ಲಕ್ಷ ಮನೆಗಳಲ್ಲಿ ದೀಪ ಬೆಳಗಿದರು. ಕೇವಲ ಲಾಭಕ್ಕಾಗಿ ಎಂದಿಗೂ ಕೆಲಸ ಮಾಡದ, ಸ್ವಾರ್ಥ ತೋರಿಸದೆ ಸದಾ ಸಮಾಜಮುಖಿ ಆಗಿದ್ದ ರತನ್ ಟಾಟಾ ಅವರು ಕೊಡುಗೈ ದಾನಿ.
ದೇಶದ ಎಲ್ಲಾ ಉದ್ಯಮದಲ್ಲೂ ಸೈ
ರತನ್ ಟಾಟಾ ಅವರ ತಾತ ಕೂಡ ಭಾರತದ ದೊಡ್ಡ ಉದ್ಯಮಿ, ಹೀಗೆ ರತನ್ ಟಾಟಾ ಅವರ ಇಡೀ ಕುಟುಂಬ ಭಾರತದ ಉದ್ಯಮ ವಲಯದ ಬೆಳವಣಿಗೆಗಾಗಿ ದೊಡ್ಡ ಕೊಡುಗೆ ನೀಡುತ್ತಾ ಬಂದಿದೆ. ಭಾರತದಲ್ಲಿ ಉಪ್ಪು ಮಾರಾಟದಿಂದ ಹಿಡಿದು, ಕೋಟಿ ಕೋಟಿ ರೂಪಾಯಿ ಬೆಲೆ ಬಾಳುವ ಕಾರ್ಗಳ ತನಕ ವ್ಯಾಪಾರ ಮಾಡಿ ಲಾಭ ಪಡೆದು ಸೈ ಎನಿಸಿಕೊಂಡ ಒಂದೇ ಒಂದು ದೊಡ್ಡ ಸಂಸ್ಥೆ ಏನಾದರೂ ಇದ್ದರೆ ಅದು ಟಾಟಾ ಸಂಸ್ಥೆ ಮಾತ್ರ. ರತನ್ ಟಾಟಾ ಆ ರೀತಿಯಾಗಿ ಟಾಟಾ ಸಂಸ್ಥೆಯನ್ನು, ಕಟ್ಟಿ ಬೆಳೆಸಿ ದೊಡ್ಡ ಹಂತಕ್ಕೂ ತಂದು ನಿಲ್ಲಿಸಿದ್ದರು.
ಕೊಡುಗೈ ದಾನಿ ರತನ್ ಟಾಟಾ
ರತನ್ ಟಾಟಾ ಬಳಿ ಎಲ್ಲವೂ ಇತ್ತು, ಅದರ ಜೊತೆಗೆ ರತನ್ ಟಾಟಾ ಅವರ ಬಳಿ ಇದ್ದ ಒಳ್ಳೆಯ ಮನಸ್ಸು ಸರಿಯಾದ ದಾರಿಯಲ್ಲಿ ನಡೆಸಿತ್ತು. ರತನ್ ಟಾಟಾ ಮನಸ್ಸು ಮಾಡಿದ್ದರೆ ಅವರ ಬಳಿ ಈ ಹೊತ್ತಿಗೆ ಲಕ್ಷಾಂತರ ಕೋಟಿ ರೂಪಾಯಿ ಆಸ್ತಿ ಇರುತ್ತಿತ್ತು. ಆದರೆ ಅವರು ದಾನ & ಧರ್ಮ ಮಾಡಿ ಸಮಾಜದ ಒಳಿತಿಗಾಗಿ ಸಾಕಷ್ಟು ಶ್ರಮ ವಹಿಸಿದ್ದರು. ಈ ಎಲ್ಲಾ ಕಾರಣ ರತನ್ ಟಾಟಾ ಅವರು ಮಾಡಿರುವ ಸಮಾಜಮುಖಿ ಕೆಲಸಗಳು ಶತಕೋಟಿ ಭಾರತೀಯರು ಹಾಗೂ ಇಡೀ ಜಗತ್ತಿನ ಮನಸ್ಸಿನಲ್ಲಿ ಉಳಿಯುತ್ತದೆ.