ಟಾಪ್ ನ್ಯೂಸ್ ಶಿವಮೊಗ್ಗ
ಶಿವಮೊಗ್ಗದ ಮಾರುಕಟ್ಟೆಗೂ ಚೀನಾ ಬೆಳ್ಳುಳ್ಳಿ..!
– ಆರೋಗ್ಯಕ್ಕೆ ಹಾನಿಕರವಾಗಿರುವ ಬೆಳ್ಳುಳ್ಳಿ ನಿಷೇಧ ಮಾಡಿದ ಸರ್ಕಾರ
– ತೀರ್ಥಹಳ್ಳಿ, ಹೊಸನಗರದಲ್ಲಿ ಇಸ್ಪೀಟ್ ಆಡುತ್ತಿದ್ದವರು ಅರೆಸ್ಟ್!
– ಸಾಗರ: 3 ಕಳ್ಳತನ ಪ್ರಕರಣ ದಾಖಲು ಇಬ್ಬರು ಸೆರೆ
– ಹೊಸ ನಗರ: ಬೀಟೆ ಮರದ ದಿಮ್ಮಿಗಳ ಕಳ್ಳ ಸಾಗಾಣಿಕೆ: ಅಮಾನತು
NAMMUR EXPRESS NEWS
ಶಿವಮೊಗ್ಗ: ಭಾರತದಲ್ಲಿ ಬಂದ್ ಆಗಿರುವ ಚೀನಾ ಬೆಳ್ಳುಳ್ಳಿ ಶಿವಮೊಗ್ಗದ ಮಾರುಕಟ್ಟೆಯಲ್ಲಿ ಲಭ್ಯವಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಚೀನಾದಿಂದ ಆಮದು ಆಗುತ್ತಿದ್ದ ಬೆಳ್ಳುಳ್ಳಿಯನ್ನು ನಿಷೇಧ ಮಾಡಿದೆ. ಆದರೂ ಬಂದಿದ್ದು ಹೇಗೆ ಎಂಬ ಅನುಮಾನ ಮೂಡಿದೆ.
ಕೆಲವು ವ್ಯಾಪಾರಿಗಳು ಹಣದ ಆಸೆಗೆ ಕಡಿಮೆ ಬೆಲೆಗೆ ಬೆಳ್ಳುಳ್ಳಿ ಸಿಗುತ್ತದೆ ಎನ್ನುವ ಕಾರಣಕ್ಕೆ ಚೈನಾದ ಈ ಕಡಿಮೆ ಬೆಳೆಯ ಬೆಳ್ಳುಳ್ಳಿಯನ್ನು ಅನ್ಯ ಮಾರ್ಗದಿಂದ ತರಿಸಿಕೊಳ್ಳುತ್ತಿದ್ದಾರೆ. ಅನ್ಯ ಮಾರ್ಗದಿಂದ ಬಂದ ಬೆಳ್ಳುಳ್ಳಿಯನ್ನು ಭಾರತದ ವಿವಿಧ ರಾಜ್ಯಗಳಲ್ಲಿ ಮಾರುಕಟ್ಟೆಗೆ ಪ್ರವೇಶವಾದ ನಂತರ ಆಹಾರ ಸುರಕ್ಷತಾ ಅಧಿಕಾರಿಗಳು ಅಂತಹ ಬೆಳ್ಳುಳ್ಳಿಯನ್ನು ವಶಪಡಿಸಿಕೊಂಡು ನಾಶಪಡಿಸಿದ್ದಾರೆ. ಆತಂಕಕಾರಿ ಬೆಳವಣಿಗೆಯಲ್ಲಿ ಚೈನಾದ ಬೆಳ್ಳುಳ್ಳಿ ಶಿವಮೊಗ್ಗದ ಮಾರುಕಟ್ಟೆಗೆ ಬಂದು ತಲುಪಿದೆ. ಶಿವಮೊಗ್ಗದ ಮಾರುಕಟ್ಟೆಯಲ್ಲಿ ಹಲವು ಕಡೆ ಚೈನಾದ ಬೆಳ್ಳುಳ್ಳಿ ಲಭ್ಯವಾಗುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
– ತೀರ್ಥಹಳ್ಳಿ ಮತ್ತು ಹೊಸನಗರದಲ್ಲಿ ಇಸ್ಪೀಟ್ ಆಡುತ್ತಿದ್ದವರ ಬಂಧನ
ಹೊಸನಗರ/ ತೀರ್ಥಹಳ್ಳಿಭಾಗದಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಅಡ್ಡೆಯ ಮೇಲೆ ಪೊಲೀಸ್ ರೈಡ್ ನಡೆದಿದೆ. ತೀರ್ಥಹಳ್ಳಿಯಲ್ಲಿ 7 ಜನರ ವಿರುದ್ಧ ಸೆ.27ರಂದು ರಾತ್ರಿ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಬಾಗಿಲು ಗ್ರಾಮದ ಸರ್ಕಾರಿ ಪ್ಲಾಂಟೇಶನ್ ನಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿದ್ದಾರೆ. 07 ಜನ ಆರೋಪಿತರನ್ನು ಬಂಧಿಸಿ ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 13,000/- ರೂ ನಗದು ಹಣ ಮತ್ತು ಇಸ್ಪೀಟ್ ಎಲೆಗಳನ್ನು ಅಮಾನತುಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ದ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೊಸನಗರದ ಮಾರುತಿಪುರದಲ್ಲಿ ಜೂಜಾಟ
ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರುತಿಪುರ ಗ್ರಾಮದ ಹಳೆ ಬಾಣಿಗ ರಸ್ತೆಯ ಹತ್ತಿರ ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜೂಜಾಟ ಆಡುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆದಿದೆ. ಇಸ್ಪೀಟ್ ಜೂಜಾಟ ಆಡುತ್ತಿದ್ದ 11 ಜನ ಆರೋಪಿತರನ್ನು ದಸ್ತಗಿರಿ ಮಾಡಿ ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 17,640/- ರೂ ನಗದು ಹಣ ಮತ್ತು ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿತರ ವಿರುದ್ದ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಾಗರ ಗ್ರಾಮಾಂತರದಲ್ಲಿ ಒಟ್ಟು 3 ಕಳ್ಳತನ: ಇಬ್ಬರು ಸೆರೆ
ಸಾಗರ: ಮನೆಯ ಪಕ್ಕದ ಶೆಡ್ ನಲ್ಲಿ ಇಟ್ಟಿದ್ದ ಮರ ಕತ್ತರಿಸುವ ಯಂತ್ರ, ತಾಮ್ರದ ಹಂಡೆಯನ್ನು ಕಳ್ಳತನ ಮಾಡಿಕೊಂಡು ಹೋದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಸಾಗರ ತಾಲೂಕು ಬೇದೂರು ಗ್ರಾಮದ ವಾಸಿ ತ್ರಿಭುವನ್ ಎನ್ನುವವರ ಮನೆಯಲ್ಲಿ ಈ ಕಳ್ಳತನ ಸಂಭವಿಸಿತ್ತು. ನೆಹರುನಗರದ ನಾಗರಾಜ ಅಲಿಯಾಸ್ ಕರಡಿ (24) ಮತ್ತು ಎಸ್ ಎನ್ ನಗರದ ರಾಘವೇಂದ್ರ ಅಲಿಯಾಸ್ ರೊಡ್ಡಿ (22) ವರ್ಷ, ಎಸ್. ಎನ್ ನಗರ ಅವರನ್ನು ಬಂಧಿಸಲಾಗಿದೆ. ಇಷ್ಟೇ ಅಲ್ಲದೆ ಬಂಧಿಯರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ವರದಿಯಾದ 2 ಅಡಿಕೆ ಕಳವು ಪ್ರಕರಣಗಳು ಸೇರಿ ಒಟ್ಟು3 ಪ್ರಕರಣಗಳಿಗೆ ಬೇಕಾದವರಾಗಿದ್ದರು. ಅಂದಾಜು ಮೌಲ್ಯ 18 ಸಾವಿರ ರೂ.ನ ಮರ ಕತ್ತರಿಸುವ ಯಂತ್ರ, 1.05 ಲಕ್ಷ ರೂ. ನ ಚಾಲಿ ಅಡಿಕೆ, 1ಲಕ್ಷ ರೂ ಮೌಲ್ಯದ ಆಟೋ ರಿಕ್ಷಾ, 10 ಸಾವಿರ ರೂ. ಮೌಲ್ಯದ ದ್ವಿ ಚಕ್ರ ವಾಹನ ಸೇರಿ ಒಟ್ಟು2.33 ಲಕ್ಷರೂ. ಗಳ ಮಾಲನ್ನು ಅಮಾನತು ಪಡಿಸಿಕೊಳ್ಳಲಾಗಿದೆ. ತನಿಖಾ ತಂಡವು ಆರೋಪಿಗಳನ್ನು ಬಂಧಿಸಿದೆ.
ಬೀಟೆ ಮರದ ದಿಮ್ಮಿಗಳ ಕಳ್ಳ ಸಾಗಾಣಿಕೆ ಆರೋಪದಡಿಯಲ್ಲಿ ಅರಣ್ಯಾಧಿಕಾರಿ ಅಮಾನತು
ಹೊಸನಗರ : ಬೀಟೆ ಮರದ ದಿಮ್ಮಿಗಳ ಕಳ್ಳ ಸಾಗಾಣಿಕೆ ಆರೋಪದಡಿಯಲ್ಲಿ ಉಪವಲಯ ಅರಣ್ಯಾಧಿಕಾರಿ ಆರ್. ಯುವರಾಜ್ರನ್ನು ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹೊಸನಗರ ತಾಲೂಕಿನ ಎಂ. ಗುಡೇಕೊಪ್ಪ ಗ್ರಾಮ ಅರಣ್ಯ ಸಂರಕ್ಷಣಾಧಿಕಾರಿ ಅರಳಿಕೊಪ್ಪ ಗ್ರಾಮದ ಸರ್ವೆ ನಂಬರ್ 57ರಲ್ಲಿ ಬಿದ್ದಿದ್ದ ಬೀಟೆ ಮರವನ್ನು ಸರ್ಕಾರಿ ನಾಟ ಸಂಗ್ರಹಾಲಯಕ್ಕೆ ಸಾಗಿಸದ ಅಕ್ರಮವಾಗಿ ಬೇರೆ ಕಡೆಗೆ ಸಾಗಿಸಿದ ಆರೋಪ ಕೇಳಿಬಂದಿತ್ತು. ಈ ಸಂಬಂಧ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅರಣ್ಯ ಸಚಿವರ ಮೌಖಿಕ ನಿರ್ದೇಶನದ ಮೇರೆಗೆ ವಿಚಾರಣೆ ನಡೆಸಿದ್ದರು. ಈ ಕುರಿತು ಸಾಗರದ ಉಪ ಸಂರಕ್ಷಣಾಧಿಕಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡಿತ್ತು. ಸ್ಥಳ ಪರಿಶೀಲನೆ ನಡೆಸಿದ್ದ ವಿಚಾರಣಾ ತಂಡದ ಎದುರು ಆರೋಪಿತ ಉಪ ವಲಯ ಅರಣ್ಯಾಧಿಕಾರಿಯು ತಪ್ರೊಪ್ಪಿಕೊಂಡಿದ್ದಾರೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸಲ್ಲಿಸಿದ ವರದಿಯಲ್ಲಿ ಹೇಳಿದ್ದಾರೆ.