ಜಾನುವಾರುಗಳಿಗೆ ಕಂದುರೋಗದ ಭೀತಿ!
– ಆತಂಕದಲ್ಲಿರುವ ರೈತರಿಗೆ ಸರ್ಕಾರದ ಸಹಾಯ
– ಸೆ.11 ರಿಂದ 25 ರವರೆಗೆ ಉಚಿತವಾಗಿ ಲಸಿಕೆ
NAMMUR EXPRESS NEWS
ಶಿವಮೊಗ್ಗ: ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸೆ.11 ರಿಂದ 25 ರವರೆಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. ಲಸಿಕಾದಾರರು ರೈತರ/ಪಶು ಪಾಲಕರ ಮನೆಬಾಗಿಲಲ್ಲೇ ಕರುಗಳಿಗೆ ಕಿವಿಯೋಲೆ ಅಳವಡಿಸಿ ನೊಂದಣಿ ಮಾಡಿಕೊಂಡು ಲಸಿಕೆ ಹಾಕುತ್ತಾರೆ. ಎಲ್ಲಾ ರೈತರು ಮತ್ತು ಪಶುಪಾಲಕರು ತಮ್ಮಲ್ಲಿರುವ ಅರ್ಹ ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕ ಡಾ.ಶಿವಯೋಗಿ ಬಿ.ಯಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಂದು ರೋಗವು ಪ್ರಾಣಿಜನ್ಯವಾಗಿದ್ದು, ಈ ರೋಗದಿಂದ ಗರ್ಭಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಹಾಕಬಹುದು. ಅವುಗಳ ಗರ್ಭಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ರೋಗವು ಮನುಷ್ಯರಿಗೂ ಹರಡಬಹುದು. ಈ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಅರ್ಹ ಕರುಗಳಿಗೆ ಲಸಿಕೆ ಹಾಕಿಸಿ, ಸಂಭವಿಸಬಹುದಾದ ಆರ್ಥಿಕ ನಷ್ಟ ತಪ್ಪಿಸಿ ನಿಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲೂಕುವಾರು/ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ / ಸಿಬ್ಬಂದಿಯನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸುವುದು.