ಶಿವಮೊಗ್ಗ ಲೋಕಸಭೆಗೆ ಕುಮಾರ್ ಬಂಗಾರಪ್ಪ..?
– ಮಧು ಬಂಗಾರಪ್ಪ ಒಪ್ಪಿಸ್ತಾರಾ ಡಿಕೆಶಿ?
– ಶಿವಮೊಗ್ಗಕ್ಕೆ ಬರ್ತಾರಾ ಅಚ್ಚರಿ ಕೈ ಅಭ್ಯರ್ಥಿ!
– ಶಿವಮೊಗ್ಗ ಕಾಂಗ್ರೆಸ್ ನಾಯಕರು ಹೇಳೋದು ಏನು?
NAMMUR EXPRESS NEWS
ಶಿವಮೊಗ್ಗ: ಶಿವಮೊಗ್ಗ ಲೋಕಸಭೆಗೆ ಅಚ್ಚರಿ ಅಭ್ಯರ್ಥಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡುತ್ತಿದೆ. ಮಾಜಿ ಸಚಿವ, ಸೊರಬದ ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಅವರನ್ನು ಕಣಕ್ಕೆ ಇಳಿಸಲು ಖುದ್ದು ಡಿಸಿಎಂ ಹಾಗೂ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ತಂತ್ರಗಾರಿಕೆಗೆ ಮುಂದಾಗಿದ್ದಾರೆ.
ಮಧು ಬಂಗಾರಪ್ಪ ಒಪ್ಪಿಸ್ತಾರಾ ಡಿಕೆಶಿ?
ಕರ್ನಾಟಕ ಕಂಡ ಅಪ್ರತಿಮ ನಾಯಕ ಸಾರೆಕೊಪ್ಪ ಬಂಗಾರಪ್ಪ ಕುಟುಂಬ ಈ ಮೂಲಕ ಒಗ್ಗೂಡಿಸುವ ಪ್ರಯತ್ನದಲ್ಲಿ ಡಿಕೆಶಿ ಇದ್ದಾರೆ. ಅದರಲ್ಲೂ ತಮ್ಮ ರಾಜಕೀಯ ಗುರುಗಳಾದ ಮಾಜಿ ಮುಖ್ಯಮಂತ್ರಿ ಸಾರೇಕೊಪ್ಪ ಬಂಗಾರಪ್ಪ ಅವರ ಕುಟುಂಬವನ್ನುಒಂದುಗೂಡಿಸುವ ಜತೆಗೆ ಮಲೆನಾಡಲ್ಲಿ ಕಾಂಗ್ರೆಸ್ ಆಪರೇಷನ್ ಗಟ್ಟಿ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಅದರ ಮೊದಲ ಪ್ರಯತ್ನವಾಗಿ ಕುಮಾರ್ ಬಂಗಾರಪ್ಪ ಅವರನ್ನು ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಶಿವಮೊಗ್ಗ ಕಾಂಗ್ರೆಸ್ ಇಂದಲೇ ಕುಮಾರ್ ಹೆಸರು ಪ್ರಸ್ತಾಪ
ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಕುಮಾರ್ ಬಂಗಾರಪ್ಪ ಅವರನ್ನು ಕಾಂಗ್ರೆಸ್ಗೆ ಕರೆ ತರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಅವರೇ ಉತ್ತಮ ಅಭ್ಯರ್ಥಿ ಎಂದು ಹೇಳುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸುವಂತೆ ಸಹೋದರ, ಸಚಿವ ಮಧು ಬಂಗಾರಪ್ಪ ಪ್ರಯತ್ನ ಮಾಡುತ್ತಿದ್ದಾರೆ. ಈ ಸಂಬಂಧ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದಿದ್ದ ಶಿವಮೊಗ್ಗ ಜನಪ್ರತಿನಿಗಳ ಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಹಲವರು ಗೀತಾ ಶಿವರಾಜ್ ಕುಮಾರ್ ಅವರನ್ನು ಕಣಕ್ಕಿಳಿಸಿದರೆ ಲಾಭವಾಗುತ್ತದೆ ಎಂದು ಹೇಳಿದ್ದರು. ಆದರೆ, ಈ ಮಧ್ಯೆ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿದರೆ ಹೆಚ್ಚಿನ ಲಾಭ ಆಗುತ್ತದೆ ಎಂಬ ವಾದವನ್ನು ಶಿವಮೊಗ್ಗ ಕಾಂಗ್ರೆಸ್ ಮುಖಂಡರು ಮುಂದಿಟ್ಟಿದ್ದಾರೆ. ಶಿವಮೊಗ್ಗದಿಂದ ಬೇಡಿಕೆ ಹೆಚ್ಚಿದ ಕಾರಣಕ್ಕೆ ಕುಮಾರ್ ಬಂಗಾರಪ್ಪ ಅವರಿಗೆ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಡಿ.ಕೆ. ಶಿವಕುಮಾರ್ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಮಧು ಬಂಗಾರಪ್ಪ ಒಪ್ಪಿದ್ದಾರಾ?
ರಾಜಕೀಯದಲ್ಲಿ ಕೌಟುಂಬಿಕ ವಿಚಾರ ಅಡ್ಡ ಬರಬಾರದು. ಅದು ಪಕ್ಷದ ಸಂಘಟನೆಗೂ ಅಡ್ಡಿಯಾಗಬಾರದು. ನಮಗೆ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರ ಗೆಲ್ಲಬೇಕು. ಹಾಗಾಗಿ ಕುಮಾರ್ ಬರಲಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂಬ ಸಲಹೆಯನ್ನು ಡಿಕೆಶಿ ಮಧುಬಂಗಾರಪ್ಪರಿಗೆ ನೀಡಿದ್ದಾರೆ ಎನ್ನಲಾಗಿದೆ.
ಕುಮಾರ್ ಬಂಗಾರಪ್ಪ ಪ್ಲಸ್ ಯಾಕೆ?
ಹಾಲಿ ಸಂಸದ, ಯಡಿಯೂರಪ್ಪ ಪುತ್ರ ರಾಘವೇಂದ್ರ ಈಗಾಗಲೇ ಎರಡು ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಅವರ ಎದುರು ಪ್ರಬಲ ಅಭ್ಯರ್ಥಿ ಬೇಕು. ಹಾಗಾಗಿ ಯುವ ನಾಯಕ, ಸಚಿವ, ಶಾಸಕರಾಗಿ ಅನುಭವ ಇರುವ ಕುಮಾರ್ ಸೂಕ್ತ ಎನ್ನಲಾಗುತ್ತಿದೆ. ಇನ್ನು ಈಡಿಗ ಸಮುದಾಯದ ನಾಯಕರಾಗಿರುವ ಕುಮಾರ್ ಬಂಗಾರಪ್ಪ ಅವರಿಗೆ ಇಡೀ ಜಿಲ್ಲೆಯ ಈಡಿಗರು ಕೈ ಹಿಡಿದರೆ ನೇರಾ ನೇರ ಸ್ಪರ್ಧೆ ಆಗಲಿದೆ ಎಂಬ ಲೆಕ್ಕಾಚಾರ. ಹೀಗೆಲ್ಲ ಪ್ಲಸ್ ಪಾಯಿಂಟ್ ಇವೆ. ಆದರೆ ಕುಮಾರ್ ಬಂಗಾರಪ್ಪ ಎಲ್ಲಿಯೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ.