ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಭೂ ಮಾಫಿಯಾ!
– ಒತ್ತುವರಿ ಅರಣ್ಯ ಭೂಮಿಯನ್ನೇ ಖಾಸಗಿಯವರಿಗೆ ಮಾರಾಟ!?
– ಅನುಭವದ ಜಮೀನನ್ನು ಮಾರಾಟ ಮಾಡಿರುವುದು ಪತ್ತೆ
– ಹೊಸನಗರ ವಲಯದಲ್ಲಿ ಅನೇಕ ಕಡೆ ಗೋಲ್ಮಾಲ್
NAMMUR EXPRESS NEWS
ಶಿವಮೊಗ್ಗ/ಚಿಕ್ಕಮಗಳೂರು: ಮಲೆನಾಡ ಭಾಗದಲ್ಲಿ ಪಶ್ಚಿಮ ಘಟ್ಟ ವಲಯ ವ್ಯಾಪ್ತಿಯ ನೈಸರ್ಗಿಕ ಸಂಪತ್ತಿನ ರಕ್ಷಣೆಗೆ ಸರಕಾರ ಮತ್ತು ಅರಣ್ಯ ಇಲಾಖೆ ದಿಟ್ಟಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಕೆಲವು ಅರಣ್ಯ ಭೂಮಿ ಒತ್ತುವರಿದಾರರು ಸದ್ದಿಲ್ಲದೇ ತಮ್ಮ ಅನುಭವದ ಜಮೀನನ್ನು ಮಾರಾಟ ಮಾಡಿರುವುದು ಪತ್ತೆಯಾಗುತ್ತಿವೆ.
ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಇಂತಹ ಅಕ್ರಮಗಳು ನಡೆದಿರುವ ಬಗ್ಗೆ ವರದಿಯಾಗಿದೆ.
ಹೊಸನಗರ, ತೀರ್ಥಹಳ್ಳಿ, ಅರಸಾಳು, ಹೊಸನಗರ ವಲಯ ಹಾಗೂ ಮುಗುಡ್ತಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಕೆಲವು ಒತ್ತುವರಿದಾರರಿಂದ ಅರಣ್ಯ ಭೂಮಿ ಮಾರಾಟವಾದ ಬಗ್ಗೆ ತಿಳಿದು ಬಂದಿದೆ. ಸಾಗುವಳಿದಾರರ ಒಟ್ಟು ಒತ್ತುವರಿ ಭೂಮಿಯಲ್ಲಿಮೂರು ಎಕರೆಗಿಂತ ಹೆಚ್ಚುವರಿ ಜಾಗವನ್ನು ತೆರವುಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಅಧಿಕಾರಿಗಳು ರೈತರಿಂದ ಮೂಲ ದಾಖಲಾತಿ ಪರಿಶೀಲಿಸುವಾಗ, ಖಾಸಗಿ ವ್ಯಕ್ತಿಗಳಿಗೆ ಅರಣ್ಯ ಭೂಮಿ ಮಾರಾಟವಾಗಿರುವ ಸಂಗತಿ ಬೆಳಕಿಗೆ ಬಂದಿವೆ.
ರೈತರು ತಮ್ಮ ಖಾತೆ ಜಮೀನಿನ ತಲೆಕಟ್ಟಿನ ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿ ಬೇಲಿ ನಿರ್ಮಿಸಿಕೊಂಡು ಬ್ರೋಕರ್ಗಳ ಸಹಾಯದಿಂದ ಖರೀದಿದಾರರನ್ನು ಸಂಪರ್ಕಿಸಿ ಎಕರೆ ಲೆಕ್ಕದಲ್ಲಿ ಬೆಲೆ ನಿಗದಿಗೊಳಿಸಿ ಅಗತ್ಯಕ್ಕಿಂತ ಹೆಚ್ಚಿನ ಜಮೀನನ್ನು ಛಾಪ ಕಾಗದದಲ್ಲಿ ಶುದ್ಧ ಕ್ರಯಪತ್ರದೊಂದಿಗೆ ಒಪ್ಪಂದದ ಕರಾರು ಬರೆಯಿಸಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಅರಣ್ಯ ಭೂಮಿಯ ವ್ಯವಹಾರ ಹಲವೆಡೆಗಳಲ್ಲಿ ನಡೆಯುತ್ತಿದ್ದರೂ ಬಹುತೇಕ ಕಡೆಗಳಲ್ಲಿ ವ್ಯವಹಾರ ಮಾಹಿತಿ ಗೌಪ್ಯವಾಗಿಡಲಾಗಿದೆ. ಖರೀದಿದಾರರು ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು ಅಡಕೆ, ತೆಂಗು, ಬಾಳೆ, ಶುಂಠಿ ಬೆಳೆಗಳನ್ನು ಬೆಳೆಯುತ್ತ ಅರಣ್ಯ ಭೂಮಿ ಸಾಗುವಳಿಯ ಸಕ್ರಮಕ್ಕೆ ಅಧಿಕಾರಿಗಳ ಮುಂದೆ ಹಕ್ಕುಪ್ರತಿಪಾದನೆಗೆ ಯತ್ನಿಸುತ್ತಿರುವುದು ಕಂಡು ಬಂದಿದೆ.
– ಭೂಮಿ ಬೇಡಿಕೆ ಹೆಚ್ಚಿಸಿದ ಸರಕಾರದ ನಿಯಮ
2020 ರಲ್ಲಿ ರಾಜ್ಯ ಸರಕಾರ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ಮಾಡಿ ಕೃಷಿ ಜಮೀನನ್ನು ಕೃಷಿಯೇತರರು ಖರೀದಿಸಬಹುದು ಎಂಬ ನಿಯಮ ಜಾರಿಯಾದ ನಂತರ ಸಹಜವಾಗಿಯೇ ವ್ಯಾಪಾರಸ್ಥರು, ಉದ್ದಿಮೆದಾರರು, ಬಂಡವಾಳಶಾಹಿಗಳು ಭೂಮಿ ಖರೀದಿಗೆ ಮುಂದಾಗಿದ್ದು, ಪರಿಣಾಮ ಭೂಮಿಯ ಬೆಲೆ ದುಪ್ಪಟ್ಟಾಯಿತು. ರೈತರ ಖಾತೆಯ ಹೊಲ, ಗದ್ದೆಗಳು ಎಕರೆಗೆ 30 ಲಕ್ಷಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದ್ದರೆ, ಒಂದು ಎಕರೆ ಒತ್ತುವರಿ ಅರಣ್ಯ ಭೂಮಿಯ ಬೆಲೆ 7 ರಿಂದ 10 ಲಕ್ಷ ರೂ.ಗಳ ವರೆಗೆ ಮಾರಾಟವಾಗುತ್ತಿವೆ ಎನ್ನಲಾಗುತ್ತಿದೆ. ಕಡಿಮೆ ಬಂಡವಾಳದಲ್ಲಿಹೆಚ್ಚಿನ ಜಾಗ ಪಡೆಯುವ ಆಸಕ್ತಿಯ ಗ್ರಾಹಕರು ಅರಣ್ಯ ಭೂಮಿ ಖರೀದಿಸಿದ್ದಾರೆ. ಕೆಲವು ಒತ್ತುವರಿ ತೆರವಿನ ಆತಂಕದಲ್ಲಿರುವ ರೈತರು ಹೆಚ್ಚುವರಿ ಜಾಗ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಸಂಕಷ್ಟಕ್ಕೆಡೆ ಮಾಡುತ್ತಿರುವ ವ್ಯವಹಾರ ಅರಣ್ಯ ಭೂಮಿ ಅಕ್ರಮ ಮಾರಾಟ ಮತ್ತು ಖರೀದಿ ಅಪರಾಧವಾಗಿದ್ದರೂ ಕೆಲ ಪ್ರಭಾವಿಗಳು ತಪ್ಪುಮಾಹಿತಿ ನೀಡಿ ಮಂಜೂರು ಮಾಡಿಸುವ ಭರವಸೆ ನೀಡುವ ಹಿನ್ನೆಲೆಯಲ್ಲಿ ಜೀವನದಲ್ಲಿ ಸ್ವಂತ ಮನೆ, ಜಾಗ ಹೊಂದಬೇಕೆಂಬ ಕೆಲವು ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು, ಕೂಡಿಟ್ಟ ಬಂಡವಾಳವನ್ನು ಖರೀದಿಗೆ ತೊಡಗಿಸಿದರೆ, ಇನ್ನೂ ಕೆಲವು ನಗರ ಪ್ರದೇಶದ ಸಿರಿವಂತರು, ನೌಕರರು, ವಲಸಿಗ ಕೇರಳಿಗರು ಅರಣ್ಯಭೂಮಿ ಖರೀದಿಸಿ ಮನೆ ನಿರ್ಮಾಣದೊಂದಿಗೆ ಕೃಷಿ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅರ್ಹರ ಜಮೀನು ಕೂಡ ಮಾರಾಟ?
ಅರಣ್ಯ ಭೂಮಿ ಸಕ್ರಮದ ಅರಣ್ಯ ಹಕ್ಕು ಕಾಯಿದೆ ಕೇಂದ್ರ ಸರಕಾರದ ಅಧಿನಿಯಮ 2006 ಮತ್ತು ನಿಯಮಗಳು 2008 ಹಾಗೂ ನಿಯಮಗಳ ತಿದ್ದುಪಡಿ 2012ರ ಪ್ರಕಾರ ಪರಿಶಿಷ್ಟ ಪಂಗಡ ಮತ್ತು ಇತರೆ ಪಾರಂಪರಿಕ ಅರಣ್ಯ ವಾಸಿಗಳು ದಿ.13/12/2005ಕ್ಕೆ ಮುಂಚೆ ಅರಣ್ಯದಲ್ಲಿ ವಾಸ ಅಥವಾ ಜೀವನೋಪಾಯಕ್ಕಾಗಿ ಅರಣ್ಯ ಪ್ರದೇಶಗಳ ಮೇಲೆ ಅವಲಂಬಿತರಾದವರು ಅರಣ್ಯ ಹಕ್ಕುಗಳ ಮಾನ್ಯತೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.
ಸಂಬಂಧಿತ ರೈತರ ಅರ್ಜಿಗಳು ಇಲಾಖೆಗಳ ಪರಿಶೀಲನೆಯಲ್ಲಿವೆ. ಹೀಗಿರುವಾಗ ಜಾಗ ತಮ್ಮದೆಂದು ರುಜುವಾತು ಪಡಿಸುವ ಮೂಲ ದಾಖಲೆಗಳಿಲ್ಲದೆ ಖರೀದಿ ಪತ್ರದೊಂದಿಗೆ ಸ್ವಾಧೀನಾನುಭವದ ಅರಣ್ಯ ಭೂಮಿ ಖರೀದಿದಾರರಿಗೆ ಹಕ್ಕು ಸಿಗುವುದೇ ಎಂಬ ಪ್ರಶ್ನೆ ಸಹಜವಾಗಿದೆ