ಮಲೆನಾಡಲ್ಲಿ ನೋ ನೆಟ್ವರ್ಕ್: ಟವರ್ ನಿರ್ಮಾಣ ಯಾವಾಗ?
– ಸರ್ಕಾರಿ ಕಚೇರಿ, ಗ್ಯಾರಂಟಿ ಯೋಜನೆ ನೋಂದಣಿಗೆ ನೆಟ್ವರ್ಕ್ ಕಂಟಕ!
– ಮೊಬೈಲ್ ನೆಟ್ವರ್ಕ್ ಸಿಗದಕ್ಕೆ ಅಧಿಕಾರಿಗಳಿಗೆ ದಿಗ್ಬಂಧನ
NAMMUR EXPRESS NEWS
ಶಿವಮೊಗ್ಗ: ( Shivamogga ) ಶಿವಮೊಗ್ಗ ಜಿಲ್ಲೆಯ ಅನೇಕ ಭಾಗದಲ್ಲಿ ಇಂದಿಗೂ ನೆಟ್ವರ್ಕ್ ಸಿಗುತ್ತಿಲ್ಲ. ತುರ್ತು ಕೆಲಸ ಮಾಡಲು ಅಥವಾ ಸಂದೇಶ ನೀಡಲು ಕೂಡ ಸಾಧ್ಯ ಆಗುತ್ತಿಲ್ಲ. ಇದರಿಂದ ಜನತೆಗೆ ಭಾರಿ ತೊಂದರೆ ಆಗುತ್ತಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಗ್ರಾಮಾಂತರ ತಾಲೂಕು ಸೇರಿ ಅನೇಕ ಕಡೆ ಮೊಬೈಲ್ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂಬ ಆಕ್ರೋಶ ಹೆಚ್ಚಾಗಿದೆ. ಒಂದು ಕಡೆ ಬಿಎಸ್ಎನ್ ಎಲ್ ಅತ್ಯಂತ ಕಳಪೆ ನೆಟ್ವರ್ಕ್ ನೀಡಿದರೆ ಇನ್ನೊಂದು ಕಡೆ ಖಾಸಗಿ ಮೊಬೈಲ್ ಸೇವಾ ಸಂಸ್ಥೆಗಳು ಕೂಡ ಇತ್ತೀಚಿಗೆ ಉತ್ತಮ ಸೇವೆ ನೀಡುವಲ್ಲಿ ನಿರ್ಲಕ್ಷ್ಯ ಮಾಡುತ್ತಿವೆ ಎಂಬ ದೂರು ಕೇಳಿ ಬಂದಿದೆ.
ಅಧಿಕಾರಿಗಳ ಜತೆ ರಾಘವೇಂದ್ರ ಮಹತ್ವದ ಸಭೆ
ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿರುವ ( BSNL ) ಬಿಎಸ್ಎನ್ಎಲ್ ಟವರ್ಗಳನ್ನು ಸರ್ಕಾರಿ ಜಾಗ ಹಾಗೂ ಗ್ರಾಮಗಳ ಸಮೀಪವೇ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅರಣ್ಯ, ಕಂದಾಯ ಇಲಾಖೆ ಹಾಗೂ ಬಿಎಸ್ಎನ್ಎಲ್ ಅಧಿಕಾರಿಗಳ ಜತೆ ಸಭೆ ನಡೆಸಿದ ಅವರು, ಕೇಂದ್ರದಿಂದ ಜಿಲ್ಲೆಗೆ ಹೊಸದಾಗಿ 261 ಟವರ್ ಮಂಜೂರು ಆಗಿವೆ. ತಕ್ಷಣ ಗುರುತಿಸಿರುವ ಸ್ಥಳಗಳಲ್ಲಿ ಟವರ್ ನಿರ್ಮಿಸುವಂತೆ ಸೂಚಿಸಿದರು. ಕೇಂದ್ರ ಸರ್ಕಾರ ಜಿಲ್ಲೆಗೆ 249 ಹೊಸ ಟವರ್ ನಿರ್ಮಾಣ ಹಾಗೂ 12 ಟವರ್ಗಳನ್ನು ಮೇಲ್ದರ್ಜೆಗೇರಿಸಲು ಅನುಮೋದನೆ ನೀಡಿದೆ. ಈಗಾಗಲೇ 128 ಟವರ್ಗಳ ನಿರ್ಮಾಣಕ್ಕೆ ಸರ್ವೆ ನಡೆಸಿದ್ದು 64 ಟವರ್ಗಳು ಕಂದಾಯ ಜಾಗದಲ್ಲಿವೆ. 45 ಟವರ್ ಅರಣ್ಯ ವ್ಯಾಪ್ತಿಯಲ್ಲಿ ಬರುತ್ತಿವೆ. 5 ಕಡೆ ಕಾಮಗಾರಿ ಆರಂಭಗೊಂಡಿದೆ.
ನೆಟ್ವರ್ಕ್ ಪ್ರಾಬ್ಲಮ್: ಅಧಿಕಾರಿಗೆ ಮುತ್ತಿಗೆ
( Sagara ) ಸಾಗರ ತಾಲ್ಲೂಕು ಬ್ಯಾಕೋಡು ನಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಇಲ್ಲದೆ ಇದ್ದುದ್ದರಿಂದ ಗ್ರಾಮಸ್ಥರು ಕಳೆದ ಶುಕ್ರವಾರ ಬಿಎಸ್ಎನ್ಎಲ್ ನ ಮೂವರು ನೌಕರರಿಗೆ ದಿಬ್ಬಂಧನ ಹಾಕಿದ್ದರು. ಈ ಭಾಗದಲ್ಲಿ ವಿದ್ಯುತ್ ಇದ್ದರೂ ಬಿಎಸ್ಎನ್ಎಲ್ ನೆಟ್ವರ್ಕ್ ಕಾರ್ಯನಿರ್ವಹಿಸುತ್ತಿರಲಿಲ್ಲ. ಸುಳ್ಳಳ್ಳಿ ನಾಡಕಚೇರಿ, ಸ್ಥಳೀಯ ಸೊಸೈಟಿ, ಆಸ್ಪತ್ರೆ ಇತರೆಡೆಗಳಲ್ಲಿ ಯಾವುದೇ ಕೆಲಸ ಆಗುತ್ತಿರಲಿಲ್ಲ. ಅಲ್ಲದೆ ರಾಜ್ಯ ಸರ್ಕಾರದ ಮಹಾತ್ವಕಾಂಕ್ಷಿ ಗೃಹಲಕ್ಷ್ಮೀ ಯೋಜನೆಗೂ ನೋಂದಣಿ ಮಾಡಲು ಆಗುತ್ತಿರಲಿಲ್ಲ ಎಂದು ನಾಗರಿಕರು ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ : ಅಡಿಕೆ ದರ ಎಷ್ಟಿದೆ…ಹೆಚ್ಚಾಯ್ತಾ..? ಕಡಿಮೆ ಆಯ್ತಾ?
HOW TO APPLY : NEET-UG COUNSELLING 2023