ವಿದೇಶಿ ಅಡಿಕೆ ಬರೋದ್ರಿಂದ ತೊಂದರೆ ಇಲ್ಲ
– ರಾಜ್ಯದ ಅಡಿಕೆ ಬೆಳೆಗಾರರು ಹೆದರುವ ಅವಶ್ಯಕತೆ ಇಲ್ಲ
– ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರ ಅಭಯ
NAMMUR EXPRESS NEWS
ಶಿವಮೊಗ್ಗ: ವಿದೇಶಿ ಅಡಿಕೆ ಭಾರತಕ್ಕೆ ಬರುವುದರಿಂದ ಯಾವುದೇ ತೊಂದರೆ ಇಲ್ಲ. ವಿದೇಶದಿಂದ ಆಮದು ಆಗುವ ಅಡಿಕೆಯಿಂದ ಸ್ಥಳೀಯ ಬೆಳೆಗಾರರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಯ ನೀಡಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡಿಕೆ ಧಾರಣೆ ಎಂದಿಗೂ ಕುಸಿಯುವುದಿಲ್ಲ. ಕೇಂದ್ರ ಸರ್ಕಾರದ ಕಠಿಣ ನಿಲುವಿನಿಂದಾಗಿ ಅಡಿಕೆ ಧಾರಣೆ 50 ಸಾವಿರ ರೂ.ತನಕ ತಲುಪಿದೆ. ಅಡಿಕೆ ಧಾರಣೆ ಕಡಿಮೆಯಾಗಲಿದೆ ಎಂದು ಕೆಲವರು ಪ್ರಚೋದನೆ ನೀಡುತ್ತಿದ್ದಾರೆ. ಇದರಿಂದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಭಾರತದ ಒಟ್ಟು ಉತ್ಪಾದನೆಯ ಶೇ.2ರಷ್ಟು ಅಡಿಕೆ ಮಾತ್ರ ಆಮದು ಮಾಡಿಕೊಳ್ಳಲಾಗುತ್ತಿದೆ. 2004 ರಿಂದ 2014ರವರೆಗೆ ಯುಪಿಎ ಸರ್ಕಾರ ಇದ್ದಾಗ ಹೊರದೇಶದಿಂದ ಭಾರತಕ್ಕೆ ಆಮದು ಆಗುವ ಅಡಿಕೆಗೆ ಪ್ರತಿ ಟನ್ಗೆ 15 ಸಾವಿರ ರೂ. ಆಮದು ದರವಿತ್ತು. ನರೇಂದ್ರ ಮೋದಿ ಅವರ ಸರ್ಕಾರ ರಚನೆಯಾದ ನಂತರ 2014 ರಿಂದ 2020ರವರಗೆ ಆಮದು ದರ ಪ್ರತಿ ಟನ್ಗೆ 25,500 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಈ ಹಿಂದೆ ನಾನು, ಆರಗ ಜ್ಞಾನೇಂದ್ರ ಮತ್ತು ಹರತಾಳು ಹಾಲಪ್ಪ ಅವರು ದೆಹಲಿಗೆ ಭೇಟಿ ನೀಡಿ ಆಮದು ದರ ಹೆಚ್ಚಳಕ್ಕೆ ಮನವಿ ಮಾಡಿದ್ದೆವು. ಆ ಬಳಿಕ ಪ್ರತಿ ಟನ್ ಆಮದು ಅಡಿಕೆ ದರ 35 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ದೇಶದಲ್ಲಿ ಈ ವರ್ಷ 15.63 ಲಕ್ಷ ಮೆಟ್ರಿಕ್ ಟನ್ ಅಡಿಕೆ ಉತ್ಪಾದನೆಯಾಗಿದೆ. ಈ ವರ್ಷ 17 ಸಾವಿರ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ನಮ್ಮ ದೇಶದಲ್ಲಿ ಉತ್ಪಾದನೆ ಆಗುವ ಅಡಿಕೆಯ ಶೇ.2ರಷ್ಟು ಮಾತ್ರ ಆಮದು ಆಗುತ್ತಿದೆ. ಸಾರ್ಕ್ ದೇಶಗಳ ಒಪ್ಪಂದದ ಪ್ರಕಾರ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂದರು. ಭೂತಾನ್ ದೇಶದಿಂದ ಅಡಿಕೆಯನ್ನು ಹಡಗುಗಳ ಮೂಲಕ ರವಾನಿಸಬೇಕು ಎಂದು ಷರತ್ತು ವಿಧಿಸಲಾಗಿದೆ. ಭೂತಾನ್ ದೇಶಕ್ಕೆ ಸಮುದ್ರ ಮಾರ್ಗವಿಲ್ಲ. ಬಾಂಗ್ಲಾದೇಶದಿಂದ ಹಡಗುಗಳ ಮೂಲಕ ಅಡಿಕೆ ರವಾನಿಸಿಬೇಕು. ಇದು ಭುತಾನ್ ದೇಶದ ಬೆಳೆಗಾರರಿಗೆ ಹೊರೆಯಾಗಲಿದೆ ಎಂದು ತಿಳಿಸಿದರು. ಮಾಜಿ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಅಣ್ಣಪ್ಪ ಇತರರು ಇದ್ದರು.