ಶಿವಮೊಗ್ಗಕ್ಕೆ ನಂಬರ್ 1 ಸ್ಥಾನ ಸಿಗುತ್ತೆ!
– ತೀರ್ಥಹಳ್ಳಿಗೆ ನೂರಾರು ಕೋಟಿ ಅನುದಾನ
– ನ. 26ರಿಂದ ಮೂರು ರಾಜ್ಯಕ್ಕೆ ವಿಮಾನ ಹಾರಾಟ
– ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿ: ಬಿ.ವೈ.ರಾಘವೇಂದ್ರ
NAMMUR EXPRESS NEWS
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ದೂರದೃಷ್ಟಿಯ ಪ್ರತಿಫಲವಾಗಿ ದೇಶದ ಗ್ರಾಮೀಣ ರಸ್ತೆಗಳು ಕ್ರಾಂತಿಕಾರಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ನರೇಂದ್ರ ಮೋದಿ ಆಡಳಿತ ವೈಖರಿಯಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದ್ದು ಶಿವಮೊಗ್ಗ ಭಾರತ ಭೂಪಟದಲ್ಲಿ ನಂಬರ್ 1 ಸ್ಥಾನ ಪಡೆದುಕೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 3.96 ಕೋಟಿ ವೆಚ್ಚದ ಮುಂಡವಳ್ಳಿ-ಮೃಗಾವಧೆ ಸಂಪರ್ಕದ ನೇರಲುಮನೆ ಸೇತುವೆ ಕಾಮಗಾರಿಗೆ ಗುದ್ದಲಿಪೂಜೆ ನಡೆಸಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 200 ಕೋಟಿ ರೂಪಾಯಿ ಅನುದಾನ ಮಂಜೂರಾಗಿದೆ. ಪ್ರಥಮ ಹಂತವಾಗಿ 112 ಕೋಟಿ ರೂಪಾಯಿ ವೆಚ್ಚದ 140 ಕಿ.ಮೀ., ದ್ವಿತೀಯ ಹಂತದಲ್ಲಿ 43 ಕೋಟಿ ರೂಪಾಯಿ ವೆಚ್ಚದಲ್ಲಿ 48 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳು ಮಂಜೂರಾಗಿದೆ. ಇದೀಗ 12.21 ಕೋಟಿ ರೂಪಾಯಿ ವೆಚ್ಚದಲ್ಲಿ ಶಿರುಗೊಳ್ಳಿ-ಹೆದ್ದಾರಿಪುರ ಸೇತುವೆ, ಸಾಗರ ಹಾಗೂ ಶಿವಮೊಗ್ಗ ಗ್ರಾಮಾಂತರ ರಸ್ತೆಗಳು ಅಭಿವೃದ್ಧಿ ಹೊಂದಲಿವೆ ಎಂದು ತಿಳಿಸಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಾಜಿ ಶಾಸಕರು ಆಗುಂಬೆ ಘಾಟಿ ಅಭಿವೃದ್ಧಿಗೆ 300 ಕೋಟಿ ಮಂಜೂರು ಮಾಡಿಸಿದ್ದೇನೆ ಎಂದು ಪ್ರಚಾರ ಪಡೆದಿದ್ದರು. ಅಭಿವೃದ್ಧಿ ಕೇವಲ ಮಾತಿಗೆ ಸೀಮಿತವಾಗದೆ ಕಾರ್ಯರೂಪಕ್ಕೆ ಬರಬೇಕು. ಸಂಸದರ ಪರಿಶ್ರಮದಿಂದ ನೆರಲುಮನೆ ಗ್ರಾಮದ ಸಮಸ್ಯೆ ಮುಕ್ತವಾಗಲಿದೆ. ಹಳ್ಳಿ ಹಳ್ಳಿಗೂ ರಸ್ತೆ, ಸಾರಿಗೆ, ಮೂಲಭೂತ ಸೌಕರ್ಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗುತ್ತಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಶೇಡ್ಗಾರು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಆಶಾ, ಹೆದ್ದೂರು ಗ್ರಾ.ಪಂ. ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ಸುಚಲಾ, ಪ್ರಮುಖರಾದ ಹೆದ್ದೂರು ನವೀನ್, ಆರ್. ಮದನ್, ಬೇಗುವಳ್ಳಿ ಸತೀಶ್, ಬೇಗುವಳ್ಳಿ ಕವಿರಾಜ್, ಅಶೋಕ್ ಮೂರ್ತಿ, ಬಾಳೇಬೈಲು ರಾಘವೇಂದ್ರ ಇದ್ದರು.
ಮೂರು ರಾಜ್ಯಕ್ಕೆ ಶೀಘ್ರದಲ್ಲಿ ವಿಮಾನ ಹಾರಾಟ
ಶಿವಮೊಗ್ಗ ವಿಮಾನ ನಿಲ್ದಾಣದ ರಾತ್ರಿ ವಿಮಾನ ಹಾರಾಟದ ತಾಂತ್ರಿಕ ಸಮಸ್ಯೆ ಬಗೆಹರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಶುಕ್ರವಾರ ಸಚಿವ ಎಂ.ಬಿ.ಪಾಟೀಲ್ ಭೇಟಿ ಮಾಡಲಿದ್ದೇನೆ. ಜಿಲ್ಲೆಗೆ ಕೈಗಾರಿಕೋದ್ಯಮ ತರುವ ಪ್ರಯತ್ನ ಕೂಡ ನಡೆಯುತ್ತಿದೆ. ನವೆಂಬರ್ 21 ರಿಂದ ಉಡಾನ್ ಯೋಜನೆಯಡಿ ಹೈದರಾಬಾದ್, ಗೋವಾ, ತಿರುಪತಿ ವಿಮಾನ ಹಾರಾಟ ಆರಂಭಗೊಳ್ಳಲಿದೆ ಎಂದು ಸಂಸದರು ಮಾಹಿತಿ ನೀಡಿದರು. ಡಿಸೆಂಬರ್ ಅಂತ್ಯದ ವೇಳೆಗೆ ಮುಂಬೈ, ದೆಹಲಿಗೆ ವಿಮಾನ ಸೌಲಭ್ಯ ಸಿಗಲಿದೆ ಎಂದರು. ತಾಲ್ಲೂಕಿಗೆ 41 ಕೋಟಿ ವೆಚ್ಚದಲ್ಲಿ 108 ಸಮುದಾಯ ಭವನ ಮಂಜೂರಾಗಿದೆ. 49 ಬಳಕೆಯಲ್ಲಿದ್ದು 29 ಭವನಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಶೀಘ್ರ ಎಲ್ಲವೂ ಜನರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.