ಪಾರ್ಕಲ್ಲೇ ಆತ್ಮಹತ್ಯೆ ಯತ್ನ: ರಕ್ಷಿಸಿದ ಪೊಲೀಸರು!
– ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ಶವವಾಗಿ ಪತ್ತೆ
– ಶಿವಮೊಗ್ಗ: 655 ಮಂದಿಗೆ ಎಸ್. ಎಂ.ಎಸ್ ಮೂಲಕ ನೋಟಿಸ್!
– ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಮತ್ತೆ ಶುರು
NAMMUR EXPRESS NEWS
ಗಾಜಿನ ಚೂರಿನಿಂದ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಗಸ್ತಿನಲ್ಲಿದ್ದ ಇ.ಆರ್.ಎಸ್.ಎಸ್ ವಾಹನದ ಸಿಬ್ಬಂದಿಗಳಿಬ್ಬರು ರಕ್ಷಿಸಿ, ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ ಘಟನೆ ಶಿವಮೊಗ್ಗ ನಗರದಲ್ಲಿ ನಡೆದಿದೆ. 17 ವರ್ಷ ವಯೋಮಾನದ ಯುವತಿಯೇ ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದಾರೆ. ವಿನೋಬನಗರ ಪೊಲೀಸ್ ಠಾಣೆ ಪೇದೆ ರಾಘವೇಂದ್ರ ಹಾಗೂ ವಾಹನ ಚಾಲಕ ಎ.ಹೆಚ್.ಸಿ. ಚನ್ನಕೇಶವ ಸಕಾಲದಲ್ಲಿ ನೆರವಾದ ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಸಿಬ್ಬಂದಿಗಳು ಇ.ಆರ್.ಎಸ್.ಎಸ್ ವಾಹನದಲ್ಲಿ ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಮಧ್ಯಾಹ್ನ ಗಸ್ತಿನಲ್ಲಿದ್ದಾಗ, ಫ್ರೀಡಂ ಪಾರ್ಕ್ ನಲ್ಲಿ ಯುವತಿಯೋರ್ವಳು ತನ್ನ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿರುವುದನ್ನು ಗಮನಿಸಿದ್ದಾರೆ. ತಕ್ಷಣವೇ ಯುವತಿಯನ್ನು ವಾಹನದಲ್ಲಿಯೇ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಜೀವ ರಕ್ಷಣೆ ಮಾಡಿದ್ದಾರೆ. ಸಿಬ್ಬಂದಿಗಳ ಸಕಾಲಿಕ ನೆರವಿಹಸ್ತಕ್ಕೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಅಭಿನಂದಿಸಿದ್ದಾರೆ.
ಸೆಲ್ಫಿ ತೆಗೆಯಲು ಹೋಗಿದ್ದ ಯುವಕ ಶವವಾಗಿ ಪತ್ತೆ
ಸೆಲ್ಫಿ ತೆಗೆಯಲು ಶಿವಮೊಗ್ಗ ಗಾಜನೂರಿನ ಪವರ್ ಹೌಸ್ ಬಳಿ ನೀರು ಪಾಲಾಗಿದ್ದ ಮಿಳಘಟ್ಟದ ಯುವಕ ಹರೀಶ 18 ದಿನಗಳ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಗಾಜನೂರು ಡ್ಯಾಂನ ಪವರ್ ಹೌಸ್ ಬಳಿ ದೊಡ್ಡ ಬಂಡೆಯ ಬಳಿ ನೀರುಪಾಲಾಗಿದ್ದ ಯುವಕ ಹರೀಶ್ ಮಧ್ಯಾಹ್ನ ಶವವಾಗಿ ಪತ್ತೆಯಾಗಿದ್ದಾನೆ. ಆ.10 ರಂದು ಗುರುವಾರ ಸಂಜೆ ಮಿಳಘಟ್ಟದ ಹರೀಶ್ ತನ್ನ ಸ್ನೇಹಿತರೊಂದಿಗೆ ಗಾಜನೂರಿನ ತುಂಗ ಜಲಾಶಯದ ಪವರ್ ಹೌಸ್ ಬಳಿ ತೆರಳಿದಾಗ ಸೆಲ್ಫಿ ತೆಗೆಯಲು ಮುಂದಾದಾಗ ನದಿಗೆ ಬಿದ್ದಿದ್ದನು. ಆದರೆ ಆತನ ಕುಟುಂಬ ನೀರುಪಾಲಾಗಿರುವ ಹರೀಶ್ ಸಾವನ್ನ ಕೊಲೆ ಎಂದು ಆರೋಪಿಸಿ ಆತನ ಜೊತೆ ಬಂದಿದ್ದ ಸ್ನೇಹಿತರ ವಿರುದ್ಧ ಶಂಕೆ ವ್ಯಕ್ತಪಡಿಸಿದ್ದರು. 26 ವರ್ಷದ ಯುವಕ ಹರೀಶ್ ಸ್ನೇಹಿತರೊಂದಿಗೆ ತೆರಳಿದಾಗ ಮದ್ಯ ಸೇವಿಸಿ ಸೆಲ್ಫಿಗೆ ಇಳಿದಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಘಟನೆ ನಡೆದ ವಿಷಯವನ್ನ ಆತನ ಸ್ನೇಹಿತರೇ ತುಂಗನಗರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದರು. ಹೊಸಹೊನ್ನಾಪುರ ಮತ್ತು ಮತ್ತೂರು ಸೇತುವೆ ಬಳಿ ನಲ್ಲಿ ಹರೀಶನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಶಿವಮೊಗ್ಗ: 655 ಮಂದಿಗೆ ಎಸ್. ಎಂ.ಎಸ್ ಮೂಲಕ ನೋಟಿಸ್!
ಸಂಚಾರ ನಿಯಮ ಪಾಲಿಸಿದೆ ಅಡ್ಡಾದಿಡ್ಡಿ ವಾಹನ ಚಲಾಯಿಸಿದ 655 ವಾಹನ ಮಾಲೀಕರಿಗೆ ಮೊದಲ ದಿನ ಎಸ್ಎಂಎಸ್ ಮೂಲಕ ನೊಟೀಸ್ ತಲುಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಶಿವಮೊಗ್ಗ ನಗರದ ವಿವಿಧೆಡೆ ಅಳವಡಿಸಿರುವ ಸ್ಮಾರ್ಟ್ ಕ್ಯಾಮರಾಗಳನ್ನು ಬಳಸಿ ಅಡ್ಡಾದಿಡ್ಡಿ ವಾಹನ ಚಲಾಯಿಸುವವರಿಗೆ ನೊಟೀಸ್ ಜಾರಿ ಮಾಡುವ ವ್ಯವಸ್ಥೆ ಆ.28ರಿಂದ ಶಿವಮೊಗ್ಗ ನಗರದಲ್ಲಿ ಜಾರಿಗೆ ಬಂದಿದೆ. ಮೊದಲ ದಿನ ವಿವಿಧ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ನೊಟೀಸ್ ಕಳುಹಿಸಲಾಗಿದೆ. ಸಿಗ್ನಲ್ ಜಂಪ್ ಮಾಡಿದ 613 ಪ್ರಕರಣ, ಅತಿ ವೇಗ 63 ಪ್ರಕರಣ, ಹೆಲ್ಮೆಟ್ ರಹಿತ ಚಾಲನೆ 4 ಪ್ರಕರಣ, ಸೀಟ್ ಬೆಲ್ಟ್ ಧರಿಸದೆ ಕಾರು ಚಾಲನೆ 1 ಪ್ರಕರಣ, ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ 1 ಪ್ರಕರಣವನ್ನು ಕ್ಯಾಮರಾದಲ್ಲಿ ಪತ್ತೆ ಮಾಡಲಾಗಿದೆ.
ಭದ್ರಾವತಿ: ವಿಐಎಸ್ಎಲ್ ಕಾರ್ಖಾನೆ ಮತ್ತೆ ಶುರು
ಎನ್ಆರ್ಎಂ ಘಟಕಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಯಿತು. ಸೋಮವಾರದಿಂದ ಘಟಕದಲ್ಲಿ ಕೆಲಸ ಆರಂಭವಾಗಿದೆ. ಅಧಿಕಾರಿಗಳು, ಕಾರ್ಮಿಕರು ಕಾರ್ಖಾನೆಯ ಎನ್ಆರ್ಎಂ ಘಟಕದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಕೆಲಸ ಆರಂಭ ಮಾಡಲಾಯಿತು. ಕಳೆದ ವಾರ ಬಿಲಾಯ್ ಘಟಕದಿಂದ ಕಾರ್ಖಾನೆಗೆ 19 ವ್ಯಾಗನ್ ಬ್ಲೂಮ್ಗಳನ್ನು ಸರಬರಾಜು ಮಾಡಲಾಗಿತ್ತು. ಪೂಜೆ ವೇಳೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಚಾಂದ್ವಾನಿ, ಕಾರ್ಮಿಕರು ಹಾಜರಿದ್ದರು. ಸುರಕ್ಷಿತವಾಗಿ ಕೆಲಸ ನಡೆಸುವಂತೆ ಕಾರ್ಮಿಕರಿಗೆ ಚಾಂದ್ವಾನಿ ಸೂಚಿಸಿದರು.