ಕಾಡು ಪ್ರಾಣಿ ಅಡ್ಡ ಬಂದು ಓರ್ವನ ಜೀವ ತೆಗೆಯಿತು!
– ಶಿಕಾರಿಪುರದಲ್ಲಿ ನಡೆದ ಅಪಘಾತ: ಓರ್ವನ ದುರ್ಮರಣ
– ಸಾಗರ: ಪೈಪ್ ಕಳ್ಳತನ ಮಾಡುತ್ತಿದ್ದವ ಅರೆಸ್ಟ್!
– ಹೊಸನಗರ: ದನ ಹುಡುಕಲು ಹೋದ ವೃದ್ದೆ ನಾಪತ್ತೆ
NAMMUR EXPRESS NEWS
ಶಿಕಾರಿಪುರ : ಬೈಕ್ ಗೆ ಅಡ್ಡಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ಭೀಕರ ಅಪಘಾತವಾಗಿದ್ದು, ಗಂಡ ಸ್ಥಳದಲ್ಲೇ ಸಾವನಪ್ಪಿದ್ದು, ಪತ್ನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಿಕಾರಿಪುರದಲ್ಲಿ ನಡೆದಿದೆ. ಮೃತ ದುರ್ದೈವಿ ತಾಲೂಕಿನ ಇಟ್ಟಿಗೆಹಳ್ಳಿ ಗ್ರಾಮದ ಗಣೇಶ್(32) ಎಂದು ಗುರುತಿಸಲಾಗಿದೆ. ಯರೆಕಟ್ಟೆ ಗ್ರಾಮದ ಬಳಿ ಈ ಘಟನೆ ನಡೆದಿದ್ದು ಅಪಘಾತದ ರಭಸಕ್ಕೆ ಗಂಡ ಸ್ಥಳದಲ್ಲೇ ಸಾವನಪ್ಪಿದ್ದು, ಪತ್ನಿಗೆ ಗಂಭೀರ ಗಾಯವಾಗಿದೆ. ಪತ್ನಿ ರಂಜಿತಾರನ್ನು ಕೆಲಸಕ್ಕೆ ಬಿಡಲು ಕರೆದೊಯ್ಯುತ್ತಿದ್ದಾಗ, ಯರೆಕಟ್ಟೆ ಗ್ರಾಮದ ಭೂತಪ್ಪನ ಕಟ್ಟೆ ಬಳಿ ಬರುವಾಗ ಬೈಕ್ ಗೆ ಅಡ್ಡ ಬಂದ ಕಾಡುಪ್ರಾಣಿ ತಪ್ಪಿಸಲು ಹೋಗಿ, ರಸ್ತೆ ಬದಿಯ ಕಟ್ಟೆಗೆ ಬೈಕ್ ಢಿಕ್ಕಿಯಾಗಿದೆ. ಪತಿ ಗಣೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದರಾರೆ. ರಂಜಿತಾ (27) ಕಾಲು- ತಲೆಗೆ ಗಂಭೀರ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೈಪ್ ಕದಿಯುತ್ತಿದ್ದವ ಸಿಕ್ಕಿ ಬಿದ್ದ!
ಸಾಗರ ತಾಲೂಕಿನ ಹೆಗ್ಗೋಡು ಗ್ರಾಮದ ಕೇಡಲಸರ ಸಂಸ್ಕೃತ ಶಾಲಾ ಆವರಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಳವಡಿಸಲು ಸಂಗ್ರಹಿಸಿಟ್ಟಿದ್ದ ಪೈಪ್ಗಳನ್ನು ಅಪಹರಿಸಿದ್ದ ಕಳ್ಳನನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿ ವೇಗರಾಜ್ ಹೊಸೂರು ಪೊಲೀಸರು ಸೋಮವಾರ ಬಂಧಿಸಿದ್ದು, 1.15 ಲಕ್ಷ ರೂ. ಬೆಲೆಯ ಒಂದು ಸಾವಿರ ಮೀಟರ್ ಉದ್ದದ 5 ಪೈಪ್ ಬಂಡಲ್ಗಳು ಮತ್ತು ಕೃತ್ಯಕ್ಕೆ ಬಳಸಿದ 1.50 ಲಕ್ಷ ರೂ. ಬೆಲೆಯ ಟಾಟಾ ಸುಪರ್ ಎಸ್ ಮಿಂಟ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಅ. 22ರಿಂದ 25 ರ ಮಧ್ಯದ ಅವಧಿಯಲ್ಲಿ ನಡೆದ ಕಳ್ಳತನದ ಪ್ರಕರಣ ಸಂಬಂಧ ಸಾಗರದ ಡಿವೈಎಸ್ಪಿ ಗೋಪಾಲಕೃಷ್ಣ ನಾಯ್ಕ ಟಿ. ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು.
ಚಾಲಕ ವೃತ್ತಿಯಲ್ಲಿದ್ದ ವೇಗರಾಜ್ ಮೂವರು ಇತರ ಆರೋಪಿಗಳು ಸೇರಿ ಸೇರಿ ಕಳ್ಳತನ ಮಾಡಿ, ಮಾಲನ್ನು ತಾಲೂಕಿನ ಆವಿನಹಳ್ಳಿ ಹೋಬಳಿಯ ನಿರ್ಜನ ಪ್ರದೇಶ ಒಂದರಲ್ಲಿ ಬಚ್ಚಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದರು. ಇನ್ನೂ ಮೂವರು ಈ ಕಳ್ಳತನದಲ್ಲಿಭಾಗಿಯಾಗಿದ್ದಾರೆನ್ನಲಾಗಿದ್ದು ಅವರ ಬಂಧನ ಇನ್ನಷ್ಟೇ ಆಗಬೇಕಿದೆ.
ದನ ಕಾಯಲು ಹೋಗಿದ್ದ ವೃದ್ಧೆ ನಾಪತ್ತೆ: ಶೋಧ
ತೋಟಕ್ಕೆ ನುಗ್ಗಿದ್ದ ದನಗಳನ್ನ ಓಡಿಸಲು ಹೋಗಿದ್ದ ಅಜ್ಜಿಯೊಬ್ಬರು ನಾಪತ್ತೆಯಾಗಿರುವ ಘಟನೆ ಹೊಸನಗರದಲ್ಲಿ ನಡೆದಿದೆ. ಅವರ ಹುಡುಕಾಟಕ್ಕಾಗಿ ಶ್ವಾನದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಭಾನುವಾರ ಮಧ್ಯಾಹ್ನ ಕರಿಮನೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಸಾದಗಲ್ ಗ್ರಾಮದಲ್ಲಿ ಮನೆಯ ಪಕ್ಕದಲ್ಲೆ ಇರುವ ತೋಟಕ್ಕೆ, ಇಲ್ಲಿನ ಚನ್ನಪ್ಪ ಗೌಡ ಅವರ ಪತ್ನಿ ಶಾರದಮ್ಮ (85)ರವರು ಹೋಗಿದ್ದಾರೆ. ದನಗಳು ಬಂದಿರಬಹುದೆಂದು ನೋಡಿಕೊಂಡು ಬರುವುದಾಗಿ ಹೇಳಿ ಹೋಗಿದ್ದ ಶಾರದಮ್ಮ ಬಳಿಕ ಮನೆಗೆ ಬರಲಿಲ್ಲ. ಅವರ ಜೊತೆಗೆ ಹೋಗಿದ್ದ ಶ್ವಾನ ಸಹ ಕಾಣಿಸಿರಲಿಲ್ಲ. ಆದರೆ ಸೋಮವಾರ ನಾಯಿಯು ಮನೆಗೆ ವಾಪಸ್ ಬಂದಿದೆ. ಆದರೆ ಶಾರದಮ್ಮರವರ ಸುಳಿವು ಸಿಕ್ಕಿಲ್ಲ. ಹೀಗಾಗಿ ಆತಂಕಗೊಂಡ ಸ್ಥಳೀಯರು ತೋಟ, ಗದ್ದೆ, ಹಳ್ಳ, ಕೊಳ್ಳ, ಕಾಡಲ್ಲಿ ಹುಡುಕಾಡಿದ್ದಾರೆ. ಎಲ್ಲಿಯು ಶಾರದಮ್ಮ ಪತ್ತೆಯಾಗಿಲ್ಲ.ಹೀಗಾಗಿ ಇಂದು ನಗರ ಠಾಣೆ ಪಿಎಸ್ಐ ರಮೇಶ್ ಪಿ.ಎಸ್ ನೇತೃತ್ಬದಲ್ಲಿ ಶ್ವಾನದಳ ಶೋಧಕಾರ್ಯಾಚರಣೆ ನಡೆಯುತ್ತಿದೆ.