ಶಿಕಾರಿಪುರ ಮರ್ಡರ್ ಕೇಸ್: ಏಳು ಮಂದಿ ಅರೆಸ್ಟ್
– ಸೊರಬ: ದೇವಸ್ಥಾನದ ದಿನಗೂಲಿ ನೌಕರ ಆತ್ಮಹತ್ಯೆ
– ಶಿವಮೊಗ್ಗದಲ್ಲಿ ಗಾಂಜಾ ಗಲಾಟೆ!: ಹಲವರ ಬಂಧನ?
– ಹೊಸನಗರ: ತಮ್ಮಡಿಕೊಪ್ಪ ಗ್ರಾಮದಲ್ಲಿ ಶಾಲೆಗೆ ಬೀಗ
– ಸಾಗರ: ಗಾಂಜಾ ವ್ಯಸನಿಗಳ ಬಂಧನ
– ಭದ್ರಾವತಿ: ಹೊರಗುತ್ತಿಗೆ ನೌಕರರ ಪ್ರತಿಭಟನೆ
NAMMUR EXPRESS NEWS
ಶಿಕಾರಿಪುರ ತಾಲ್ಲೂಕಿನಲ್ಲಿ ನಡೆದಿದ್ದ ಈದ್ ಮಿಲಾದ್ ಕಮಿಟಿ ವಿಚಾರದ ಗಲಾಟೆಯಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಾಷಾ, 42 ವರ್ಷ, ರೋಷನ್, 19 ವರ್ಷ, ಸದಾಂ ಹುಸೇನ್, 31 ವರ್ಷ, ಸಲ್ಮಾನ್ @ ಸಲೀಂ 22 ವರ್ಷ,ಇಮಾನ್, 30 ವರ್ಷ, ಆರಿಫ್ ಜಾನ್, 33 ವರ್ಷ, ಎಸ್ಎನ್ ಬಾಬು ಬಂಧಿತರು. ಈದ್ ಮಿಲಾದ್ ಕಮಿಟಿಯಲ್ಲಿ ಪ್ರತಿವರ್ಷ ಶಿಕಾರಿಪುರದ ಗಗ್ರಿ ಏರಿಯಾದವರು ಆಯ್ಕೆಯಾಗುತ್ತಿದ್ದರು.ಈ ಸಲ ಸೊಸೈಟಿ ಕೇರಿಯವರು ಅಧ್ಯಕ್ಷರಾಗಬೇಕು ಎಂಬ ವಿಚಾರಕ್ಕೆ ಗಲಾಟೆಯಾಗಿದೆ. ಈ ವಿಚಾರದಲ್ಲಿಯೇ ಜಾಫರ್ ಹತ್ಯೆಯಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪುರಸಭೆಯ ಸದಸ್ಯ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಆರೋಪಿಗಳನ್ನ ಬಂಧಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಚಂದ್ರಗುತ್ತಿ ದೇವಸ್ಥಾನದ ನೌಕರ ಆತ್ಮಹತ್ಯೆ
ಸೊರಬ ತಾಲೂಕಿನ ಚಂದ್ರಗುತ್ತಿಯಲ್ಲಿ ಶ್ರೀ ರೇಣುಕಾಂಬ ದೇವಸ್ಥಾನದ ದಿನಗೂಲಿ ನೌಕರನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ನಡೆದಿದೆ. ಚಂದ್ರಗುತ್ತಿ ಗ್ರಾಮದ ಗಣಪತಿ ತಾವರೆಹಳ್ಳಿ (40) ಮೃತ ನೌಕರ. ಗ್ರಾಮದ ಶ್ರೀ ರೇಣುಕಾಂಬ ದೇವಸ್ಥಾನದಲ್ಲಿ ದಿನಗೂಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಗಣಪತಿ ಅವರು ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಇದರಿಂದ ಬೇಸತ್ತು ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸೊರಬ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗದಲ್ಲಿ ಗಾಂಜಾ ಗಲಾಟೆ!
ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಯುವಕನೊಬ್ಬನ ಮೇಲೆ ಹಲ್ಲೆ ನಡೆಸಲಾಗಿದೆನಿನ್ನ ಹೆಸರಲ್ಲಿ ನಮ್ ಏರಿಯಾದಲ್ಲಿ ಗಾಂಜಾ ಮಾರುತ್ತೀಯಾ ಎಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿದೆ. ಆ.23ರಂದು ಶಿವಮೊಗ್ಗದ ಬಸ್ ನಿಲ್ದಾಣದಿಂದ ಬೈಪಾಸ್ ಕಡೆಗೆ ಬರುತ್ತಿದ್ದ ಯುವಕನೊಬ್ಬನನ್ನ ತಡೆದ ಆರೋಪಿಗಳು ಆತನ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಭರ್ಚಿಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಅಲ್ಲಿದ್ದವರು ಅಡ್ಡಬಂದು, ಆರೋಪಿಗಳಿಂದ ಯುವಕನನ್ನು ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ವಿಷಯ ತಿಳಿದ ದೊಡ್ಡಪೇಟೆ ಪೊಲೀಸರು ಗಾಯಾಳು ನೀಡಿದ ದೂರಿನನ್ವಯ ಕೇಸ್ ದಾಖಲಿಸಿಕೊಂಡಿದ್ದಾರೆ.
ಶಾಲೆಗೆ ಬೀಗ ಜಡಿದು ಪೋಷಕರ ಪ್ರತಿಭಟನೆ
ಮಕ್ಕಳಿಗೆ ಸಮರ್ಪಕವಾಗಿ ತರಗತಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪೋಷಕರು ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಹೊಸನಗರದ ತಮ್ಮಡಿಕೊಪ್ಪ ಗ್ರಾಮದಲ್ಲಿ ಶಾಲೆ ಮುಂದೆ ಪೋಷಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮುಖ್ಯ ಶಿಕ್ಷಕರು ಮನಸೋಯಿಚ್ಛೆ ಶಾಲೆ ಬರುತ್ತಿದ್ದಾರೆ. ಪ್ರತಿ ವಿಷಯಕ್ಕೆ ಒಬ್ಬರು ಶಿಕ್ಷಕರು ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಶಾಲೆಗೆ ಬೀಗ ಹಾಕಿ ಕಟ್ಟಡದ ಮುಂದೆ ಪ್ರತಿಭಟನೆ ನಡೆಸಲಾಯಿತು. ಮಕ್ಕಳು ಕೂಡ ಶಾಲೆಯಿಂದ ಹೊರಗೆ ಕುಳಿತಿದ್ದರು. ಸಮಸ್ಯೆ ಕುರಿತು ಹಲವು ಬಾರಿ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ಹಾಗಿದ್ದೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಾಗರ: ಗಾಂಜಾ ವ್ಯಸನಿಗಳ ಬಂಧನ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಅಬಕಾರಿ ಅಧಿಕಾರಿಗಳು ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಇಬ್ಬರು ಗಾಂಜಾ ವ್ಯಸನಿಗಳನ್ನೂ ಬಂಧಿಸಿದ್ದಾರೆ. ಅನುಮಾನದ ಮೇರೆಗೆ ಇಬ್ಬರನ್ನ ಸೆರೆ ಹಿಡಿದು ವೈದ್ಯಕೀಯ ಪರೀಕ್ಷೆ ನಡೆಸಿದಾಗ ಗಾಂಜಾ ಸೇವನೆ ಮಾಡಿರುವುದು ಧೃಡಪಟ್ಟಿದ್ದು, ಆರೋಪಿಗಳ ವಿರುದ್ಧ ಏನ್. ಡಿ. ಪಿ. ಎಸ್. ಕಾಯ್ದೆ 1985 ರ ಕಲಂ 27 (b) ರಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಭದ್ರಾವತಿ: ಹೊರಗುತ್ತಿಗೆ ನೌಕರರ ಪ್ರತಿಭಟನೆ
ಭದ್ರಾವತಿ ತಾಲೂಕು ಬಿ.ಆರ್ ಪಿ ಮೀನುಗಾರಿಕೆ ಇಲಾಖೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ 54 ನೌಕರರ ESI ಹಾಗೂ PF ಕಳೆದ 3 ವರ್ಷಗಳಿಂದ ನೀಡದೆ ಸತಾಯಿಸುತ್ತಿರುವ ಎಜೆನ್ಸಿ ವಿರುದ್ಧ ಕಾರ್ಮಿಕರು ಹೋರಾಟಕ್ಕೆ ಮುಂದಾಗಿದ್ದು ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ. ಯೂನಿಕ್ ಸೆಕ್ಯೂರಿಟಿ ಎಜೇನ್ಸಿ ದಾರರನ್ನು ಮೀನುಗಾರಿಕೆ ಇಲಾಖೆ ಕಛೇರಿಯಲ್ಲಿ ಕೂ ಡಿ ಹಾಕಿಕೊಂಡ ಹೊರಗುತ್ತಿಗೆ ನೌಕರರು, ESI ಹಾಗೂ PF ಹಣ ನಮ್ಮ ಖಾತೆಗೆ ಹಾಕುವವರೆಗೂ ಕಚೇರಿಯಿಂದ ಹೊರಹೋಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು. ಸಂಜೆವೇಳೆಗೆ ಸ್ಥಳಕ್ಕೆ ಬಂದ ಪೋಲಿಸ್ ಅಧಿಕಾರಿಗಳು ನೌಕರರ ಸಮಸ್ಯೆಗಳನ್ನು ಆಲಿಸಿದ ನಂತರ ಯೂನಿಕ್ ಸೆಕ್ಯೂರಿಟಿ ಎಜೇನ್ಸಿದಾರರಿಗೆ ನೌಕರರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಕಾಲಾವಕಾಶ ನೀಡಿದರು. ಆದ್ರೂ ಇಲಾಖೆ ಅಧಿಕಾರಿಗಳು ಮಾತ್ರ ಬಂದಿರಲಿಲ್ಲ.